ಈ ಕಪ್ಪೆಗಳ ಜೀವನವೇ ಒಂಥರಾ ಇಂಟರೆಸ್ಟಿಂಗು. ಇನ್ನೂರು ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಅಸ್ತಿತ್ವ ಕಂಡುಕೊಂಡು ನೆಲದ ಮೇಲೆ ಓಡಾಡುವ ಜೀವಿಗಳಲ್ಲಿ ಧ್ವನಿತಂತುಗಳನ್ನು ಹೊಂದಿರುವ ಮೊದಲ ಜೀವಿಯೆಂಬ ಹೆಗ್ಗಳಿಕೆಯ ಮಂಡೂಕಗಳು ಐದು ಸಾವಿರಕ್ಕೂ ಹೆಚ್ಚು ಉಪಪ್ರಭೇದಗಳನ್ನು ಹೊಂದಿದ್ದು ಪ್ರತಿವರ್ಷ ಈ ಪಟ್ಟಿಗೆ ಇನ್ನಷ್ಟು ಹೊಸ ಪ್ರಭೇದಗಳನ್ನು ಸೇರ್ಪಡಿಸುತ್ತ ಹೋಗುತ್ತಿವೆ. ಕೀಟಗಳನ್ನು ಸೊಳ್ಳೆಗಳನ್ನು ಭಕ್ಷಿಸುತ್ತ ಹಕ್ಕಿ , ಹಾವುಗಳಿಗೆ ಆಹಾರವಾಗುತ್ತ ಆಹಾರ ಸರಪಳಿಯ ಅತಿಮುಖ್ಯ ಸದಸ್ಯನಾಗಿರುವ ಇವುಗಳಲ್ಲಿರುವ ಆರೂವರೆ ಸಾವಿರ ಪ್ರಭೇದಗಳ ಪೈಕಿ ಭಾರತದಲ್ಲಿ ಸುಮಾರು ನಾನೂರು ಪ್ರಭೇದದ ಕಪ್ಪೆಗಳಿದ್ದು ಅವುಗಳಲ್ಲಿ ಇನ್ನೂರರಷ್ಟು ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತವೆ. ಜಾಗತಿಕವಾಗಿ ಈಗಿರುವ ಪ್ರಭೇದಗಳಲ್ಲಿ ಅಜಮಾಸು ಶೇಕಡಾ ಮೂವತ್ತರಷ್ಟು ಈಗಾಗಲೇ ವಿನಾಶದ ಅಂಚಿಗೆ ತಲುಪಿವೆ. ಭೂಮಿಯ ಮೇಲಿನ ಚಟುವಟಿಕೆಗಳಿಂದ ಇಲ್ಲಿನ ಪರಿಸರದ ನೈಸರ್ಗಿಕ ಕಾಲಮಾನದ ಏರುಪೇರಿಗೆ ಕಾರಣೀಕರ್ತರಾಗುವ ಜತೆಗೆ ಜೀವಸಂಕುಲಕ್ಕೂ ಕುತ್ತು ತರುವ ಘನಕಾರ್ಯದಲ್ಲಿ ನಾವುಗಳು ತೊಡಗಿಸಿಕೊಂಡಿರುವುದರ ಪರಿಣಾಮವೇ ಇದೆಲ್ಲ. ಇದರ ಲೇಟೆಸ್ಟು ಉದಾಹರಣೆಯೊಂದು ಇಲ್ಲಿದೆ.
ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಮಂಡೂಕಗಳಲ್ಲಿನ ಕೆಲವು ಪ್ರಭೇದಗಳು ಇಲ್ಲಿನ ಮೂಲನಿವಾಸಿಗಳಾಗಿದ್ದು, ಆ ಪ್ರದೇಶಕ್ಕಷ್ಟೆ ಸೀಮಿತವಾಗಿವೆ. ಬೇರೆಲ್ಲೂ ಕಾಣಸಿಗದ ಅಂಥವುಗಳಲ್ಲಿ ಕೊಟ್ಟಿಗೆಹಾರ ಕುಣಿಯುವ ಕಪ್ಪೆಯೂ ಒಂದು. ಮಿಕ್ರಿಕ್ಸಾಲಿಡೇ (ಞಜ್ಚಿ್ಟ್ಡ್ಝಛಚಛಿ) ಕುಟುಂಬಕ್ಕೆ ಸೇರಿರುವ Mಜ್ಚಿ್ಟ್ಡlಠ kಟಠಿಠಿಜಿಜಛಿಜಚ್ಟಛ್ಞಿಠಜಿಠ ಎಂಬ ವೈಜ್ಜಾನಿಕ ಹೆಸರನ್ನು ಹೊಂದಿರುವ ಈ ಕಪ್ಪೆಗಳು ಸುಮಾರು ಅರವತ್ತು ಮಿಲಿಯನ್ ವರ್ಷಗಳ ಹಿಂದೆ ಭೂಮಿಗೆ ಬಂದವು ಎಂದು ಹೇಳಲಾಗುತ್ತಿದೆ. ಕೇವಲ ಕರ್ನಾಟಕದ ಪಶ್ಚಿಮಘಟ್ಟಗಳು ಹಾದುಹೋಗುವ ಮಲೆನಾಡಿನ ಪ್ರದೇಶಗಳಲ್ಲಷ್ಟೇ ಕಾಣಸಿಗುವ ಅದರಲ್ಲೂ ಮುಖ್ಯವಾಗಿ ಚಿಕ್ಕಮಗಳೂರು, ಶಿರಸಿ , ಚಾರ್ವಡಿ , ಕೊಟ್ಟಿಗೆಹಾರ ಮತ್ತು ಕೆಮ್ಮಣ್ಣುಗುಂಡಿಯ ಪ್ರದೇಶಗಳಿಗೆ ತನ್ನ ಚಟುವಟಿಕೆಗಳನ್ನು ಸೀಮಿತವಾಗಿರಿಸಿರುವ ಕಂದು ಬೆನ್ನಿನ ಒಂದು ಇಂಚಿನಷ್ಟು ಉದ್ದದ ಈ ಪುಟ್ಟ ಮಂಡೂಕ ಪಾದರಸದಂತೇ ಚಲಿಸುತ್ತ ಗಮನಸೆಳೆಯುತ್ತದೆ. 1930ರ ಆಸುಪಾಸಿನಲ್ಲಿ ಕೊಟ್ಟಿಗೆಹಾರದ ಪ್ರದೇಶದಲ್ಲಿ ಮೊದಲು ಪತ್ತೆಯಾದ ಇವುಗಳು ಆ ಕಾರಣಕ್ಕೇನೆ ತಮ್ಮ ಹೆಸರನ್ನು ಪಡೆದವು. ಈ ಕುಣಿಯುವ ಕಪ್ಪೆಗಳು ಉಗಮದಲ್ಲಿ ವಿಶಿಷ್ಟತೆಯನ್ನು ಹೊಂದಿದ್ದು ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ನೂರು ಜೀವ ಪ್ರಭೇದಗಳ ಪಟ್ಟಿಯಾಗಿರುವ ಉಈಎಉ ನಲ್ಲಿ ಸ್ಥಾನ ಪಡೆದಿರುವುದು ಅದರ ಪ್ರಾಮುಖ್ಯತೆ ತಿಳಿಸಲು ಸಾಕು.
ಕೊಟ್ಟಿಗೆಹಾರ ಕುಣಿಯುವ ಕಪ್ಪೆಗಳ ಪ್ರಮುಖ ಆಕರ್ಷಣೆಯೇ ಗಂಡು ಕಪ್ಪೆಗಳ ನಾಟ್ಯದ ಭಂಗಿ. ತನ್ನ ಬಲಗಾಲನ್ನೆತ್ತಿ ಗಾಳಿಯಲ್ಲಿ ಒದೆಯುವ ಆ ಶೈಲಿಯೇ ಅತ್ಯಂತ ವಿಶಿಷ್ಟ . ಥೇಟ್ ಜಾಕಿ ಚಾನ್ ತನ್ನ ಹಿಂದೆ ಇರೋ ಖಳರನ್ನು ಚಚ್ಚಲು ಬಳಸುತ್ತಿದ್ದ ಬ್ಯಾಕ್ ಕಿಕ್ ಶೈಲಿಯಲ್ಲೇ ಒದೆಯುವ ಈ ಪುಟ್ಗಪ್ಪೆಗಳು ಈ ಕಲೆಯನ್ನು ತಮ್ಮದೇ ಕುಲದ ಬೇರೆ ಗಂಡು ಕಪ್ಪೆಗಳಿಗೆ ತಮ್ಮ ಪೌರುಷದ ಜತೆಗೆ ತಮ್ಮ ಪ್ರದೇಶದ ವ್ಯಾಪ್ತಿಯನ್ನು ಸೂಚಿಸಲು ಬಳಸುವುದುಂಟು. ಇದೊಂಥರ ಹುಲಿ, ಚಿರತೆಗಳು ಇದು ನಂ ಏರಿಯಾ ಗುರೂ ಅಂತ ಬೇರೆಯವರಿಗೆ ತಿಳಿಸಲು ಮರಗಳ ಮೇಲೆ ಗೀರುವ , ಮೂತ್ರಿಸುವ ಪ್ರಕ್ರಿಯೆಗೆ ಸಮನಾದದ್ದು. ತನ್ನ ಈ ನೃತ್ಯಚಾತುರ್ಯವನ್ನು ಹೆಣ್ಣನ್ನು ಆಕರ್ಷಿಸಲು ಸಹ ಬಳಸಿಕೊಳ್ಳುವ ಗಂಡುಗಪ್ಪೆಯು ಮಿಲನದ ಸಮಯದಲ್ಲಿ ಹೆಣ್ಣಿನ ಹಿಂಗಾಲಿನ ಮೇಲೆ ಕಾಲೂರಿ ಬೆನ್ನ ಮೇಲೆ ಹತ್ತಿಕೂರುತ್ತದೆ. ನಂತರ ಗಾತ್ರದಲ್ಲಿ ಗಂಡಿಗಿಂತ ಸ್ವಲ್ಪ ದೊಡ್ಡದಾಗಿರುವ ಹೆಣ್ಣು ಮಂಡೂಕವು ಹರಿಯುವ ಝುರಿನೀರಿನ ಪಕ್ಕದ ಮಣ್ಣನ್ನು ತನ್ನ ಹಿಂಗಾಲಿನಿಂದ ಅಗೆದು ಗುಂಡಿಯನ್ನು ತೋಡುತ್ತದೆ. ಸುಮಾರು ಎಂಟು ಸೆಂಟಿಮೀಟರ್ ಆಳದ ಈ ಗುಂಡಿಯಲ್ಲಿ ಹೆಣ್ಣು ತನ್ನ ಮೊಟ್ಟೆಗಳನ್ನು ಬಿಡುಗಡೆ ಮಾಡಿದ ನಂತರದ್ದು ಗಂಡಿನ ಪಾಳಿ. ಹೆಣ್ಣಿನ ಬೆನ್ನಿನ ಮೇಲೆ ಕುಳಿತು ಸವಾರಿ ಮಾಡುತ್ತಲೇ ಆ ಗುಂಡಿಯಲ್ಲಿ ತನ್ನ ವೀರ್ಯಾಣುಗಳನ್ನು ಗಂಡು ಬಿಡುಗಡೆ ಮಾಡುತ್ತದೆ. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಹೆಣ್ಣು ಅದೇ ಭಂಗಿಯಲ್ಲಿ ಮತ್ತೊಮ್ಮೆ ತನ್ನ ಹಿಂಗಾಲುಗಳನ್ನು ಬಳಸಿ ತಾನು ತೋಡಿದ ಗುಂಡಿಯನ್ನು ಮುಚ್ಚುತ್ತದೆ. ಮುಂದಿನ ಹದಿನೈದು ದಿನಗಳ ನಂತರ ಆ ಗುಂಡಿಯಲ್ಲಿ ಉದ್ಭವವಾಗುವ ಗೊದಮೊಟ್ಟೆಗಳಲ್ಲಿ ಎಷ್ಟು ಬದುಕುಳಿಯುತ್ತವೆ ಎಂಬುದು ಅಲ್ಲಿ ಹರಿಯುವ ನೀರಿನ ರಾಸಾಯನಿಕ ಗುಣ, ಹವಾಮಾನ ವೈಪರೀತ್ಯ, ಹಾವು ಏಡಿಯಂತಹ ಬೇಟೆಗಾರರ ಕಾಟ ಈ ಮುಂತಾದ ವಿಷಯಗಳ ಮೇಲೆ ನಿರ್ಭರವಾಗಿರುತ್ತದೆ.
ದೇಹದ ತಾಪವನ್ನು ಬದಲಿಸುವ ಕುಣಿಯುವ ಕಪ್ಪೆಗಳು ತಮ್ಮ ತೆಳು ಚರ್ಮದ ಮೂಲಕ ಉಸಿರಾಡುತ್ತವೆ. ಹೀಗಾಗಿ, ಅವುಗಳು ಅತಿಸೂಕ್ಷ್ಮಜೀವಿಗಳಾಗಿದ್ದು ಹೊರಗಿನ ಪರಿಸರದ ಬದಲಾವಣೆಗೆ ಬಲುಬೇಗ ಸ್ಪಂದಿಸುತ್ತವೆ. ಕೆಲದಿನಗಳ ಹಿಂದೆಯಷ್ಟೇ ಇವುಗಳ ಬಗ್ಗೆ ಸಂಶೋಧನೆ ಮಾಡಿ ಮುಗಿಸಿರುವ ಬೆಂಗಳೂರು ಮೂಲದ ಡಾ. ಕೆ.ವಿ. ಗುರುರಾಜ , ಮಧುಶ್ರೀ ಮುದ್ಕೆ , ಸಂಯಮಿ ಶ್ರೀವತ್ಸ , ಪ್ರಿನ್ಸ್ ,ಅರವಿಂದ್ ಅವರ ತಂಡಕ್ಕೆ ಈ ಕಪ್ಪೆಗಳು ತಮಗೆ ಅಗತ್ಯವಾದ ಕೆಲವೊಂದು ಮೂಲ ಸೌಕರ್ಯಗಳನ್ನು ಹೊಂದಿರುವ ಕಾಡಿನ ಪರಿಸರಗಳಲ್ಲಷ್ಟೇ ಕಾಣಸಿಗುವುದು ಗಮನಕ್ಕೆ ಬಂತು. ಅವರು ಕಂಡುಕೊಂಡಂತೆ ಕೊಟ್ಟಿಗೆಹಾರ ಕುಣಿಯುವ ಕಪ್ಪೆಗಳು ಸಮುದ್ರಮಟ್ಟದಿಂದ ಮುನ್ನೂರರಿಂದ ಏಳುನೂರು ಮೀಟರ್ ಎತ್ತರದಲ್ಲಿರುವ ನಿತ್ಯಹರಿದ್ವರ್ಣ ಅಥವಾ ಅರೆನಿತ್ಯಹರಿದ್ವರ್ಣ ಕಾಡುಗಳ ಹರಿಯುವ ತೊರೆಗಳಲ್ಲಷ್ಟೇ ಕಂಡುಬರುತ್ತಿದ್ದು ಅದರಲ್ಲೂ ವಿಶೇಷವಾಗಿ ಜಾಯಿಪತ್ರೆಯ ಜಾತಿಯ ಮರಗಳ ಕೆಳಗಿನ ಜೌಗುಪ್ರದೇಶವನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತವೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಕ ಕಾಡಿನ ನಾಶ, ಜಲಮೂಲಗಳ ಮಾಲಿನ್ಯ, ಕಾಡಿನ ನಡುವೆ ಹೋಂ ಸ್ಟೇ ಹೆಸರಿನಲ್ಲಿ ನಡೆಯುತ್ತಿರುವ ಮಾನವ ಚಟುವಟಿಕೆಗಳ ಪರಿಣಾಮ ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿರುವ ಈ ಕುಣಿಯುವ ಕಪ್ಪೆಗಳು ತಮ್ಮ ನೆಲೆ ಕಳೆದುಕೊಂಡು ಅನಾಥವಾಗುತ್ತಿವೆ.
ಸಂಶೋಧನಾ ತಂಡವು ಕಂಡುಕೊಂಡಂತೆ ಕೊಟ್ಟಿಗೆಹಾರ ಕುಣಿಯುವ ಕಪ್ಪೆಗಳ ಸಂಖ್ಯೆಯು ಗಣನೀಯವಾಗಿ ಕುಸಿಯುತ್ತಿದ್ದು ಸದ್ಯಕ್ಕೆ ಮಲೆನಾಡಿನ ಹಳ್ಳಿಗಳ ಪ್ರದೇಶದಲ್ಲಿ ದೇವರಕಾನುಗಳೆಂದು ಸ್ಥಳೀಯರು ಕಾಪಿಟ್ಟಿರುವ ಅರಣ್ಯ ಪ್ರದೇಶಗಳಷ್ಟೇ ಇವುಗಳ ಪಾಲಿಗೆ ಭರವಸೆಯ ಬೆಳಕಾಗಿವೆ. ಇನ್ನೂ ಆತಂಕದ ವಿಷಯವೆಂದರೆ ತಂಡಕ್ಕೆ ಸಂಶೋಧನೆಯ ಸಮಯದಲ್ಲಿ ಅಲ್ಲಲ್ಲಿ ಸಿಕ್ಕಿದ್ದ ವಿಕಲಾಂಗ ಕಪ್ಪೆಗಳು. ಇದರ ಕುರಿತು ಈಗಾಗಲೇ ನಿರ್ಧರಿಸಲಾಗದಿದ್ದರೂ ಕೊಟ್ಟಿಗೆಹಾರ ಕಪ್ಪೆಗಳ ಮುಂದಿನ ಪೀಳಿಗೆಗೆ ಸುಧಾರಿಸಿಕೊಳ್ಳಲಾಗದಿರುವ ಏಟು ನಾವುಗಳು ಕೊಟ್ಟಿದ್ದೇವೆಯೋ ಎಂಬ ಗುಮಾನಿಯ ಲಕ್ಷಣವಂತೂ ಖಂಡಿತ ಹೌದು.
ನಮ್ಮಪರಿಸರದ ಆರೋಗ್ಯದ ಪ್ರತೀಕವಾಗಿರುವ ಜತೆಗೆ ನಮ್ಮ ಅಸ್ಮಿತೆಯ ಕುರುಹೂ ಆಗಿರುವ ಕೊಟ್ಟಿಗೆಹಾರ ಕಪ್ಪೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ದೊಡ್ಡ ಅಭಿಯಾನದ ತುರ್ತು ಇದೀಗ ಇದೆ. ಜನರಲ್ಲಿ ಅಗತ್ಯ ಅರಿವು ಮೂಡಿಸಿ ಮುಂದಿನ ಪೀಳಿಗೆಗೆ ಜವಾಬ್ದಾರಿಯನ್ನು ಹೇಳಿಕೊಡದಿದ್ದಲ್ಲಿ ನಮ್ಮಲ್ಲಿ ಮಾತ್ರ ಎಂದು ಹಿಂದೊಮ್ಮೆ ನಾವು ಬೀಗುತ್ತಿದ್ದ ಈ ಕುಣಿಯುವ ಕಪ್ಪೆಯ ನೃತ್ಯ ಖಾಯಮ್ಮಾಗಿ ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗದಿರಲಿ ಎಂದು ಎಲ್ಲ ಕನ್ನಡಿಗರೂ ಆಶಿಸೋಣ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)