ಈ ಖಲಿಸ್ತಾನಿ ಭಯೋತ್ಪಾದಕ/ಕಾರ್ಯಕರ್ತರ ಜತೆಗೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಂದಾಜು 15 ಇಸ್ಲಾಮಿಕ್ ಭಯೋತ್ಪಾದಕರ ಹತ್ಯೆಯಾಗಿದೆ. ಅವರಲ್ಲಿ ಅತಿ ಪ್ರಮುಖರೆಂದರೆ ಕಳೆದವಾರ ಪಾಕ್-ಅಘ್ಘನ್ ಗಡಿಯಲ್ಲಿ ಕೊಲೆಯಾದ ಲಷ್ಕರ್-ಎ-ತೋಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ನ ಮಗ ಕಮಾಲುದ್ದೀನ್ ಸಯೀದ್. ಇದಕ್ಕಿಂತಲೂ ದೊಡ್ಡ ಸುದ್ದಿಯೆಂದರೆ ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೊಷಿತನಾದ ಕುಖ್ಯಾತ ಭಯೋತ್ಪಾದಕ ಅಬ್ದುಲ್ ರಹಮಾನ್ ಮಕ್ಕಿ ಸಹಾ ಕಳೆದ ವಾರವೇ ಕರಾಚಿಯಲ್ಲಿ ಅಥವಾ ಲಾಹೋರ್ನಲ್ಲಿ ಹತ್ಯೆಯಾಗಿದ್ದಾನೆ ಎನ್ನುವುದು.
ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯ ಎಸಗುವವರ ‘ಘರ್ ಮೆ ಘುಸ್ ಕೆ ಮಾರೇಂಗೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ಸಾರ್ವಜನಿಕವಾಗಿಯೇ ಘೊಷಿಸಿದ್ದಾರೆ. ಅದನ್ನು ಸೆಪ್ಟೆಂಬರ್ 2016ರಲ್ಲಿ ಮತ್ತು ಫೆಬ್ರವರಿ 2019ರಲ್ಲಿ ಮಾಡಿದ್ದಾರೆ ಸಹಾ. ಆ ಬಾಲಾಕೋಟ್ ದಾಳಿಯಾದ ಮೇಲೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ, ಅತಿ ಕರಾಳ ಭಯೋತ್ಪಾದಕ ಮಾಸೂದ್ ಅಜರ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆ ದಾಳಿಯಲ್ಲಿ ಆತ ಸತ್ತಿರಬಹುದು ಎಂಬ ಶಂಕೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹತ್ತು ತಿಂಗಳುಗಳಿಂದ ನಡೆಯುತ್ತಿರುವ ಖಲಿಸ್ತಾನಿ ಮತ್ತು ಪಾಕಿಸ್ತಾನಿ ಭಯೋತ್ಪಾದಕರ ಹತ್ಯೆಗಳೂ ಮೋದಿ ಸರ್ಕಾರದ ಮನೆಯೊಳಗೆ ನುಗ್ಗಿ ಹೊಡೆಯುವ ಕಾರ್ಯಕ್ರಮದ ಭಾಗವಾಗಿರಬಹುದು ಎಂಬ ಶಂಕೆ ಭಯೋತ್ಪಾದಕ ಸಂಘಟನೆಗಳಿಂದ ವ್ಯಕ್ತವಾಗಿದೆ. ಈ ಶಂಕೆ ಸಹಜವಾಗಿಯೇ ಊಹೆಯ ರೂಪದಲ್ಲಿ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಮಾಧ್ಯಮಗಳಲ್ಲಿ ಮತ್ತು ವಿಶ್ಲೇಷಕರ ನಡುವೆ ಚರ್ಚೆಯಲ್ಲಿ ಸುಳಿದುಹೋಗುತ್ತಿದೆ.
ಆದರೆ, ಈ ಶಂಕೆ/ಊಹೆಗಳಿಗೆ ಸರ್ಕಾರಿ ಮಟ್ಟದಲ್ಲಿ ಮಾನ್ಯತೆ ಕಂಡುಬಂದಿಲ್ಲ. ಅವತಾರ್ ಸಿಂಗ್ ಖಾಂಡಾ ಮೃತಪಟ್ಟದ್ದು ಆನಾರೋಗ್ಯದಿಂದಷ್ಟೇ ಎಂದು ಬ್ರಿಟಿಷ್ ಪೊಲೀಸ್ ಹೇಳಿದೆ. ತನ್ನ ನೆಲದಲ್ಲಿ ಘಟಿಸಿದ ಹತ್ಯೆಗಳ ಕುರಿತಾಗಿ ಪಾಕಿಸ್ತಾನ ಸಹಾ ಸದ್ದೇನೂ ಮಾಡುತ್ತಿಲ್ಲ. ಹೀಗಾಗಿ, ಇವುಗಳ ಹಿಂದೆ ಭಾರತದ ವಿದೇಶ ಗುಪ್ರಚರ ಸಂಸ್ಥೆ ರಾ ಇದೆ ಎನ್ನುವ ಊಹೆಗೆ ಪುಷ್ಟಿ ಸಿಗುತ್ತಿಲ್ಲ. ಹೀಗಾಗಿ, ಇಂದು ಹಣದ ತೀವ್ರ ಕೊರತೆ ಎದುರಿಸುತ್ತಿರುವ ಪಾಕಿಸ್ತಾನದ ಕುಖ್ಯಾತ ಸರ್ಕಾರಿ ಭಯೋತ್ಪಾದಕ ಸಂಸ್ಥೆ ಐಎಸ್ಐ ತನ್ನ ‘ಹೆಚ್ಚುವರಿ ಹೊರೆ’ಯನ್ನು ಇಳಿಸಿಕೊಳ್ಳುವ ಉದ್ದೇಶದಿಂದ ತಾನು ಸಾಕುತ್ತಿದ್ದ ಭಯೋತ್ಪಾದಕರನ್ನು ಈಗ ತಾನೇ ಕೊಲ್ಲುತ್ತಿದೆ ಎಂಬ ಊಹೆಯೂ ದೊಡ್ಡದಾಗಿ ಏಳತೊಡಗಿದೆ. ಆದರೆ, ಮಕ್ಕಿ ಮತ್ತು ಕಮಾಲುದ್ದೀನ್ನ ಹತ್ಯೆಗಳನ್ನು ಪಾಕಿಸ್ತಾನವೇ ಮಾಡುವುದು ಅಸಂಭವ. ಇದು ದಾರಿಮಾಡಿಕೊಡುತ್ತಿರುವ ಮತ್ತೊಂದು ಊಹೆಯೆಂದರೆ ಇಸ್ಲಾಮಿಕ್ ಭಯೋತ್ಪಾದಕರ ಹತ್ಯೆಗಳಲ್ಲಿ ಅಫ್ಘನ್ ಹಾಗೂ ಪಾಕ್ ತಾಲಿಬಾನ್ಗಳು ಭಾಗಿಯಾಗಿರಬಹುದು ಎನ್ನುವುದು. ಐಎಸ್ಐ ಇಸ್ಲಾಮಿಕ್ ಉಗ್ರರನ್ನು ಸಾಕುತ್ತಿದ್ದುದು ಅಫ್ಘಾನಿಸ್ತಾನದಿಂದ ಬರುತ್ತಿದ್ದ ಹೇರಳ ಮಾದಕ ದ್ರವ್ಯಗಳನ್ನು ಪರಿಷ್ಕರಿಸಿ ಜಗತ್ತಿನಾದ್ಯಂತ ಮಾರುವುದರಿಂದ ಬರುತ್ತಿದ್ದ ಅಗಾಧ ಹಣದಿಂದ. ಈ ವ್ಯವಹಾರದಲ್ಲಿ ಐಎಸ್ಐ, ಅಫ್ಘನ್ ತಾಲಿಬಾನ್, ಪಾಕ್ ತಾಲಿಬಾನ್ ಮತ್ತು ಪಾಕ್ ನೆಲದಲ್ಲಿರುವ ಭಾರತ-ವಿರೋಧಿ ಭಯೋತ್ಪಾದಕ ಸಂಘಟನೆಗಳೆಲ್ಲವುಗಳ ನಡುವೆ ಹೊಂದಾಣಿಕೆಯಿತ್ತು. ಆದರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಬಂದಾಗಿನಿಂದ ಗಾಂಜಾ ಉತ್ಪಾದನೆ ಗಣನೀಯವಾಗಿ ಕುಗ್ಗಿಹೋಗಿದೆ. ಹೆಲ್ಮಂಡ್ ಪ್ರಾಂತ್ಯವೊಂದರಲ್ಲೇ ಹಿಂದೆ 1,23,000 ಹೆಕ್ಟೇರ್ಗಳಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಅದೀಗ ಕೇವಲ 7,800 ಹೆಕ್ಟೇರ್ಗಳಿಗೆ ಇಳಿದಿದೆ! ಹೀಗೆ ಗಾಂಜಾ ಉತ್ಪಾದನೆ ಈ ಪ್ರಮಾಣದಲ್ಲಿ ಕುಗ್ಗಿರುವುದರಿಂದ ಅದರಿಂದ ಬರುತ್ತಿದ್ದ ಆದಾಯವೂ ಕುಗ್ಗಿಹೋಗಿದೆ. ಹೀಗಾಗಿ ತಂತಮ್ಮ ಪಾಲಿಗಾಗಿ ಹಿಂದಿನ ಘನಿಷ್ಟ ಸಹಯೋಗಿಗಳ ನಡುವೆ ತಗಾದೆಯೆದ್ದಿದೆ. ಇದು ಪರಸ್ಪರರ ಮೇಲಿನ ದಾಳಿ ಮತ್ತು ಕೊಲೆಗಳಿಗೆ ಕಾರಣವಾಗುತ್ತಿದೆ. ಈ ತಗಾದೆಯ ಬಿಸಿ ಪಾಕ್ ಐಎಸ್ಐ ಕೆನಡಾದ ನೆಲದಲ್ಲಿ ಸಾಕುತ್ತಿದ್ದ ಖಲಿಸ್ತಾನಿ ಉಗ್ರರಿಗೂ ತಟ್ಟಿದೆ. ಅವರದೇ ಹತ್ತು ಹಲವು ದುಷ್ಟಕೂಟಗಳು ಪರಸ್ಪರ ಕಚ್ಚಾಡತೊಡಗಿವೆ. ಈ ಕಿತ್ತಾಟದಲ್ಲಿ ಕೆನಡಾದಲ್ಲೇ ಆಶ್ರಯ ಪಡೆದಿರುವ ಮೆಕ್ಸಿಕನ್ ದಂಧೆಗಾರರೂ ಕೈ ಸೇರಿಸಿಬಿಟ್ಟಿದ್ದಾರೆ. ಅದರಿಂದಾಗಿ ಕೆನಡಾದಲ್ಲಿ ಇತ್ತೀಚೆಗೆ ದುಷ್ಟಕೂಟಗಳ ನಡುವಿನ ಘರ್ಷಣೆ (ಗ್ಯಾಂಗ್ ವಾರ್) 2021ರಲ್ಲೇ ಎರಡು ಸಾವಿರ ಪಟ್ಟು ಹೆಚ್ಚಿತು! ಇದೆಲ್ಲವೂ ಹೇಳುವುದೇನೆಂದರೆ ಕೆನಡಾ, ಇಟಲಿ, ಬ್ರಿಟನ್ ಮತ್ತು ಪಾಕಿಸ್ತಾನಗಳಲ್ಲಿ ನಡೆಯುವುತ್ತಿರುವ ಹತ್ಯೆಗಳ ಹಿಂದೆ ಒಂದಕ್ಕಿಂತ ಹೆಚ್ಚು ಕೈಗಳಿವೆ. ಉಳಿದೆಲ್ಲಾ ಹತ್ಯೆಗಳನ್ನು ಕಡೆಗಣಿಸಿ ಕೇವಲ ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆಯೊಂದನ್ನೇ ಹಿಡಿದುಕೊಂಡ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೋ, ಉಳಿದೆಲ್ಲಾ ಕಾರಣಗಳನ್ನೂ ಬದಿಗೊತ್ತಿ ಭಾರತವನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿದ್ದಾರೆ. ಸೆಪ್ಟೆಂಬರ್ 18ರಂದು ಅವರು ತಮ್ಮ ದೇಶದ ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್ನಲ್ಲಿ ಎದ್ದು ನಿಂತು ಕೆನಡಾದ ನಾಗರಿಕ ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆ ಮತ್ತು ಭಾರತ ಸರ್ಕಾರದ ಹಸ್ತಕರ ನಡುವೆ ಬಲವಾದ ಸಂಬಂಧವಿರುವ ವಿಶ್ವಾಸಾರ್ಹ ಆರೋಪಗಳನ್ನು ಕೆನಡಾದ ತನಿಖಾ ತಂಡಗಳು ಕೆಲವು ವಾರಗಳಿಂದಲೂ ಗಮನವಿಟ್ಟು ಶೋಧಿಸುತ್ತಿವೆ ಎಂದು ಹೇಳಿದ್ದಲ್ಲದೆ, ತನಿಖೆಯಲ್ಲಿ ಭಾರತ ಸರ್ಕಾರ ಸಹಕರಿಸಬೇಕೆಂದು ಕೋರಿದರು. ತಮ್ಮ ಆರೋಪವನ್ನು ಮತ್ತಷ್ಟು ಗಂಭೀರವಾಗಿಸಲು ನಿಜ್ಜರ್ ಹತ್ಯೆಯ ಹಿಂದೆ ಇರುವುದಾಗಿ ಹೇಳಿ ಭಾರತೀಯ ರಾಯಭಾರ ಕಚೇರಿಯಲ್ಲಿದ್ದ ನಮ್ಮ ರಾ ಅಧಿಕಾರಿಯನ್ನು ಉಚ್ಚಾಟಿಸಿಯೂಬಿಟ್ಟರು.
ಆದರೆ, ತಮ್ಮ ಆರೋಪಕ್ಕೆ ಆಧಾರಗಳೇನು ಎಂದು ಭಾರತ, ವಿರೋಧ ಪಕ್ಷದ ನಾಯಕ ಪಿಯೆ ಪಾಲಿಯೆವ್ರ್ ಸೇರಿದಂತೆ ಕೆನಡಾದ ಹಲವರು ರಾಜಕೀಯ ನೇತಾರರು, ಟೊರಾಂಟೋ ಸನ್ ಸೇರಿದಂತೆ ಕೆನಡಾದ ಮಾಧ್ಯಮ ಕೇಳುತ್ತಿರುವ ಪ್ರಶ್ನೆಗಳಿಗೆ ಎರಡು ವಾರಗಳಾದರೂ ಟ್ರೂಡೋ ಉತ್ತರ ನೀಡಿಲ್ಲ. ನೀಡಲು ಅವರಲ್ಲಿ ಏನೂ ಇಲ್ಲ ಎನ್ನುವುದೂ ಇತ್ತೀಚೆಗೆ ಸ್ಪಷ್ಟವಾಗುತ್ತಿದೆ. ಆದರೆ, ಅವರೇಕೆ ಹೀಗೆ ಮಾಡಿದರು ಎನ್ನುವ ಬಗ್ಗೆ ನಮಗೆ ಉತ್ತರಗಳು ಸಿಗುತ್ತಿವೆ. ನಿಜ್ಜರ್ ಹತ್ಯೆ ಮತ್ತು ತಥಾಕಥಿತ ತನಿಖೆಯ ಬಗ್ಗೆ ಅಲ್ಲಿನ ಮತ್ತು ಅಮೆರಿಕಾದ ಮಾಧ್ಯಮಗಳೇ ತಮ್ಮದೇ ತನಿಖೆ ನಡೆಸಿ ಆಸಕ್ತಿಕರ ವಿವರಗಳನ್ನು ಹೊರಗೆಡಹುತ್ತಿವೆ. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಂತೂ ಸೆಪ್ಟೆಂಬರ್ 25ರಂದು ವಿವರವಾದ ತನಿಖಾ ವರದಿಯನ್ನೇ ಪ್ರಕಟಿಸಿಬಿಟ್ಟಿದೆ. ಅಷ್ಟೇ ಅಲ್ಲ, ಸೆಕ್ಯುರಿಟಿ ಕ್ಯಾಮೆರಾ ಸೆರೆಹಿಡಿದ ಹತ್ಯೆಯ ದೃಶ್ಯವನ್ನು ಜಗತ್ತಿಗೆ ಬಯಲುಮಾಡಿದೆ. ಅವೆಲ್ಲವುಗಳಿಂದ ನಮಗೆ ಸಿಗುವ ವಿವರಗಳು ಆಸಕ್ತಿಕರ ಹಾಗೂ ಮಹತ್ವಪೂರ್ಣ.
ಜೂನ್ 18ರ ಸಂಜೆ ಎಂಟು ಗಂಟೆಯ ಸುಮಾರಿಗೆ ವ್ಯಾಂಕೂವರ್ ನಗರದ ಉಪನಗರ ಸರ್ರೆಯಲ್ಲಿನ ಗುರುನಾನಕ್ ಸಿಖ್ ಗುರುದ್ವಾರದ ರ್ಪಾಂಗ್ ಏರಿಯಾದಿಂದ ತನ್ನ ಪಿಕ್ಅಪ್ ಟ್ರಕ್ನಲ್ಲಿ ಹೊರಟ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಒಂದು ಬಿಳಿ ಸೆಡಾನ್ ಅಡ್ಡಗಟ್ಟಿತು. ಆಗ ಮರೆಯಿಂದ ಹೊರಬಂದ ಇಬ್ಬರು ಮುಸುಕುಧಾರಿಗಳು ನಿಜ್ಜರ್ನ ಮೇಲೆ ಸುಮಾರು ಐವತ್ತು ಗುಂಡುಗಳನ್ನು ಹಾರಿಸಿದ್ದಾರೆ. ಅವುಗಳಲ್ಲಿ ಮೂವತ್ತನಾಲ್ಕು ಗುಂಡುಗಳು ನಿಜ್ಜರ್ಗೆ ತಾಗಿವೆ. ನಂತರ ಅವರಿಬ್ಬರೂ ಸ್ವಲ್ಪದೂರ ಓಡಿ ಹೋಗಿ ಸೆಡಾನ್ ಹತ್ತಿ ಪರಾರಿಯಾಗಿದ್ದಾರೆ. ಅವರನ್ನು ನೋಡಿದ ಮಲ್ಕೀತ್ ಸಿಂಗ್ ಹೇಳುವ ಪ್ರಕಾರ ಅವರಿಬ್ಬರೂ ಸಿಖ್ಖರೇ. ತಮ್ಮ ಶಿಖೆಯನ್ನು ಹುಡೆಡ್ ಸ್ವೆಟ್ ಶರ್ಟ್ಗಳು ಮತ್ತು ಗಡ್ಡವನ್ನು ಮುಸುಕಿನಿಂದ ಅವರು ಮರೆ ಮಾಡಿಕೊಂಡಿದ್ದರು.
ಗುಂಡೇಟು ತಿಂದ ನಿಜ್ಜರ್ನ ಮೃತದೇಹವನ್ನು ಮೊದಲು ರ್ಸ³ಸಿದ್ದು ಗುರುದ್ವಾರದ ಕಾರ್ಯಕರ್ತರಲ್ಲೊಬ್ಬರಾದ ಭೂಪೀಂದರ್ಜಿತ್ ಸಿಂಗ್. ಆಮೇಲೆ ಅಲ್ಲಿ ಜನ ಸೇರಿದರು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಅವರಲ್ಲಿ ಕೆಲವರಿಂದ ಪಡೆದುಕೊಂಡಿರುವ ಮಾಹಿತಿಯ ಪ್ರಕಾರ ಹತ್ಯೆಯಾದ ಇಪ್ಪತ್ತು ನಿಮಿಷಗಳ ನಂತರ 8 - 27ಕ್ಕೆ ಸ್ಥಳಕ್ಕೆ ಪೊಲೀಸರು ಆಗಮಿಸಿದರೂ ವಿಷಯವನ್ನು ಯಾರು ಕೈಗೆತ್ತಿಕೊಳ್ಳಬೇಕೆನ್ನುವುದರ ಬಗ್ಗೆ ಸರ್ರೆ ಪೊಲೀಸರು ಮತ್ತು ರಾಯಲ್ ಕೆನೇಡಿಯನ್ ಮೌಂಟೆಡ್ ಪೊಲಿಸ್ ನಡುವೆ ಸುಮಾರು ಒಂದು ಗಂಟೆ ವಾದವಿವಾದ ನಡೆಯಿತು. ಅಷ್ಟರಲ್ಲಿ ಹತ್ಯಾಕಾರಿಗಳು ಎಷ್ಟೋ ದೂರ ಪರಾರಿಯಾಗಿದ್ದರು. ಅನಂತರವೂ ಈ ವಿಷಯದಲ್ಲಿ ಗಂಭೀರ ತನಿಖೆ ಆರಂಭವಾಗುವಂತೆ ಕಾಣುವುದಿಲ್ಲ. ಮಲ್ಕೀತ್ ಸಿಂಗ್ ಹೇಳುವಂತೆ ಹತ್ಯಾಕಾರಿಗಳು ಓಡಿದ ಮತ್ತು ಅವರನ್ನು ಹೊತ್ತ ಟೊಯೋಟಾ ತಯಾರಿಕೆಯ ಬಿಳಿ ಸೆಡಾನ್ ಹಾದುಹೋದ ರಸ್ತೆಯಲ್ಲಿರುವ ಮೂವತ್ತೊಂಬತ್ತು ನಿವಾಸಗಳು ಮತ್ತು ವ್ಯವಹಾರ ಸ್ಥಳಗಳ ಯಾರೊಬ್ಬರನ್ನೂ ಪೊಲೀಸರು ಪ್ರಶ್ನಿಸಿ ವಿವರ ಪಡೆದುಕೊಂಡಿಲ್ಲ! ಇದು ಬಯಲಿಗೆ ಬಂದಿರುವುದು ಪತ್ರಿಕೆಯ ವರದಿಗಾರರು ಅಲ್ಲೆಲ್ಲಾ ಸುತ್ತಾಡಿ ಜನರ ಜತೆ ಮಾತಾಡಿದಾಗ.
ಹತ್ಯೆಯಾದ ತಿಂಗಳ ನಂತರ ಜುಲೈ 21ರಂದು ಪೊಲೀಸರು ಎಚ್ಚೆತ್ತು ಘಟನೆಯ ಹಾಗೂ ಹತ್ಯಾಕಾರಿಗಳ ಕುರಿತಾಗಿ ತಮ್ಮಲ್ಲಿ ಯಾವುದೇ ಮಾಹಿತಿ ಇದ್ದಲ್ಲಿ ಅದನ್ನು ತನಿಖಾ ತಂಡದೊಂದಿಗೆ ಹಂಚಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಾಗ. ಮತ್ತೆ ಬಿಳಿ ಸೆಡಾನ್ ಬಗ್ಗೆ ಮಾಹಿತಿ ಇದ್ದಲ್ಲಿ ತಮಗೆ ನೀಡುವಂತೆ ಆಗಸ್ 14ರಂದು ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ. ಇದೇ ಸಮಯದಲ್ಲಿ ಪತ್ರಿಕಾಗೋಷ್ಠಿಯೊಂದನ್ನೂ ಕರೆದು ನಿಜ್ಜರ್ ಹತ್ಯೆಯಲ್ಲಿ ವಿದೇಶಿ ಕೈ ಇಲ್ಲ, ಇದು ಸ್ಥಳೀಯ ದುಷ್ಟಕೂಟಗಳ ನಡುವಿನ ಘರ್ಷಣೆ (ಗ್ಯಾಂಗ್ ವಾರ್) ಎಂದೂ ಹೇಳಿದ್ದಾರೆ. ಇದೆಲ್ಲವೂ ಟ್ರೂಡೋ ಸರ್ಕಾರಕ್ಕೆ ತಿಳಿದೇ ಇದೆ. ಆದರೂ ಅವರು ಹೇಳುವುದು ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರವಿದೆಯೆಂದು. ಅದಕ್ಕೆ ಫೈವ್ ಐಸ್ ಅಲಯನ್ಸ್ನ ಸದಸ್ಯ ರಾಷ್ಟ್ರವೊಂದರಿಂದ ಸ್ಪಷ್ಟ ಬೇಹುಗಾರಿಕಾ ಮಾಹಿತಿ ದೊರಕಿದೆ ಎಂದು. ಫೈವ್ ಐಸ್ ಅಲಯನಸ್ ಎನ್ನುವುದು ಐದು ಆಂಗ್ಲೋ-ಸ್ಯಾಕ್ಸನ್ ದೇಶಗಳಾದ ಅಮೆರಿಕಾ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗಳು ಪರಸ್ಪರ ಬೇಹುಗಾರಿಕಾ ಮಾಹಿತಿ ವಿನಿಮಯಕ್ಕಾಗಿ ರಚಿಸಿಕೊಂಡಿರುವ ಒಂದು ಕೂಟ. ನಿಜ್ಜರ್ ಹತ್ಯೆಯ ಕುರಿತಾಗಿ ಕೆನಡಾಗೆ ಅಮೆರಿಕಾ ಮಾಹಿತಿ ನೀಡಿದೆ ಎನ್ನುವ ಊಹೆಗಳು, ಮಾತುಗಳು ಕೇಳಿಬರುತ್ತಿವೆ. ಇದನ್ನು ಕೆನಡಾದಲ್ಲಿರುವ ಅಮೆರಿಕನ್ ರಾಯಭಾರಿ ರಾಬರ್ಟ್ ಕೊಹೇನ್ ಸಹಾ ಹೇಳುತ್ತಾರೆ.
ಈ ಕುರಿತಾಗಿ ಕೆನಡಾ ಸರ್ಕಾರ ಹೇಳುವುದು ತನ್ನ ಫೈವ್ ಐಸ್ ಅಲಯನ್ಸ್ನ ಸಹಯೋಗಿ ರಾಷ್ಟ್ರವೊಂದರಿಂದ ತನಗೆ ದೊರಕಿರುವುದು ಸಿಗ್ನಲ್ ಇಂಟೆಲಿಜೆನ್ಸ್ ಅಂತ. ಹಾಗೆಂದರೆ ಟೆಲಿಫೋನ್ ಸಂಭಾಷಣೆ ಅಥವಾ ಇತರ ತಾಂತ್ರಿಕ ಸಂಪರ್ಕ ಮಾಧ್ಯಮಗಳ ಮೂಲಕ ನಡೆಯುವ ಮಾತುಕತೆಗಳ ಆಲಿಕೆ. ಕೆನಡಾದಲ್ಲಿನ ಭಾರತೀಯ ದೂತಾವಾಸದ ಅಧಿಕಾರಿಗಳ ಮಾತುಗಳು ಈ ಬಗೆಯಾಗಿ ಕೆನಡಾಗೆ ಲಭಿಸಿವೆಯಂತೆ. ಜತೆಗೆ, ತನ್ನಲ್ಲಿ ಹ್ಯೂಮನ್ ಇಂಟಲಿಜೆನ್ಸ್ ಮಾಹಿತಿ ಅಂದರೆ ಮನುಷ್ಯರ ಹೇಳಿಕೆಗಳು ಮತ್ತು ಸಾಕ್ಷ್ಯಗಳೂ ಇವೆಯೆಂದು ಟ್ರೂಡೋ ಸರ್ಕಾರ ಹೇಳುತ್ತಿದೆ. ಈ ವಿಷಯದ ಸತ್ಯಾಸತ್ಯತೆ ಇನ್ನೂ ಸ್ಪಷ್ಟವಾಗಿಲ್ಲ. ಯಾಕೆಂದರೆ ಯಾರು ಕೇಳಿದರೂ ತನ್ನಲ್ಲೇನಿದೆಯೆಂದು ಟ್ರುಡೋ ಸರ್ಕಾರ ಹೇಳುತ್ತಿಲ್ಲ!
ಈ ನಡುವೆ ಮೃತ ಹರ್ದೀಪ್ ಸಿಂಗ್ ನಿಜ್ನರ್ನ ಮಗ ಬಲರಾಜ್ ಸಿಂಗ್ ನಿಜ್ಜರ್ ಸ್ಪೋಟಕ ಮಾಹಿತಿಯೊಂದನ್ನು ಹೊರಗೆಡಹಿದ್ದಾರೆ. ಪ್ರಧಾನಮಂತ್ರಿ ಟ್ರೂಡೋ ಭಾರತದ ಮೇಲೆ ಸಾರ್ವಜನಿಕವಾಗಿ ಆಪಾದನೆ ಹೊರಿಸುವವರೆಗೂ ತನಿಖೆ ಎಷ್ಟು ಮುಂದುವರಿದಿದೆ ಎಂದೇ ತಮ್ಮ ಕುಟುಂಬದವರಿಗೆ ಗೊತ್ತಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ ಜಲರಾಜ್ ನಿಜ್ಜರ್ ಮುಂದುವರಿದು, ಕೆನಡಾದ ಬೇಹುಗಾರಿಕಾ ದಳ ಕೆನೇಡಿಯನ್ ಸೆಕ್ಯೂರಿಟಿ ಇಂಟೆಲಿಜೆನ್ಸ್ ಸರ್ವೀಸಸ್ (ಸಿಎಸ್ಐಎಸ್) ಅಧಿಕಾರಿಗಳು ತಮ್ಮ ತಂದೆಯನ್ನು ಕಳೆದ ಫೆಬ್ರವರಿಯಿಂದ ವಾರಕ್ಕೆ ಎರಡು-ಮೂರು ಸಲ ಭೇಟಿಯಾಗುತ್ತಿದ್ದರು ಎಂದು
ವ್ಯಾಂಕೂವರ್ ಸನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇಂತಹ ಕೆಲವು ಭೇಟಿಗಳಲ್ಲಿ ತಾವೂ ಇದ್ದುದಾಗಿ ಹೇಳುವ ಕಿರಿಯ ನಿಜ್ಜರ್, ಪ್ರಾಣಾಪಾಯದ ಭಯ ಹೊಂದಿದ್ದ ತನ್ನ ತಂದೆ ತಮಗೆ ಬುಲೆಟ್-ಪೂ›ಫ್ ವೆಸ್ಟ್ ನೀಡುವಂತೆ ಸಿಎಸ್ಐಎಸ್ ಅಧಿಕಾರಿಗಳನ್ನು ಕೇಳಿಕೊಂಡಿದ್ದರೂ ಅಧಿಕಾರಿಗಳು ಅಂಥದೇನನ್ನೂ ಒದಗಿಸಲಿಲ್ಲವೆಂದೂ ಆಪಾದಿಸಿದ್ದಾರೆ.
ಹಾಗಿದ್ದರೆ, ಸಿಎಸ್ಐಎಸ್ ಅನ್ನು ತಮ್ಮ ಅಧೀನದಲ್ಲೇ ಇಟ್ಟುಕೊಂಡಿರುವ ಟ್ರೂಡೋಗೆ ಇದಾವುದೂ ತಿಳಿದಿರಲಿಲ್ಲವೇ? ಕೊಳಾಯಿಗಾರನ ವೃತ್ತಿಯ ನಡುವೆ ಧಾರ್ವಿುಕ ಕೆಲಸಗಳನ್ನು ಮಾಡಿಕೊಂಡು ಬದುಕುತ್ತಿದ್ದ ‘ಕೆನಡಾದ ಸತ್ಪ್ರಜೆ’ ಹರ್ದೀಪ್ ಸಿಂಗ್ ನಿಜ್ಜರ್ಗೆ ಪ್ರಾಣಾಪಾಯ ಒಡ್ಡಿದ್ದವರು ಯಾರು? ಅದಾವುದನ್ನೂ ಶೋಧಿಸದೇ ಹತ್ಯೆಯ ಆರೋಪವನ್ನು ಟ್ರೂಡೋ ಭಾರತ ಸರ್ಕಾರದ ಮೇಲೇ ಹೊರಿಸಿದ್ದು ಯಾಕೆ? ಈ ಪ್ರಶ್ನೆಗಳಿಗೆ ಉತ್ತರ ಮುಂದಿನ ವಾರ ಲೇಖನದ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)