ಅಂಕಣ

ದೂಧ್​ಸಾಗರ್​: ಸೌಂದರ್ಯ ಸಿರಿ, ಧುಮ್ಮಿಕ್ಕುವ ಪರಿ..

ಜಿಟಿ-ಜಿಟಿ ಮಳೆ, ಚುಮುಚುಮು ಚಳಿ. ಹಕ್ಕಿಗಳ ಚಿಲಿಪಿಲಿ. ನೀರಿನ ಜುಳು-ಜುಳು. ಮೈಮನ ಮರೆಸುವ ವಾತಾವರಣ. ಇದು ಪ್ರಕೃತಿಯ ಒಡಲಲ್ಲಿ ಇರುವ ‘ದೂಧ್ ಸಾಗರ್ ಫಾಲ್ಸ್’ನ ವೈಶಿಷ್ಟ್ಯ ಮಳೆಗಾಲ ಆರಂಭಗೊಂಡಿದ್ದು, ಈ ಪ್ರದೇಶವೀಗ ಮನೋಹರವಾಗಿ ಕಂಗೊಳಿಸುತ್ತಿದೆ.

| ಧರ್ಮರಾಜ ಪಾಟೀಲ ಬೆಳಗಾವಿ

ಪಶ್ಚಿಮ ಘಟ್ಟದಲ್ಲೀಗ ಪ್ರಕೃತಿ ಸೌಂದರ್ಯದ ನರ್ತನ. ಎಲ್ಲೆಲ್ಲೂ ಹಸಿರಿನಿಂದ ತುಂಬಿದ ವನಸಿರಿ. ದಟ್ಟನೆಯ ಕಾಡು; ಅಲ್ಲಲ್ಲಿ ಹೃನ್ಮನ ಸೆಳೆಯುವ ಜಲಪಾತಗಳು. ವರ್ಣನೆಗೆ ನಿಲುಕದ ಸೊಬಗು. ಸ್ವರ್ಗವೇ ಧರೆಗೆ ಇಳಿದಿದೆಯೇ ಎಂಬ ಭಾವ. ಇದು ‘ದೂಧ್ ಸಾಗರ್ ಫಾಲ್ಸ್’ನ ಪ್ರಭಾವ. ಕರ್ನಾಟಕ- ಗೋವಾ ಗಡಿಯ ನಿತ್ಯಹರಿದ್ವರ್ಣ ಕಾಡಿನ ಮಧ್ಯದಲ್ಲಿ 1,017 ಅಡಿ ಎತ್ತರ ಹಾಗೂ 100 ಅಡಿ ಅಗಲದಲ್ಲಿ ಈ ಜಲಪಾತ ಧುಮ್ಮಿಕ್ಕುತ್ತಿದೆ. ಭಾರತದಲ್ಲಿರುವ ಅತಿ ಎತ್ತರದ ಜಲಪಾತಗಳಲ್ಲಿ ಇದೂ ಒಂದು. ಮುಂಗಾರು ಮಳೆ ಆರಂಭದಲ್ಲೇ ಉತ್ತಮವಾಗಿ ಸುರಿದ ಪರಿಣಾಮ ಬೆಟ್ಟ-ಗುಡ್ಡಗಳೆಲ್ಲ ಹಚ್ಚಹಸಿರು ಹೊದ್ದುಕೊಂಡಿವೆ. ವನಸಿರಿ ಮಧ್ಯೆ ಭೋರ್ಗರೆಯುತ್ತ ಹಾಲಿನ ಹೊಳೆಯಂತೆ ಇಲ್ಲಿ ನೀರು ಬೀಳುತ್ತಿದೆ. ಈ ಜಲಪಾತ ಎರಡು ಕವಲುಗಳಾಗಿ ಹರಿದು, ಮತ್ತೆ ಒಂದೇ ಕಡೆ ಸೇರಿ ಕಲ್ಲುಬಂಡೆಯನ್ನು ಬಳಸಿ ಮತ್ತೆ ನಾಲ್ಕು ಕವಲುಗಳಾಗಿ ಬೇರ್ಪಟ್ಟು ಧುಮ್ಮಿಕ್ಕುತ್ತದೆ. ಮಾಂಡೋವಿ (ಮಹಾದಾಯಿ) ನದಿಯ ನೀರು, ಪಶ್ಚಿಮ ಘಟ್ಟದ ಸಾಲುಗಳಲ್ಲಿ ಹರಿದು ಅರಬ್ಬೀ ಸಮುದ್ರ ಸೇರುವ ಮೊದಲು ಈ ಸೌಂದರ್ಯ ಮೈದಳೆದಿರುತ್ತದೆ.

ವ್ಯೂ ಪಾಯಿಂಟ್: ಫಾಲ್ಸ್​ಗೆ ಭೇಟಿ ನೀಡುವ ಪ್ರವಾಸಿಗರಿಗೆ ಅಲ್ಲಿನ ಸೌಂದರ್ಯ ವೀಕ್ಷಿಸಲು ಗೋವಾ ಅರಣ್ಯ ಇಲಾಖೆ ‘ವ್ಯೂ ಪಾಯಿಂಟ್’ ನಿರ್ವಿುಸಿದೆ. ಜಲಪಾತದ ಸಮೀಪ ಹೋಗಲು ಸ್ಟೆಪ್ಡ್ ಗಾರ್ಡನ್ ಇದೆ. ವಯಸ್ಸಾದವರೂ ಹತ್ತಿರದಿಂದ ವೀಕ್ಷಿಸಬಹುದು.

ಸುರಂಗ ಮಾರ್ಗ

ಬ್ರಿಟಿಷ್ ಕಾಲದಲ್ಲೇ ನಿರ್ವಿುಸಿರುವ 20ಕ್ಕೂ ಹೆಚ್ಚು ಸುರಂಗ ಮಾರ್ಗ ಸಿಗುತ್ತವೆ. ಅಲ್ಲಿರುವ ಕತ್ತಲಲ್ಲಿ ನಡೆದು ಹೋಗುವಾಗ ಭಯದಲ್ಲೂ ವಿಶಿಷ್ಟ, ಅದ್ಭುತ ಅನುಭವವಾಗುತ್ತದೆ. ರೈಲಿನಿಂದ ಇಳಿದು ಹೋಗುವಾಗ ಫಾಲ್ಸ್ ಸಮೀಪದಲ್ಲೇ ‘ಸುರಂಗ ನಡಿಗೆ’ಯ ಅನುಭವ ಪಡೆಯಬಹುದು. ಆಗಾಗ ಬಿಸಿಲು-ಮೋಡಗಳ ಆಟ, ಒಮ್ಮೆ ಮಂಜು, ಇನ್ನೊಮ್ಮೆ ಮಳೆ. ಹೀಗೆ ಪ್ರಕೃತಿ ವೈಶಿಷ್ಟ್ಯ ಮೂಕವಿಸ್ಮಿತರನ್ನಾಗಿಸುತ್ತದೆ.

ಎಲ್ಲಿದೆ?: ಬೆಳಗಾವಿಯಿಂದ 80 ಕಿ.ಮೀ., ಪಣಜಿಯಿಂದ 60 ಕಿ.ಮೀ.

ಹೋಗುವುದು ಹೇಗೆ?: ಬೆಳಗಾವಿಯ ಲೋಂಡಾ ರೈಲ್ವೆ ಜಂಕ್ಷನ್​ನಿಂದ ಕ್ಯಾಸಲ್​ರಾಕ್ ಮಾರ್ಗವಾಗಿ ಸಾಗಿ ದೂಧ್ ಸಾಗರ ಫಾಲ್ಸ್ ಸಮೀಪದಲ್ಲೇ ಇಳಿಯಬಹುದು. ದೂಧ್​ಸಾಗರ್ ಬಳಿ ರೈಲು ನಿಲ್ದಾಣವಿಲ್ಲ. ಆದರೆ, ಪ್ರವಾಸಿಗರಿಗೆ ಅನುಕೂಲವಾಗಲೆಂದು ಆ ಮಾರ್ಗದಲ್ಲಿ ಸಾಗುವ ರೈಲನ್ನು ಒಂದು ನಿಮಿಷ ನಿಲ್ಲಿಸುತ್ತಾರೆ. ಟ್ರೆಕ್ಕಿಂಗ್​ಗಾದರೆ ಕ್ಯಾಸಲ್​ರಾಕ್​ನಿಂದ ರೈಲು ಹಳಿ ಮೇಲೆ 14 ಕಿ.ಮೀ. (6 ತಾಸು) ನಡೆಯಬೇಕು. ಗೋವಾದ ಕುಳೆಂ ರೈಲು ನಿಲ್ದಾಣದಿಂದ 8 ಕಿ.ಮೀ. (4 ತಾಸು) ನಡೆದು ಬರಬಹುದು. ಆದರೆ, ದಟ್ಟ ಕಾಡಿನ ಮಧ್ಯೆ ನಡೆಯುವುದು ಅಪಾಯ. ರಸ್ತೆ ಮಾರ್ಗವಾದರೆ ಗೋವಾದ ಕುಳೆಂ ತಲುಪಿ ಜೀಪ್ ಬಾಡಿಗೆ ಪಡೆದು, ದೂಧ್​ಸಾಗರ್ ತಲುಪಬಹುದು.