| ವಿನಯ್ ಎಂ.ಕೆ. ಬೆಂಗಳೂರು
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಪ್ರಾಪ್ತ ವಯಸ್ಕರಾಗುತ್ತಲೇ ಹುಡುಗ ಅಥವಾ ಹುಡುಗಿ ವಯಸ್ಸಿನ ಆಕರ್ಷಣೆಯಿಂದ ಇಲ್ಲವೇ ಕೌಟುಂಬಿಕ ಒತ್ತಡಗಳಿಗೆ ಮಣಿದು ಒಂದಾಗುತ್ತಾರೆ. ಜೀವನದ ಒಂದು ಘಟ್ಟದಲ್ಲಿ ಆಕರ್ಷಣೆ ಕಳೆದುಹೋದರೆ, ಹೊಂದಾಣಿಕೆಯ ಕೊರತೆ ಕಂಡುಬಂದರೆ, ಇಲ್ಲವೇ ಅಹಂಗಳ ತಾಕಲಾಟದಂತಹ ನಾನಾ ಸಮಸ್ಯೆ ಕಾಣಿಸಿಕೊಂಡಾಗ ಪ್ರತ್ಯೇಕಗೊಳ್ಳುವುದು ಕೂಡ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಜತೆಗೆ, ಆರೋಗ್ಯ ಸಮಸ್ಯೆ, ಪ್ರಾಕೃತಿಕ ವಿಕೋಪಗಳಿಂದ ಪತಿ ಅಥವಾ ಪತ್ನಿ ಮೃತಪಡುವ ಸಂದರ್ಭಗಳೂ ಹೆಚ್ಚಾಗಿವೆ. ನಿರೀಕ್ಷೆಗಳ ಭಾರ ಹೆಚ್ಚಳ ಕೂಡ ಮದುವೆಯ ಬಂಧ ಸುಲಭವಾಗಿ ಕಳಚಿಕೊಳ್ಳುವಂತೆ ಮಾಡುತ್ತಿದೆ. ಉನ್ನತ ಶಿಕ್ಷಣ, ಉದ್ಯೋಗ, ಉದ್ಯೋಗದಲ್ಲಿ ಔನ್ನತ್ಯ, ಆರ್ಥಿಕ ಸ್ವಾವಲಂಬನೆ ಕೂಡ ಇದಕ್ಕೆ ತುಪ್ಪ ಸುರಿಯುತ್ತಿವೆ. ಇದೆಲ್ಲದರ ಪರಿಣಾಮ ಇತ್ತೀಚೆಗೆ ವಿಚ್ಛೇದನಗಳೂ ಹೆಚ್ಚಾಗುತ್ತಿವೆ. ಆರೋಗ್ಯ, ಆಕಸ್ಮಿಕಗಳು ಮತ್ತು ಪ್ರಾಕೃತಿಕ ಅವಘಡಗಳಿಂದಾಗಿ ವಿದುರ, ವಿಧವೆಯರಾಗುವುದು ಸಾಮಾನ್ಯವಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳು ವವರ ಸಂಖ್ಯೆಯೂ ಕಡಿಮೆ ಏನಿಲ್ಲ. ವಿವಾಹೇತರ ಸಂಬಂಧಗಳು ಕೂಡ ಸ್ವರ್ಗದಲ್ಲಿ ನಿಶ್ಚಯವಾಗಿತ್ತು ಎಂದು ಹೇಳಲಾಗುವ ವೈವಾಹಿಕ ಬಂಧವನ್ನು ತುಂಡರಿಸುವ ಹಲವು ಉದಾಹರಣೆಗಳು ಕಣ್ಣಮುಂದಿವೆ.
ಪುರುಷ ಅಥವಾ ಮಹಿಳೆ ಮರುಮದುವೆಯಾದಾಗ, ಮೊದಲ ಮದುವೆಯಲ್ಲಿ ಹುಟ್ಟಿದ ಮಕ್ಕಳು ಇಂಥ ಮದುವೆಗೆ ಒಪು್ಪವುದು, ಮತ್ತೊಬ್ಬರ ಮಕ್ಕಳೊಂದಿಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ. ಆದರೆ ಅಸಾಧ್ಯವೇನಲ್ಲ. 70ರ ದಶಕದಲ್ಲಿ ಬಿಡುಗಡೆಯಾಗಿದ್ದ ‘ಮಕ್ಕಳ ಸೈನ್ಯ’ ಎಂಬ ಚಲನಚಿತ್ರ ಇದಕ್ಕೆ ಉತ್ತಮ ಉದಾಹರಣೆ. ಆದರೆ, ಮಕ್ಕಳೊಂದಿಗೆ ಕುಳಿತು ನೇರವಾಗಿ ಮಾತುಕತೆ ನಡೆಸಿ, ಮದುವೆಯ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಡುವ ಜತೆಗೆ, ಇಂಥ ಸಂಬಂಧದಿಂದ ಯಾವುದೇ ಬಾಧಕಗಳಿಲ್ಲ ಎಂದು ಸಮಜಾಯಿಷಿ ನೀಡಿದರೆ ಅವರ ನಡುವೆಯೂ ಹೊಂದಾಣಿಕೆ ಮೂಡುತ್ತದೆ ಎಂಬುದು ಕೌಟುಂಬಿಕ ಸಲಹೆಗಾರರ ಅಭಿಪ್ರಾಯ.
ಇದೆಲ್ಲದರ ಒಟ್ಟಾರೆ ಪರಿಣಾಮ ಸಿಂಗಲ್ ಮದರ್, ಸಿಂಗಲ್ ಫಾದರ್ ಎಂಬ ಪರಿಕಲ್ಪನೆಯಲ್ಲಿ ಬದುಕು ಸವೆಸುವವರು ಹೆಚ್ಚಾಗುತ್ತಿದ್ದಾರೆ. ಆದರೆ, ವಯಸ್ಸು ಮಾಗಿದಂತೆ, ಮನಸ್ಸಿನ ದುಗುಡ, ಸಂತೋಷಗಳನ್ನು ಹಂಚಿಕೊಳ್ಳಲು ಮತ್ತೊಂದು ಜೀವ ಬೇಕು ಎಂದು ಪರಿತಪಿಸುವವರ ಸಂಖ್ಯೆಯೂ ದೊಡ್ಡದಾಗ ತೊಡಗಿದೆ. ಈ ಎಲ್ಲ ಸಂಗತಿಗಳು ಮತ್ತೊಮ್ಮೆ ವೈವಾಹಿಕ ಬಂಧನಕ್ಕೆ ಒಳಗಾಗಿ ಇಚ್ಛಿತ ಸಂಗಾತಿ ಯೊಂದಿಗೆ ಬದುಕು ಸವೆಸಲು ಮುಂದಾಗುವಂತೆ ಜನರನ್ನು ಪ್ರೇರೇಪಿಸುತ್ತಿವೆ. ಹಾಗಾಗಿಯೆ ಇತ್ತೀಚಿನ ದಿನಗಳಲ್ಲಿ ಎರಡನೇ ಮದುವೆಗಳು ಹೆಚ್ಚಾಗುತ್ತಿವೆ. ಇದು ಭಾರತೀಯ ಸಂಸ್ಕೃತಿಯಲ್ಲೂ ಒಪ್ಪಿತವಾಗುತ್ತಿದೆ ಎಂಬುದು ಸಮಾಧಾನಕರ ಅಂಶ.
ಯಾವುದೋ ಕಾರಣಕ್ಕೆ ವಿಧವೆಯಾದ ಹೆಣ್ಣು ಮತ್ತೊಮ್ಮೆ ಸಪ್ತಪದಿ ತುಳಿದು, ಜೀವನ ಸಾಗಿಸುವುದು ಇಂಥ ಆಧುನಿಕ ಯುಗದಲ್ಲೂ ಕಷ್ಟವಾಗುತ್ತಿದೆ. ವಿಧವೆಯ ಮರುಮದುವೆ ಕುರಿತು ಜಾಗೃತಿ ಮೂಡಿಸುವ ಸಾಕಷ್ಟು ಸಿನಿಮಾ, ನಾಟಕ, ಟಿವಿ ಧಾರವಾಹಿಗಳು ಬಂದು ಹೋಗಿದ್ದರೂ, ಈಗಲೂ ಈ ವಿಷಯವಾಗಿ ಹೆಚ್ಚಿನ ಜಾಗೃತಿ ಮೂಡಿಲ್ಲ. ಮರುಮದುವೆ ವಿಷಯದಲ್ಲಿ ಗಂಡಿಗೆ ಸಿಗುವಷ್ಟು ಪ್ರಾಶಸ್ಱ, ಹೆಣ್ಣಿಗೆ ಸಿಗುತ್ತಿಲ್ಲ. ಒಂದು ವೇಳೆ ಮದುವೆಯಾದರೂ ಹೆಣ್ಣಿಗೆ ಸಿಗಬೇಕಾದ ಪ್ರಾಶಸ್ಱ, ಅವಕಾಶಗಳನ್ನು ಕೊಡುವಷ್ಟು ಉದಾರ ಮನೋಭಾವವಿನ್ನೂ ಪುರುಷರಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ. ಹೀಗಾಗಿ ವಿಧವೆಯರು, ವಿಚ್ಛೇದಿತ ಮಹಿಳೆಯರು ಮತ್ತೊಂದು ಅನುಬಂಧದಲ್ಲೂ ತೊಂದರೆಗಳನ್ನು ಎದುರಿಸಬೇಕಾದ ಸಾಧ್ಯತೆ ಹೆಚ್ಚು.
ಮಹಿಳೆ ದೈಹಿಕ ಸುಖ ಇಲ್ಲದೆಯೇ ಇರಬಲ್ಲಳು. ಆದರೆ, ಪುರುಷರಿಗೆ ಹಾಗಾಗುವುದಿಲ್ಲ. ಅದು ಪ್ರಾಕೃತಿಕ ನಿಯಮ. ಅವರ ನಿರೀಕ್ಷೆಗೆ ಸೂಕ್ತ ಸ್ಪಂದನೆ ಮಹಿಳೆಯಿಂದ ಸಿಗದೇ ಹೋದಾಗ ಮರು ದಾಂಪತ್ಯದಲ್ಲೂ ಸಹಜವಾಗಿ ಬಿರುಕುಗಳು ಮೂಡಬಹುದು. ಹಾಗಾಗಿ, 2ನೇ ಮದುವೆಯಲ್ಲೂ ಮಹಿಳೆ ಸಂತೋಷವಾಗಿರುವ ಸಾಧ್ಯತೆ ಕಡಿಮೆ.
| ಶಾಂತಾ ನಾಗರಾಜ್ ಕೌಟುಂಬಿಕ ಸಲಹೆಗಾರ್ತಿ
ಭಾರತೀಯ ಸಂಸ್ಕೃತಿಯಲ್ಲಿ ಪುರುಷರಿಗೆ 2ನೇ ಮದುವೆ ಸುಲಭ. ಆದರೆ, ಹೆಣ್ಣಿಗೆ ಇದೊಂದು ಕ್ಲಿಷ್ಟಕರ ಪ್ರಕ್ರಿಯೆ. ವಿಧವೆಯರು ಅಥವಾ ವಿಚ್ಛೇದಿತರ ಮದುವೆ ಬಗ್ಗೆ ಸಮಾಜ ಇನ್ನೂ ಉದಾರವಾಗಿಲ್ಲ. ನಾನಾ ಕಾರಣಗಳಿಗಾಗಿ ಪುರುಷರಿಗೆ 40, 42 ವರ್ಷಗಳಾದರೂ ಮದುವೆ ಆಗುತ್ತಿಲ್ಲ. ಇಂಥವರು ವಿಧವೆಯರು ಅಥವಾ ವಿಚ್ಛೇದಿತರಾದರೂ ಸರಿ ಎಂದು ವೈವಾಹಿಕ ವೆಬ್ಸೈಟ್ಗಳಲ್ಲಿ ಬರೆದುಕೊಂಡಿರುತ್ತಾರೆ. ಆದರೆ, ಮಕ್ಕಳು ಇರಬಾರದು ಎಂಬ ಷರತ್ತನ್ನು ಸಣ್ಣದಾಗಿ ನಮೂದಿಸಿರುತ್ತಾರೆ. ಇದು ಕೂಡ ಮಹಿಳೆಯರ 2ನೇ ಮದುವೆಗೆ ತೊಡಕಾಗಿ ಪರಿಣಮಿಸುತ್ತಿದೆ.
ಉದ್ಯೋಗಸ್ಥೆಯಾಗಿ ಆಕೆ ತರುವ ಹಣ, ಮನೆ ನಿರ್ವಹಣೆಯ ಜವಾಬ್ದಾರಿ ಆಕೆಯದ್ದಾಗಿರಬೇಕು, ಮಕ್ಕಳನ್ನು ಹೆತ್ತು ವಂಶೋದ್ಧಾರ ಮಾಡಬೇಕು ಎಂಬ ನಿರೀಕ್ಷೆಗಳ ಜತೆಗೆ ಗೃಹಸ್ಥ ಎಂಬ ಪದವಿಯಲ್ಲಿ ಸಿಗುವ ಗೌರವಾದರಗಳನ್ನು ಆಸ್ವಾದಿಸುವ ಬಯಕೆ ಪುರುಷರದ್ದಾಗಿರುತ್ತದೆ. ಆದರೆ ಹೆಣ್ಣಿನ ವಿಷಯದಲ್ಲಿ ಹೀಗಾಗುವುದಿಲ್ಲ. ಗೃಹಿಣಿಯಾಗುವ ಆಕೆಗೆ ಸಾಮಾಜಿಕವಾಗಿ ಸಿಗುವ ಗೌರವಾದರಗಳು, ತಂದೆಯ ಮನೆಯ ಹೊರತಾಗಿ ಪತಿಯ ಮನೆಯಲ್ಲಿ ಆಕೆಗೆ ಸಿಗುವ ಭದ್ರತೆ ಮೊದಲ ಪ್ರಾಶಸ್ಱವಾಗಿರುತ್ತದೆ. ಸಾಂಗತ್ಯಕ್ಕೆ, ಮಾನಸಿಕ ದುಗುಡ ದುಮ್ಮಾನಗಳನ್ನು ಹಂಚಿಕೊಳ್ಳಲು ಪುರುಷನ ಅಗತ್ಯ ಇರುತ್ತದೆ. ಆದರೆ, ದೈಹಿಕ ಸುಖ ಎಂಬುದು ಆಕೆಗೆ ಕೊನೇ ಪ್ರಾಶಸ್ಱವಾಗಿರುತ್ತದೆ ಎಂಬುದು ಮಾನಸಿಕ ಅಧ್ಯಯನ ವರದಿಯಿಂದ ಸ್ಪಷ್ಟವಾಗುತ್ತದೆ.
ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: http://lalithavijayavani@gmail.com