ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ನಡುವಿನ ವೈಷಮ್ಯ ತುಂಬ ಹಳೆಯದು. ಪಾಕಿಸ್ತಾನವು ವಿಶ್ವಸಂಸ್ಥೆಯ ಸದಸ್ಯತ್ವಕ್ಕೆ ಅರ್ಜಿ ಹಾಕಿದಾಗ ಅದನ್ನು ಸಾಮಾನ್ಯ ಸಭೆಯಲ್ಲಿ ಅಧಿಕೃತವಾಗಿ ವಿರೋಧಿಸಿದ ಒಂದೇ ಒಂದು ರಾಷ್ಟ್ರ ಅಫ್ಘಾನಿಸ್ತಾನ. ಅಫ್ಘನ್ನರು ಪಾಕಿಸ್ತಾನವನ್ನು ಯಾವ ಮಟ್ಟಕ್ಕೆ ಸಂಶಯಿಸಿದರು ಮತ್ತು ವಿರೋಧಿಸಿದರು ಎನ್ನುವುದಕ್ಕೆ ಇದು ಸಾಕ್ಷಿ.
ಇದಕ್ಕೆ ಉತ್ತರ ಆಗ್ನೇಯ ಏಷ್ಯಾದ ಪುಟ್ಟ ದೇಶ ವಿಯೆಟ್ನಾಂ ಜಗತ್ತಿಗೆ ಪರಿಚಯಿಸಿದ ಪಾಠದಲ್ಲಿ ದೊರೆಯುತ್ತದೆ. ಉತ್ತರದ ಚೀನೀಯರ ಆಕ್ರಮಣಗಳ ವಿರುದ್ಧ ವಿಯೆಟ್ನಾಮೀಯರು ಸುಮಾರು ಒಂದುಸಾವಿರ ವರ್ಷಗಳವರೆಗೆ ಕಾದಾಡಿದರು. ನಂತರದ ಒಂದುಸಾವಿರ ವರ್ಷಗಳು ಚೀನೀಯರು ತಮ್ಮ ಮೇಲೆ ಪೂರ್ಣವಾಗಿ ದಬ್ಬಾಳಿಕೆ ನಡೆಸದಂತೆ ಆಂತರಿಕ ಸ್ವಾಯತ್ತತೆಯನ್ನು ಕಾಪಾಡಿಕೊಂಡರು. ಅಂದರೆ ವಿಯೆಟ್ನಾಮೀಯರು ಮತ್ತು ಚೀನೀಯರ ವೈಮನಸ್ಯ ಎರಡುಸಾವಿರ ವರ್ಷಗಳಷ್ಟು ಹಳೆಯದು! ಆದರೆ ವಿಯೆಟ್ನಾಮೀ ನಾಯಕ ಹೊ ಚಿ ಮಿನ್ಹ್ ಕಮ್ಯೂನಿಸ್ಟ್ ಆದ ಕಾರಣ ಅವರು ಚೀನೀಯರಿಗೆ ಬಹಳ ಹತ್ತಿರ, ಮತ್ತವರು ಚೀನೀ ಕಮ್ಯೂನಿಸ್ಟರ ಸಹಾಯದಿಂದ ಇಡೀ ಅಗ್ನೇಯ ಏಷ್ಯಾವನ್ನು ಕೆಂಪಾಗಿಸಿಬಿಡುತ್ತಾರೆ ಎಂದು ಏಷ್ಯನ್ ಇತಿಹಾಸದ ಅರಿವಿಲ್ಲದ ಅಜ್ಞಾನಿ ಅಮೆರಿಕನ್ನರು ತಪ್ಪಾಗಿ ತಿಳಿದು ವಿಯೆಟ್ನಾಂ ಮೇಲೆ ಭೀಕರ ದಾಳಿಯೆಸಗಿದಾಗ ಬಡಪಾಯಿ ವಿಯೆಟ್ನಾಮೀಯರು ಸಹಾಯಕ್ಕಾಗಿ ಚೀನಾದ ಮೇಲೇ ಅವಲಂಬಿತರಾಗುವ ಒತ್ತಡಕ್ಕೊಳಗಾದರು. ಅಂದರೆ ಅಮೆರಿಕ ತನ್ನ ಮೂರ್ಖತನದಿಂದಾಗಿ ಇಬ್ಬರು ಐತಿಹಾಸಿಕ ಶತ್ರುಗಳನ್ನು ಒಂದುಗೂಡಿಸಿಬಿಟ್ಟಿತು! ಕೊನೆಗೂ ಅಮೆರಿಕನ್ನರು ಸೋಲು ಒಪ್ಪಿಕೊಂಡು 1973-75ರಲ್ಲಿ ಅಲ್ಲಿಂದ ಕಾಲ್ತೆಗೆದಾಗ ವಿಯೆಟ್ನಾಮೀಯರು ಮತ್ತು ಚೀನೀಯರ ನಡುವಿಯ ಹಳೆಯ ವೈಷಮ್ಯ ಮರುಕಳಿಸಿ ಮುಂದಿನ ನಾಲ್ಕು ವರ್ಷಗಳೊಳಗೆ ಒಂದು ಯುದ್ಧವನ್ನೇ ಮಾಡಿಬಿಟ್ಟವು!
ಅದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ನಡುವೆ ನಡೆಯುತ್ತಿದೆ. ರಂಗಸ್ಥಳ ಮತ್ತು ಪಾತ್ರಧಾರಿಗಳು ಬೇರೆ, ಆದರೆ ಚಿತ್ರಕಥೆ ಮಾತ್ರ ಅದೇ. ಇತಿಹಾಸವನ್ನು ನಾವು ಓದಬೇಕಾದ್ದು ಅದು ಕಲಿಸುವ ಇಂತಹ ಪಾಠಗಳಿಗಾಗಿ, ತಪ್ಪು ದಾರಿ ಹಿಡಿಯುವುದರಿಂದ ಬಚಾವಾಗುವ ವಿವೇಕಕ್ಕಾಗಿ. ಈ ಪಾಠದ ಮಹತ್ವ ಮತ್ತು ವಿಕೇಕದ ಅಗತ್ಯದ ಒಂದು ಸ್ಥೂಲ ಪರಿಚಯವನ್ನು ಎರಡು ಭಾಗಗಳ ಈ ಲೇಖನದಲ್ಲಿ ಮಾಡಿಕೊಳ್ಳಲು ಪ್ರಯತ್ನಿಸೋಣ.
ಇಂದಿನ ಅಫ್ಘಾನಿಸ್ತಾನ ಪಾಕಿಸ್ತಾನ ಗಡಿಯ ಆಚೀಚಿನ ಪಠಾಣ (ಪಖ್ತೂನ್) ಜನಾಂಗ ಮತ್ತು ಸಿಂಧೂ ಬಯಲಿನ ಭಾರತೀಯರಿಗೂ ಇರುವುದು ಪರಂಪರಾಗತ ವೈಷಮ್ಯ. ಅದರ ಹಿಂದಿದ್ದ ಕಾರಣ ಭಾರತೀಯರ ಸಂಪತ್ತಿನ ಮೇಲೆ ಪಖ್ತೂನಿಗಳಿಗಿದ್ದ ಕಣ್ಣು. ಹೀಗಾಗಿಯೇ ಈ ಎರಡು ಜನಾಂಗಗಳ ನಡುವೆ ಘರ್ಷಣೆ ಸಾಮಾನ್ಯವಾಗಿತ್ತು. ಈ ಘರ್ಷಣೆಗಳಲ್ಲಿ ಮೇಲುಗೈ ಸಾಧಿಸುತ್ತಿದ್ದವರು ಪಖ್ತೂನಿಗಳೇ. ಇದಕ್ಕೆ ಭೌಗೋಳಿಕ -ಆರ್ಥಿಕ ಕಾರಣಗಳಿವೆ.
ಪಖ್ತೂನಿಗಳೂ ಭಾರತೀಯರೂ ಮೂಲತಃ ಒಂದೇ ಜನಾಂಗಕ್ಕೆ ಸೇರಿದವರಾಗಿದ್ದರೂ ಸಿಂಧೂ ಬಯಲು ಒದಗಿಸುತ್ತಿದ್ದ ನಿರಂತರ ಹಾಗೂ ಅಗಾಧ ನೀರು ಮತ್ತು ಆಹಾರಗಳಿಂದಾಗಿ ಭಾರತೀಯರ ಬದುಕು ಸುಗಮವಾದ ಕಾರಣ ಕೆಲವೇ ತಲೆಮಾರುಗಳಲ್ಲಿ ಅವರು ತಮ್ಮ ಕ್ಷಾತ್ರಗುಣಗಳಲ್ಲಿ ಕ್ಷೀಣತೆಯನ್ನು ಕಂಡರು. ಆದರೆ ಬದುಕೊಂದು ನಿರಂತರ ಹೋರಾಟವಾಗಿದ್ದ ಪರ್ವತಮಯ ಪ್ರದೇಶದಲ್ಲುಳಿದ ಪಖ್ತೂನಿಗಳು ತಮ್ಮ ಕ್ಷಾತ್ರಗುಣವನ್ನು ವೃದ್ಧಿಸಿಕೊಳ್ಳುತ್ತಲೇ ಸಾಗಿದರು. ಅದು ಅವರಿಗೆ ಬದುಕಿ ಉಳಿಯಲು ಇದ್ದ ಒಂದೇ ಮಾರ್ಗ. ಅದೇ ಅವರಿಗೆ ಭಾರತೀಯರ ಜತೆಗಿನ ಘರ್ಷಣೆಗಳಲ್ಲಿ ಮೇಲುಗೈ ಒದಗಿಸುತ್ತಿತ್ತು. ದಕ್ಷಿಣದಲ್ಲಿ ಅರಬ್ಬರು ಸಿಂಧ್ ಮತ್ತು ದಕ್ಷಿಣ ಪಂಜಾಬ್ ಮೇಲೆ ರಾಜಕೀಯ ಮತ್ತು ಸೇನಾ ಹಿಡಿತ ಸ್ಥಾಪಿಸುವುದರಲ್ಲಿ ಎಂಟನೆಯ ಶತಮಾನದ ಮೊದಲ ಭಾಗದಲ್ಲೇ ಯಶಸ್ವಿಯಾದರೆ, ಒಂಬತ್ತನೆಯ ಶತಮಾನದಲ್ಲೇ ಮುಸ್ಲಿಮರಾಗಿಹೋದ ಹಿಂದೂಕುಶ್ ಪರ್ವತಗಳಾಚೆಗಿನ ಪಖ್ತೂನಿಗಳು ಉತ್ತರ ಪಂಜಾಬ್ನಲ್ಲಿ ಭದ್ರವಾಗಿ ಕಾಲೂರಲು ಹನ್ನೆರಡನೆಯ ಶತಮಾನದ ಅಂತ್ಯದವರೆಗೂ ಕಾಯಬೇಕಾಯಿತು. ಅವರನ್ನು ಮೂರು ಶತಮಾನಗಳವರೆಗೆ ತಡೆದು ನಿಲ್ಲಿಸಿದ್ದು ಹಿಂದೂಗಳಾಗಿಯೇ ಉಳಿದಿದ್ದ ಹಿಂದೂಕುಶ್ ಪರ್ವತಗಳ ದಕ್ಷಿಣದ ಪುರುಷಪುರ (ಪೆಷಾವರ್) ಪ್ರದೇಶದ ಪಖ್ತೂನಿಗಳು. ಅವರಿಬ್ಬರ ನಡುವಿನ ಸಂಘರ್ಷ ಸಮಾನಸ್ಕಂಧರ ನಡುವಿನ ಹಣಾಹಣಿಯಾಗಿತ್ತು. ಅಂತಿಮವಾಗಿ ಪುರುಷಪುರ ಪ್ರದೇಶದ ಹಿಂದೂಗಳು ಸೋತು ಹಿಂದೂಶಾಹಿ ಅಥವಾ ಬ್ರಾಹ್ಮಣ
ಶಾಹಿ ರಾಜ್ಯ ಅವನತಿ ಕಂಡು, ಅಲ್ಲಿಯ ಜನರೂ ಮುಸ್ಲಿಮರೇ ಆಗಿಹೋದಾಗ ಪಖ್ತೂನಿಗಳಲ್ಲಿ ಮತ್ತೆ ಐಕ್ಯತೆ ಮೂಡಿತು. ನಂತರದ ದಿನಗಳಲ್ಲಿ ಇತಿಹಾಸದ ಪುನರಾವರ್ತನೆಯಾಗಿ ಅವರ ದಾಳಿಗಳಿಗೆ ಸಿಂಧೂ ಬಯಲಿನ ಭಾರತೀಯರಲ್ಲಿ ದೊಡ್ಡ ಪ್ರತಿರೋಧವೇನೂ ಕಾಣಬರಲಿಲ್ಲ. ಮುಂದಿನ ಕೆಲವೇ ದಶಕಗಳಲ್ಲಿ ಸಿಂಧೂ ಬಯಲಿನ ಭಾರತೀಯರೂ ಮುಸ್ಲಿಮರೇ ಆಗಿಹೋದರು. ಆದರೆ ಅವರ ಧರ್ಮ ಬದಲಾಯಿತೇ ವಿನಃ ಅವರ ಕ್ಷಾತ್ರಗುಣದಲ್ಲಿ ವೃದ್ಧಿಯೇನೂ ಆಗಲಿಲ್ಲ. ಕ್ಷಾತ್ರಗುಣವನ್ನು ವೃದ್ಧಿಸುವುದು ಅಥವಾ ಕುಗ್ಗಿಸುವುದು ಧರ್ಮ ಅಥವಾ ಸಿದ್ಧಾಂತವಲ್ಲ, ಬದುಕಿಗಾಗಿ ನಡೆಸಬೇಕಾದ ಹೋರಾಟದ ಮಟ್ಟ. ಹೊಸ ಧರ್ಮ, ಹೊಸ ಸಿದ್ಧಾಂತ ಕ್ಷಾತ್ರಗುಣದಲ್ಲಿ ಏಕಾಏಕಿ ವೃದ್ಧಿಯನ್ನು ತಂದರೂ ಅದು ತಾತ್ಕಾಲಿಕವಷ್ಟೇ, ಹೊಸ ಅಗಸನ ಅತ್ಯುತ್ಸಾಹದಂತೆ. ಮತಾಂತರಗೊಂಡ ಸಿಂಧೂ ಬಯಲಿನ ಭಾರತೀಯರಲ್ಲಿ ಅಂತಹ ಉತ್ಸಹಾವೂ ಕಾಣಲಿಲ್ಲ. ಪರಿಣಾಮವಾಗಿ, ಪಖ್ತೂನಿಗಳು ಉತ್ತರ ಭಾರತದ ಮೇಲೆ ಮುನ್ನೂರು ವರ್ಷಗಳು ಅಧಿಕಾರ ನಡೆಸಿದರು.
ಇಲ್ಲಿನ ಸುಖದ ಬದುಕು ಕೆಲವೇ ತಲೆಮಾರುಗಳಲ್ಲಿ ಅವರ ಕ್ಷಾತ್ರಗುಣವನ್ನೂ ಕುಗ್ಗಿಸಿ, ಮಧ್ಯ ಏಷ್ಯಾದಿಂದ ಬಂದ ಮೊಘಲರ ಮುಂದೆ ಅವರೂ ಮಂಡಿಯೂರುವಂತಾಯಿತು. ಇಷ್ಟನ್ನು ಯಾಕೆ ಹೇಳಿದೆ ಅಂದರೆ ಪಖ್ತೂನಿಗಳು ಮತ್ತು ಸಿಂಧೂ ಬಯಲಿನ ಭಾರತೀಯರು, ಇಬ್ಬರೂ ಧಾರ್ವಿುಕವಾಗಿ ಸಮಾನರಾದರೂ ರಣಾಂಗಣದಲ್ಲಿ ಸಮಾನರಾಗಲಿಲ್ಲ. ಹೀಗಾಗಿ ಅವರಿಬ್ಬರ ನಡುವೆ ಅಪನಂಬಿಕೆ ಮತ್ತು ವೈಷಮ್ಯ ಮುಂದುವರಿಯುತ್ತಲೇ ಹೋಯಿತು. ಸಿಂಧೂ ಬಯಲಿನ ಜನ ಭಾರತೀಯತೆಯನ್ನು ತೊರೆದು ಪಾಕಿಸ್ತಾನೀಯತೆಯನ್ನು ಸೃಷ್ಟಿಸಿಕೊಂಡ ಮೇಲೂ ಅದೇ ಸ್ಥಿತಿ ಮುಂದುವರಿಯಿತು. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವಿನ ವೈಷಮ್ಯಕ್ಕೆ ಇದು ಕಾರಣ. ಈ ವೈಷಮ್ಯ ಪಾಕಿಸ್ತಾನದ ಸೃಷ್ಟಿಯಿಂದಾಗಿ ಮತ್ತೊಂದು ಆಯಾಮವನ್ನು ಪಡೆದುಕೊಂಡದ್ದು ಒಂದು ಆಸಕ್ತಿಕರ ಬೆಳವಣಿಗೆ.
ಸಿಂಧೂ ಬಯಲಿನ ಭಾರತೀಯರು ಇತರೆಡೆಗಳ ಭಾರತೀಯರಂತೇ ಯೂರೋಪಿಯನ್ನರ ಅಧಿಕಾರಕ್ಕೆ ತಲೆಬಾಗಿದರೆ ಪಖ್ತೂನಿಗಳು ತಮ್ಮ ಸ್ವಾತಂತ್ರ್ಯವನ್ನು ಉಗ್ರವಾಗಿ ಕಾಪಾಡಿಕೊಂಡರು. ಅವರನ್ನು ಸದೆಬಡಿಯಲು ಸಿಂಧೂ ಬಯಲಿನ ಭಾರತೀಯರ (ಪಂಜಾಬಿಗಳು) ಸೇನೆಯನ್ನು ಕಟ್ಟಿಕೊಂಡು ಹೋದ ಬ್ರಿಟಿಷ್ ಸೇನಾಧಿಕಾರಿಗಳು ಒಂದಲ್ಲ, ಮೂರು ಸಲ ಮಣ್ಣುಮುಕ್ಕಿದರು. ಅದೂ ಇತಿಹಾಸದ ಪುನರಾವರ್ತನೆಯೇ. ಬ್ರಿಟಿಷರಿಗೂ ಏಷ್ಯನ್ ಇತಿಹಾಸದ ಅರಿವು ಇರಬೇಕಾದಷ್ಟಿರಲಿಲ್ಲ. ಕಾಬೂಲ್ ಅನ್ನು ಕೈವಶ ಮಾಡಿಕೊಂಡು ಅದನ್ನು ತಮ್ಮ ಭಾರತ ಸಾಮ್ರಾಜ್ಯದ ಬೇಸಿಗೆಯ ರಾಜಧಾನಿ ಮಾಡಿಕೊಳ್ಳಲು ಬಯಸಿದ ಬ್ರಿಟಿಷರು ತಮ್ಮ ಆಸೆಯೆಂದೂ ನೆರವೇರದು ಎಂದರಿತಾಗ ಪಂಜಾಬ್ಗೆ ಒತ್ತಿಕೊಂಡ ಪಖ್ತೂನ್ ಪ್ರದೇಶಗಳನ್ನಷ್ಟೇ ತಮ್ಮ ಭಾರತ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವುದರಲ್ಲಿ ತೃಪ್ತಿಪಟ್ಟುಕೊಂಡರು. ಆಗ ಅವರು 1893ರಲ್ಲಿ ಸೃಷ್ಟಿಸಿದ ಗಡಿರೇಖೆಯೇ ಡ್ಯೂರಾಂಡ್ ಲೈನ್. ಅದರ ಪ್ರಕಾರ ಬ್ರಿಟಿಷರು ಗಳಿಸಿಕೊಂಡ ಪಖ್ತೂನ್ ಪ್ರದೇಶಗಳಲ್ಲಿ ಪಶ್ಚಿಮದ ಭಾಗವನ್ನು ಬಲೂಚಿಸ್ತಾನಕ್ಕೆ ಸೇರಿಸಿ, ಪೂರ್ವಾರ್ಧ ಭಾಗವನ್ನು ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್ (ಎನ್ಡಲ್ಲೂ್ಯಎಫ್ಪಿ, ಗಡಿನಾಡು ಪ್ರಾಂತ್ಯ) ಎಂಬ ಹೊಸ ಪ್ರಾಂತ್ಯವನ್ನಾಗಿಸಿಕೊಂಡರು. ದಕ್ಷಿಣ ಪ್ರದೇಶಗಳು ಹೀಗೆ ಕೈತಪ್ಪಿಹೋದದ್ದನ್ನು, ಪಖ್ತೂನ್ ಜನಾಂಗ ಹೀಗೆ ಇಬ್ಭಾಗವಾದುದನ್ನು ಅಫ್ಘನ್ ಪಖ್ತೂನಿಗಳು ಒಪ್ಪಿಕೊಳ್ಳಲಿಲ್ಲ. ಆದರೆ ತಾವು ಕಳೆದುಕೊಂಡ ಪ್ರದೇಶಗಳು ಬ್ರಿಟಿಷ್ ಭಾರತದ ಪ್ರಮುಖ ಸೇನಾನೆಲೆಯಾದ ರಾವಲ್ಪಿಂಡಿಗೆ ಹತ್ತಿರವಿದ್ದುದರಿಂದ ಮತ್ತು ಆ ಪ್ರದೇಶಗಳೊಂದಿಗೆ ಬ್ರಿಟಿಷರು ಬಲಿಷ್ಠ ಸಂಪರ್ಕವನ್ನು ಸೃಷ್ಟಿಸಿಕೊಂಡಿದ್ದರಿಂದ ತಮಗಾದ ಪ್ರಾದೇಶಿಕ ನಷ್ಟವನ್ನು ಸರಿಪಡಿಸಿಕೊಳ್ಳಲಾಗದು ಎಂದೂ ಅರಿತ ಅವರು ಕೈಕೈ ಹಿಸುಕಿಕೊಳ್ಳುತ್ತ ಕೂತರು.
ಇದೇ ಸಮಯದಲ್ಲಿ ಅಫ್ಘಾನಿಸಾನ ತನ್ನ ಮಧ್ಯಯುಗೀನ ಚಹರೆಯನ್ನು ಬದಲಾಯಿಸಿಕೊಂಡು ಆಧುನಿಕತೆಯತ್ತ ಮುಖ ಮಾಡಿತು. ಅದಕ್ಕೆ ಪ್ರೇರಣೆಯಾದದ್ದು ಉತ್ತರದಲ್ಲಿ 1922ರಲ್ಲಿ ಧರ್ಮನಿರಪೇಕ್ಷ ಕಮ್ಯೂನಿಸ್ಟ್ ಸೋವಿಯತ್ ಯೂನಿಯನ್ ಮತ್ತು ಪಶ್ಚಿಮದಲ್ಲಿ 1925ರಲ್ಲಿ ಪ್ರಗತಿಪರ ಪಹ್ಲವಿ ರಾಜಶಾಹಿ ಇರಾನ್ ಅವತರಿಸಿದ್ದು. ದುರಾನಿ ರಾಜವಂಶದ ಪರಿಪಾಠದಂತೆ 1919ರಲ್ಲಿ ಅಫ್ಘಾನಿಸ್ತಾನದ ಅಮೀರ್ ಆದ ಅಮಾನುಲ್ಲಾ ಖಾನ್ 1926ರಲ್ಲಿ ಆ ಉಪಾಧಿಯನ್ನು ತೊರೆದು ತನ್ನನ್ನು ತಾನು ಅರಸ ಎಂದು ಘೊಷಿಸಿಕೊಂಡು, ತಮ್ಮ ದೇಶವನ್ನು ಆಧುನಿಕತೆಗೆ ತೆರೆದರು. ಅವರಿಗೆ ಪೂರ್ಣ ಸಹಕಾರವಿತ್ತ ಪತ್ನಿ ಮತ್ತು ಅಫ್ಘಾನಿಸ್ತಾನದ ಮೊದಲ ಮಹಾರಾಣಿ ಸುರೈಯಾ ತಾರ್ರಿk ಮಹಿಳಾ ವಿಮೋಚನೆಯನ್ನು ಆದ್ಯತೆಯಾಗಿಸಿಕೊಂಡರು. ಆ ಹಾದಿಯಲ್ಲಿ ಅವರು ಬುರ್ಖಾವನ್ನು ಮಹಿಳೆಯರ ದಾಸ್ಯದ ಸಂಕೇತ ಎಂದು ಕರೆದು ಅದನ್ನು 1928ರಲ್ಲಿ ತಮ್ಮ ಮೈ ಮೇಲಿಂದ ಸಾರ್ವಜನಿಕವಾಗಿ ಕಿತ್ತೊಗೆದರು. ಮುಂದಿನ ದಶಕಗಳಲ್ಲಿ ಅಫ್ಘಾನಿಸ್ತಾನ ಅರಸ ಝುಹೀರ್ ಶಾ ಅವರ ನೇತೃತ್ವದಲ್ಲಿ ಧರ್ಮವನ್ನು ಆಡಳಿತದಿಂದ ಹಂತಹಂತವಾಗಿ ದೂರ ಸರಿಸತೊಡಗಿದ್ದಲ್ಲದೆ, ಮಹಿಳೆಯರೂ ಸೇರಿ ತನ್ನ ಯುವಜನತೆಗೆ ಪಾಶ್ಚಿಮಾತ್ಯ ಶಿಕ್ಷಣವನ್ನು ನೀಡತೊಡಗಿತು.
ಅಫ್ಘಾನಿಸ್ತಾನ ಹೀಗೆ ಆಧುನಿಕತೆಯ ದಾರಿಗೇರಿದರೆ, ಇತ್ತ ನೆರೆಯ ಭಾರತದಲ್ಲಿ ಮುಸ್ಲಿಮರು ಧರ್ಮದ ಆಧಾರದಲ್ಲಿ ಹೊಸ ದೇಶವನ್ನು ಸೃಷ್ಟಿಸಹೊರಟದ್ದು, ಆ ಹೊಸ ದೇಶ ತಮ್ಮ ಗಡಿಗೆ ಹೊಂದಿಕೊಂಡು ಸೃಷ್ಟಿಯಾಗಲಿರುವುದು ಅಫ್ಘನ್ನರಿಗೆ ವಿಚಿತ್ರವಾಗಿ ಕಂಡಿತು. ಅಫ್ಘನ್ನರು ಮುಸ್ಲಿಂ ಲೀಗ್ ಅನ್ನು ಸಂಶಯದಿಂದ ನೋಡತೊಡಗಿದರು. ಕೊನೆಗೂ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದೇಬಿಟ್ಟಾಗ ಅದು ತಾವು 1893ರಲ್ಲಿ ಕಳೆದುಕೊಂಡ ತಮ್ಮ ದಕ್ಷಿಣ ಪಖ್ತೂನ್ ಪ್ರದೇಶಗಳನ್ನು ಒಳಗೊಂಡದ್ದು ಅಫ್ಘನ್ನರಿಗೆ ಸಮ್ಮತವಾಗಲಿಲ್ಲ. ಪಾಕಿಸ್ತಾನ ವಿಶ್ವಸಂಸ್ಥೆಯ ಸದಸ್ಯತ್ವಕ್ಕೆ ಅರ್ಜಿ ಹಾಕಿದಾಗ ಅದನ್ನು ಸಾಮಾನ್ಯ ಸಭೆಯಲ್ಲಿ ಅಧಿಕೃತವಾಗಿ ವಿರೋಧಿಸಿದ ಒಂದೇ ಒಂದು ರಾಷ್ಟ್ರ ಅಫ್ಘಾನಿಸ್ತಾನ ಎಂಬ ವಾಸ್ತವ ಅಫ್ಘನ್ನರು ಪಾಕಿಸ್ತಾನವನ್ನು ಯಾವ ಮಟ್ಟಕ್ಕೆ ಸಂಶಯಿಸಿದರು ಮತ್ತು ವಿರೋಧಿಸಿದರು ಎನ್ನುವುದರ ಸಂಕೇತ. ಅದರ ಮುಂದುವರಿಕೆಯಾಗಿ, ಅರಸ ಝುಹೀರ್ ಶಾರ ಅಫ್ಘನ್ ಸರ್ಕಾರ ಡ್ಯೂರಾಂಡ್ ಗಡಿರೇಖೆಯನ್ನು ತಿರಸ್ಕರಿಸಿ, ಉತ್ತರ ಬಲೂಚಿಸ್ತಾನ ಮತ್ತು ಇಡೀ ಗಡಿನಾಡು ಪ್ರಾಂತ್ಯ ಅಫ್ಘಾನಿಸ್ತಾನಕ್ಕೆ ಸೇರಿದ್ದು ಎಂದು ವಾದಿಸತೊಡಗಿತು. ಈ ಕಾರಣದಿಂದಾಗಿ ವೈಷಮ್ಯ ಉಲ್ಬಣಿಸಿ ಎರಡೂ ದೇಶಗಳ ನಡುವೆ 1961 ಯುದ್ಧವಾಗುವ ಸ್ಥಿತಿ ಉಂಟಾಗಿತ್ತು.
ಇದು ಅಫ್ಘಾನಿಸ್ತಾನದ ಪಖ್ತೂನಿಗಳು ಮತ್ತು ಪಾಕಿಸ್ತಾನೀಯರಾಗಿ ಬದಲಾದ ಸಿಂಧೂ ಬಯಲಿನ ಭಾರತೀಯರ ನಡುವಿನ ವೈಷಮ್ಯದ ಇತಿಹಾಸ. ಪಾಕಿಸ್ತಾನದ ಪಖ್ತೂನ್ ಪ್ರದೇಶಗಳು ಅಫ್ಘಾನಿಸ್ತಾನಕ್ಕೆ ಸೇರಬೇಕು ಎಂಬ ಕಾಬೂಲ್ನ ಬೇಡಿಕೆಗೆ ಗಡಿನಾಡಿನ ಪಖ್ತೂನಿಗಳೂ ದನಿಗೂಡಿಸಿದರು. ಗಡಿನಾಡು ಪ್ರಾಂತ್ಯವನ್ನು ಮೊದಲಿಗೆ ಪಾಕಿಸ್ತಾನದಿಂದ ಪ್ರತ್ಯೇಕಿಸಿ ಪಖ್ತೂನಿಸ್ತಾನವನ್ನು ಸೃಷ್ಟಿಸಿ ನಂತರ ಅದನ್ನು ಅಫ್ಘಾನಿಸ್ತಾನದೊಂದಿಗೆ ವಿಲೀನಗೊಳಿಸಲು ಗಡಿನಾಡಿನ ಪಖ್ತೂನಿಗಳಲ್ಲಿ ಪ್ರಯತ್ನ ಆರಂಭವಾಯಿತು. ಗಡಿನಾಡಿನ ಪಖ್ತೂನಿಗಳಿಗೆ ಪಾಕಿಸ್ತಾನೀ ಹಾಗೂ ಇಸ್ಲಾಮಿಕ್ ಅಸ್ಮಿತೆಗಳಿಗಿಂತಲೂ ತಮ್ಮ ಜನಾಂಗೀಯ ಅಸ್ಮಿತೆ ಮುಖ್ಯವಾದುದು ಎನ್ನುವುದನ್ನು ಗಡಿನಾಡಿನ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ರ ಮಗ, ಪಖ್ತೂನ್ ರಾಷ್ಟ್ರೀಯವಾದಿ ರಾಜಕೀಯ ಪಕ್ಷ ನ್ಯಾಷನಲ್ ಅವಾಮಿ ಪಾರ್ಟಿಯ ನೇತಾರ ಮತ್ತು ಗಡಿನಾಡು ಪ್ರಾಂತ್ಯದ ಮಾಜಿ ಮುಖ್ಯಮಂತ್ರಿ ಖಾನ್ ಅಬ್ದುಲ್ ವಲೀ ಖಾನ್ 1972ರಲ್ಲಿ ಸೊಗಸಾಗಿ ಹೇಳಿದ್ದು ಹೀಗೆ- ‘ನಾನೊಬ್ಬ ಪಾಕಿಸ್ತಾನಿ, ಕಳೆದ ಮೂವತೆôದು ವರ್ಷಗಳಿಂದ; ನಾನೊಬ್ಬ ಮುಸ್ಲಿಂ, ಕಳೆದ ಒಂದುಸಾವಿರದ ನಾನೂರು ವರ್ಷಗಳಿಂದ; ನಾನೊಬ್ಬ ಪಠಾಣ, ಕಳೆದ ಐದುಸಾವಿರ ವರ್ಷಗಳಿಂದ’.
ಒಮ್ಮೊಮ್ಮೆ ತೀರಾ ಅನಿರೀಕ್ಷಿತವಾಗಿ ಕೆಲವೊಂದು ವಿಪರ್ಯಾಸಗಳು ಇತಿಹಾಸದಲ್ಲಿ ಘಟಿಸಿಬಿಡುತ್ತವೆ. ಅಂತಹದೊಂದು ಅನಿರೀಕ್ಷಿತ ವಿಪರ್ಯಾಸ ಅಫ್ಘಾನಿಸ್ತಾನ ಪಾಕಿಸ್ತಾನ ಸಂಬಂಧಗಳಲ್ಲಿ, ಘಟಿಸಿದ್ದು 1973ರಲ್ಲಿ, ಅಂದರೆ ವಲೀ ಖಾನ್ ತಮ್ಮ ಪಖ್ತೂನಿ ಅಸ್ಮಿತೆಯನ್ನು ದೊಡ್ಡದಾಗಿ ಹೇಳಿಕೊಂಡ ಮರುವರ್ಷವೇ.
(ಮುಂದುವರಿಯುವುದು)
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)