ಅಂಕಣ

'ನನ್ನ ಪುತ್ರನಿಗೆ ಟಿಕೆಟ್​ ಕೈ ತಪ್ಪಿದ್ದಕ್ಕೆ ಬಿಎಸ್​ವೈ ಕಾರಣ': ಈಶ್ವರಪ್ಪ

ಬೆಂಗಳೂರು: ಮಗನಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕೆ ಯಡಿಯೂರಪ್ಪ ಅವರೇ ಕಾರಣ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಆರೋಪಿಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಯಡಿಯೂರಪ್ಪ ನನ್ನ ಪುತ್ರನಿಗೆ ಹಾವೇರಿಯಿಂದ ಟಿಕೆಟ್ ಕೊಡಿಸಿ, ಗೆಲುವಿಗಾಗಿ ಪ್ರಚಾರ ಮಾಡುವ ಆಶ್ವಾಸನೆ ನೀಡಿದ್ದರು. ಆದರೆ ಈಗ 'ವಂಚಿಸಿದ್ದಾರೆ' ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ಹಾವೇರಿ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಬುಧವಾರ ಹೆಸರಿಸಿದೆ . ಬೊಮ್ಮಾಯಿ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಿಗುವಂತೆ ಯಡಿಯೂರಪ್ಪ ನೋಡಿಕೊಂಡಿದ್ದಾರೆ. ಆದರೆ 'ನನ್ನ ಮಗನಿಗಲ್ಲ' ಎಂದು ಅವರು ಹೇಳಿದರು.

ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವಂತೆ ನಮ್ಮ ಹಿಂಬಾಲಕರು ಹಾಗೂ ಹಿತೈಷಿಗಳು ಒತ್ತಡ ಹೇರುತ್ತಿದ್ದು, ಶುಕ್ರವಾರ ಇಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಹಾಗೂ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಪಕ್ಷ ಮತ್ತೆ ಕಣಕ್ಕಿಳಿಸಿದೆ. ಆದರೆ ನಾನು ಕಳೆದ 40 ವರ್ಷಗಳಿಂದ ಬಿಜೆಪಿಯೊಂದಿಗೆ ನಂಟು ಹೊಂದಿದ್ದೇನೆ. ನಾನು ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗ ಎಂದು ಹೇಳಿದರು.