ಮೇಲಿನದು ಕಲಬುರ್ಗಿಯಿಂದ ಸಂಜೀವ ಜೋಷಿ ಎಂಬ ಹಿರಿಯ ಓದುಗರೊಬ್ಬರು ಕೈಬರಹದಲ್ಲಿ ಬರೆದು ಅದರ ಛಾಯಾಪ್ರತಿ ತೆಗೆದು ವಾಟ್ಸ್ ಆಪ್ನಲ್ಲಿ ಕಳುಹಿಸಿದ ಪತ್ರ. ವಿಜಯವಾಣಿಯಲ್ಲಿ ‘ಕಟ್ಟುವೆವು ನಾವು...’ ಅಂಕಣಕ್ಕಾಗಿ ಕನ್ನಡ ಪದಗಳ ಹುಡುಕಾಟದ ಅವರ ಅನುಭವವೇ ಇನ್ನೂ ಅನೇಕ ಓದುಗಮಿತ್ರರದು ಎಂದುಕೊಂಡಿದ್ದೇನೆ. ಆದ್ದರಿಂದ ಪ್ರಾತಿನಿಧಿಕವಾಗಿ ಅವರ ಪತ್ರವನ್ನಿಲ್ಲಿ ಸೇರಿಸಿಕೊಂಡಿದ್ದೇನೆ. ಟಿ-ಶರ್ಟ್ಗೆ ಸಮಾನಾರ್ಥಕವೆಂದು ಬಂದಿರುವ ಕನ್ನಡ ಪದಗಳ ವೈವಿಧ್ಯ ಕಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಕನ್ನಡ ಭಾಷೆಯ ಸಾಧ್ಯತೆಗಳ ಬಗ್ಗೆ ತುಂಬ ಹೆಮ್ಮೆಯೆನಿಸುತ್ತದೆ. ಇಷ್ಟೊಂದು ಸುಂದರ ಸಮರ್ಥ ಪದಗಳಲ್ಲಿ ಯಾವ ಒಂದನ್ನು ಆರಿಸುವುದೆಂಬ ಸಂದಿಗ್ಧತೆಯಂತೂ- ಥೇಟ್ ಸೀರೆಯಂಗಡಿಯಲ್ಲಿ ಹೆಂಗಳೆಯರಿಗಾಗುವ ಪರಿಸ್ಥಿತಿಯಂಥದೇ!
ತಿರಸ್ಕರಿಸಲು ಮನಸ್ಸಾಗದೆ ಮೊದಲ ಹಂತದಲ್ಲಿ ಆಯ್ದುಕೊಂಡ ಪದಗಳ ಮೇಲೊಮ್ಮೆ ಕಣ್ಣಾಡಿಸಿ. ಆಗ ನಿಮಗೂ ಗೊತ್ತಾಗುತ್ತದೆ. ‘ಚೆಲುವಂಗಿ’ ಎಂಬ ಪದವನ್ನೇ ಸೂಚಿಸಿದ ಇನ್ನಿಬ್ಬರು: ಗಿರೀಶ ಕೆ.ಎಸ್. ಮತ್ತು ಬೊ. ನಾ. ಕೃಷ್ಣಮೂರ್ತಿ. ಅದೇ ಅರ್ಥದಿಂದ ‘ನವಿರಂಗಿ’ (ವೆಂಕೋಬರಾವ್ ಕೆಂಚನಪುರ), ‘ಮುದ್ದಂಗಿ’ (ಸೀತಾ ವ್ಯಾಸಮುದ್ರಿ) ಪದಗಳು; ಹಾಕಿಕೊಳ್ಳಲಿಕ್ಕೆ ಸುಲಭವೆಂಬ ಕಾರಣದಿಂದ ‘ಸರಳಂಗಿ’ (ಸುಮಂತ ಪ್ರಭು, ಲಕ್ಷ್ಮೀಕಾಂತ ಪಾಟೀಲ್, ಅಭಯ ನರಸಿಂಹ ಚಿಂತಾಮಣಿ, ರಮಾನಾಥ ಮೈಸೂರು); ‘ಸುಲಭಂಗಿ’ (ಆರ್.ವಿ.ಮೂರ್ತಿ); ‘ಸುಳುವಂಗಿ’ (ನಿತ್ಯಾನಂದ ಬ್ರಹ್ಮಾವರ); ‘ಆರಾಮಂಗಿ’ (ಶ್ರೀಲತಾ ಮೈಸೂರು, ವಸುಮತಿ ಮೈಸೂರು); ‘ಲಘುವಂಗಿ’ (ಶಿವಾನಂದ ಸಂಡೂರು); ‘ಹಿತಂಗಿ’ (ರಾಮಮೋಹನ ಸಿ.ಎನ್.); ಬೆರ್ಚಪ್ಪನಿಗೂ ತೊಡಿಸಬಹುದಾದ್ದರಿಂದ ‘ಬೆರ್ಚಪ್ಪಂಗಿ’ (ಪ್ರಭುಪ್ರಸಾದ್ ನಡುತೋಟ, ಎನ್. ವಿ. ಶಂಕರ್). ಖ ಅಂದರೆ ಕವಲಿನ ಆಕಾರ ಆದ್ದರಿಂದ ‘ಕವಲಂಗಿ’ (ಜಗದಂಬಾ ಬೆಂಗಳೂರು, ರಾಧಾಕೃಷ್ಣ ಕಲ್ಚಾರ್); ಶಿಲುಬೆಯಂತೆ ಇರುವುದರಿಂದ ‘ಶಿಲುವಂಗಿ’ (ಮನೋನ್ಮಣಿ ಕೆ.ವಿ, ಸುಜಿತ್ ಸಂಡೂರು, ಶಾಂತಿನಿ ಮಂಜುನಾಥ್); ಕೊಳವೆಯಂತೆಯೂ ಕಾಣಿಸುವುದರಿಂದ ‘ಕೊಳವೆಯಂಗಿ’ (ಶ್ರೀಧರ ರಾಜಣ್ಣ, ವಿಲಾಸ ಹುದ್ದಾರ); ಹಾಗೆಯೇ ‘ಅಡ್ಡಂಗಿ’ (ವೀಣಾ ರಾವ್); ‘ತುಂಡಂಗಿ’ (ಲೋಕೇಶಕುಮಾರ ಮಠದ); ‘ಮುಂಡಂಗಿ’ (ವಿಜಯ ಕುಲಕರ್ಣಿ); ‘ಮೋಟಂಗಿ’ (ಗೀತಾ ಹೆಗಡೆ). ಹೆಗಲಿನಿಂದ ಇಳಿಯುವ ಅಂಗಿ ಆದ್ದರಿಂದ ‘ಇಳಿವಂಗಿ’ (ಅನಂತಕೃಷ್ಣ ಶಿವಮೊಗ್ಗ), ‘ಭುಜಂಗಿ’ (ರಮೇಶ ಕಾರಂತ); ‘ಕೊರಳಂಗಿ’ (ವಿನಾಯಕ ಅವರಾದಿ); ತಲೆಯ ಮೇಲಿಂದ ಹಾಕಬೇಕಾಗುವುದರಿಂದ ‘ಮೇಲಂಗಿ’ (ಎಂ. ಕೆ. ರಮೇಶ್, ಗೀತಾ ಎಂ. ಎಸ್, ವಾಣಿ ಹುಗ್ಗಿ, ಪ್ರಫುಲ್ಲಾ ಕೆ, ಶೋಭಾ ತಿಪಟೂರು, ಜಿ. ಎಚ್. ಸಂಕಪ್ಪ, ಮತ್ತು ಮಲ್ಲಿಕಾ ಭಟ್).
ಅಬ್ಬಬ್ಬಾ! ಇವುಗಳಲ್ಲಿ ಒಂದೊಂದೂ ಒಪ್ಪಬಹುದಾದಂಥದ್ದೇ. ಮಾತ್ರವಲ್ಲ, ‘ಕೈಯುಂಟು ಕಾಲಿಲ್ಲ ಶಿರ ಹರಿದ ಮುಂಡ; ಮೈಯೊಳಗೆ ನೂರಾರು ಗಾಯವನೆ ಕೊಂಡ; ಒಯ್ಯನಯ್ಯನೇ ಬಂದು ಹೆಗಲೇರಿಕೊಂಡ; ರಾಯರಾಯರಿಗೆಲ್ಲ ತಾನೇ ಪ್ರಚಂಡ’ ಎಂಬೊಂದು ಪ್ರಸಿದ್ಧ ಜನಪದ ಒಗಟಿಗೂ, ‘ಅಸ್ಥಿ ನಾಸ್ತಿ ಶಿರೋ ನಾಸ್ತಿ ಬಾಹುರಸ್ತಿ ನಿರಂಗುಲಿಃ| ನಾಸ್ತಿ ಪಾದದ್ವಯಂ ಬಾಢಮ್ ಅಂಗಮಾಲಿಂಗತಿ ಸ್ವಯಮ್|’ (ಎಲುಬುಗಳಿಲ್ಲ ತಲೆಯಿಲ್ಲ, ಬಾಹುಗಳಿವೆ ಬೆರಳುಗಳಿಲ್ಲ, ಕಾಲುಗಳೆರಡೂ ಇಲ್ಲ, ಆದರೂ ನಮ್ಮ ಮೈಯನ್ನು ತಾನೇ ಆಲಿಂಗಿಸುತ್ತದೆ) ಅಂತೊಂದು ಸಂಸ್ಕೃತ ಪ್ರಹೇಲಿಕಾಗೂ, ಅಂಗಿ ಎಂಬ ಪ್ರಚಲಿತ ಉತ್ತರದಂತೆಯೇ ಟಿ-ಶರ್ಟ್ ಅಥವಾ ಸಮಾನಾರ್ಥಕವಾದ ಮೇಲಿನೆಲ್ಲ ಪದಗಳೂ ಉತ್ತರವಾಗಬಲ್ಲವು. ಆದರೂ, ಒಂದನ್ನಷ್ಟೇ ಅಂತಿಮವಾಗಿ ಆಯ್ಕೆ ಮಾಡುವುದಾದರೆ, ಮಾಮೂಲಿ ಅಂಗಿಗಿಂತ ಟಿ-ಶರ್ಟ್ ಭಿನ್ನವಾಗುವುದು ಅದನ್ನು ಧರಿಸುವ ವಿಧಾನದಿಂದ. ಕರಾರುವಾಕ್ಕಾಗಿ ಹೇಳಬೇಕೆಂದರೆ ತಲೆಯನ್ನು ತೂರಿಸಿ ಧರಿಸಬೇಕಾಗುವುದರಿಂದ. ಹಾಗಾಗಿ ಅತಿಸೂಕ್ತ ಪದವೆಂದು ಆಯ್ಕೆಯಾಗಿರುವುದು ‘ತೂರಂಗಿ’. ಇದನ್ನು ಸೂಚಿಸಿದವರು: ಸುರೇಖಾ ಹೆಬ್ಬಾರ್, ವಿಜಯೇಂದ್ರ ರಾವ್, ಕೃಷ್ಣಪ್ರಸಾದ್ ಮತ್ತು ಪಿ. ಜೆ. ರಾಘವೇಂದ್ರ ಮೈಸೂರು. ಸ್ವಾರಸ್ಯವೆಂದರೆ, ಈಗಿನ್ನು ಕನ್ನಡದ ತೂರಂಗಿ ಪದದಿಂದಲೇ ಇಂಗ್ಲಿಷ್ನ ಖಖಜಜ್ಟಿಠಿ ಬಂದಿದ್ದೆಂದು ತಮಾಷೆಗೆ ಪೊಳ್ಳು ವಾದ ಬೇಕಿದ್ದರೂ ಮಾಡಬಹುದು!
ಟಿ-ಶರ್ಟ್ನ ವಿಲೇವಾರಿ ಅದಾದರೆ, ವಾಹನದ ಹೆಡ್ಲೈಟ್ ಎನ್ನಲಿಕ್ಕೂ ಒಳ್ಳೊಳ್ಳೆಯ ಕನ್ನಡ ಪದಗಳನ್ನು ಓದುಗರು ತಿಳಿಸಿದ್ದಾರೆ. ಪದಶಃ ಅನುವಾದಿಸಿ ‘ತಲೆದೀಪ’ (ಗುರುದತ್ತ ಎನ್., ದೇವೆಂದ್ರ ಕಡೂರು, ಜಿ.ಟಿ. ಜಯರಾಮಪ್ಪ, ಪ್ರಸನ್ನ ಬಿ. ಟಿ., ಮಹಾಂತೇಶ ದೊಡಕುಂಡಿ, ವಸಂತ ಕೆ.ಆರ್., ಕೃಷ್ಣ ನಾಯ್ಕ, ತಿರುಮಲ ವೆಂಕಟೇಶ್, ಪ್ರಕಾಶ ತೇರಣಿ), ‘ಶಿರಜ್ಯೋತಿ’ (ವಾಸುದೇವ ಭಟ್, ರಘುನಾಥ ಆಚಾರ್ಯ, ಸುಹಾಸ್ ಮಣಿಪಾಲ), ಅಥವಾ ‘ಶಿರೋದೀಪ’ (ಜಿ. ನಾರಾಯಣ ರಾವ್, ಲೋಕೇಶಕುಮಾರ ಮಠದ, ಶ್ಯಾಮಪ್ರಸಾದ್ ಕಾರವಾರ, ಪದ್ಮಾ ಸುರೇಶ್, ಕಮಲಾಕರ ಆರ್.ಎಸ್.) ಪದಗಳನ್ನು ಸೂಚಿಸಿದವರಿದ್ದಾರೆ. ‘ಮುಖದೀಪ’ (ಪ್ರಸನ್ನ ಎಸ್.ಜಿ., ಶ್ರೀಲತಾ ಮೈಸೂರು, ತಾರಾಪ್ರಸಾದ ತೀರ್ಥಹಳ್ಳಿ, ಮಂಜುನಾಥ ಡಿ.ಎಸ್.), ‘ಹಣೆದೀಪ’ (ಎಚ್.ಎನ್. ವಾಸುದೇವ ರಾವ್, ನಿತ್ಯಾನಂದ ಬ್ರಹ್ಮಾವರ) ಮುಂತಾದ ಪದಗಳೂ ಬಂದಿವೆ. ವಾಹನವನ್ನು ನಾಲ್ಕು ಕಾಲಿನ ಪ್ರಾಣಿಗೆ ಹೋಲಿಸಿದರೆ, ಪ್ರಾಣಿಯ ತಲೆ/ಮುಖ/ಹಣೆ ಮುಂಭಾಗದಲ್ಲಿರುವುದರಿಂದ ಇವೆಲ್ಲ ಪದಗಳು ಅರ್ಥಪೂರ್ಣವೇ. ಆದರೆ ವಾಹನಗಳಿಗಷ್ಟೇ ಅಲ್ಲ, ಗಣಿಗಳಲ್ಲಿ ಕೆಲಸ ಮಾಡುವವರೂ ತಲೆಗೆ ದೀಪ ಕಟ್ಟಿಕೊಳ್ಳುತ್ತಾರೆ; ಕೆಲವು ಸಂದರ್ಭಗಳಲ್ಲಿ ವೈದ್ಯರ ತಲೆಗೂ ಚಿಕ್ಕದೊಂದು ದೀಪ ಇರಬೇಕಾಗುತ್ತದೆ. ಕಾಡಿನ ಕತ್ತಲೆಯಲ್ಲಿ ಬೇಟೆಯಾಡುವವರೂ ತಲೆದೀಪ ಕಟ್ಟಿಕೊಳ್ಳಬಹುದು. ಯಾರೇ ಆಗಲಿ ದೀಪವನ್ನು ತಲೆಗೆ ಕಟ್ಟಿಕೊಂಡರೂ ಉದ್ದೇಶವಿರುವುದು ಮುಂಭಾಗಕ್ಕೆ ಬೆಳಕು ಬರಬೇಕೆಂಬುದು. ವಾಹನಕ್ಕಾದರೂ ಅಷ್ಟೇ, ಕತ್ತಲಲ್ಲಿ ಮುಂದೆ ಸಾಗಲಿರುವ ದಾರಿಯನ್ನು ಬೆಳಗಬೇಕೆಂಬುದು. ಈ ರೀತಿಯಲ್ಲಿ ಆಲೋಚಿಸಿ ‘ಮುಂದೀಪ’ ಎಂದು ಕೆಲವರು ಸೂಚಿಸಿದ್ದಾರೆ. ಅದು ಅರಿಸಮಾಸ ಆಗುವುದರಿಂದ ವ್ಯಾಕರಣಬದ್ಧ ಪದವೆನಿಸದು. ಅದಕ್ಕಿಂತ ‘ಮುಂದೀವಿಗೆ’ (ಪ್ರಫುಲ್ಲಾ ಕೆ., ಅಪ್ಪು ಮುತ್ಯ) ಒಳ್ಳೆಯದು. ಅದಕ್ಕಿಂತಲೂ ಹೆಚ್ಚು ಸೂಕ್ತ ‘ಮುಂಬೆಳಕು’ ಎಂಬ ಪದ. ಇದನ್ನು ಸೂಚಿಸಿದವರು: ಅರ್ಚನಾ ಹೆಬ್ಬಾರ್, ಉಷಾಕಿರಣ್ ಅತ್ತಾವರ, ರಮೇಶ ಅಗಸರ, ರಾಜೇಂದ್ರ ಶಿವಬಸಪ್ಪ, ಅನಂತ ಶೃಂಗೇರಿ, ಜ್ಯೋತಿ ಪಟ್ಟಣಶೆಟ್ಟಿ, ರಾಜೇಶ್ ಯು.ವಿ., ಮಹಾಬಲೇಶ್ವರ ಹೆಗಡೆ, ದಾಮೋದರ ಭಟ್, ಕೃಷ್ಣಪ್ರಸಾದ್, ವಸುಮತಿ ಮೈಸೂರು, ಗೀತಾ ಎಂ.ಎಸ್., ಡಾ.ಗುರುರಾಜ ಕಳ್ಳಿಹಾಳ ಮತ್ತು ವಿಜಯ ಕುಲಕರ್ಣಿ.
ಕೊನೆಯದಾಗಿ Sim ಇಚ್ಟಛಗೆ ಸೂಕ್ತವಾದ ಕನ್ನಡ ಪದ ಯಾವುದೆಂದು ನೋಡೋಣ. Sim ಅಂದರೆ Subscriber Identity Module. ಚತುರವಾಣಿ ಸೇವೆ ಪಡೆಯುವ ಗ್ರಾಹಕ/ಚಂದಾದಾರನ ನಿರ್ದಿಷ್ಟ ಮತ್ತು ಅನನ್ಯ ಗುರುತನ್ನು ದಾಖಲಿಸಿಡುವ ಪುಟ್ಟದೊಂದು ಕೋಶ. ಮೊದಲೆಲ್ಲ ಅದೊಂದು ಭೌತಿಕವಾಗಿಯೂ ಚಿಕ್ಕ ಬಿಲ್ಲೆಯಂತೆ ಇರುತ್ತಿತ್ತು. ಚತುರವಾಣಿಯೊಳಗೆ ಅದಕ್ಕೆಂದೇ ಚಿಕ್ಕದೊಂದು ಗುಳಿ ಇರುತ್ತಿತ್ತು. ಆಮೇಲೆ ಎರಡು ಬಿಲ್ಲೆಗಳಿರುವುದೂ ಸಾಧ್ಯವಾಯಿತು. ಈಗ ತಂತ್ರಜ್ಞಾನ ಮುಂದುವರಿದು ಛಿಖಐM ಎಂದಾಗಿರುವುದರಿಂದ ಬಿಲ್ಲೆಯೂ ಬೇಕಾಗಿಲ್ಲ. ಆದರೂ Sim ಎಂದೊಡನೆ ಕಲ್ಪನೆಗೆ ಬರುವುದು ಚತುರವಾಣಿಯೊಳಗಿನ ಚಿಕ್ಕ ಬಿಲ್ಲೆಯೇ. ಇಂಗ್ಲಿಷ್ನಂತೆ ಕನ್ನಡದಲ್ಲೂ ಚಂದಾದಾರರ ಗುರುತು ಹ್ರಸ್ವವಾಗಿ ‘ಚಂಗು’ ಆಗಬಹುದು. ಅದಕ್ಕೆ ಬಿಲ್ಲೆ ಸೇರಿಸಿದರೆ ‘ಚಂಗು ಬಿಲ್ಲೆ’ ಎಂಬ ಚಿಕ್ಕ-ಚೊಕ್ಕ ಪದವಾಗುತ್ತದೆ. ಅದೇ ಹೆಚ್ಚು ಸೂಕ್ತವೆನಿಸುತ್ತದೆ. ಸೂಚಿಸಿದವರು: ಭಾಸ್ಕರ ಕಶ್ಯಪ್, ಅಪ್ಪು ಮುತ್ಯ, ರೇವತಿ ಜೋಶಿ, ವಿಲಾಸ ಹುದ್ದಾರ. ಹಾಗೆಯೇ ‘ಚಂಗು ಕೋಶ’ (ಕೃಪಾ ಗೋಖಲೆ, ನಳಿನಿ ಭಟ್, ಪದ್ಮಾ ಸುರೇಶ್), ‘ಚಂಗು ಚೀಟಿ’ (ವಾದಿರಾಜ ಕುಲಕರ್ಣಿ, ಎನ್. ವಿ. ಶಂಕರ್, ಎಂ. ಕೆ. ರಮೇಶ್, ಜಿ. ನಾರಾಯಣ ರಾವ್), ‘ಚಂಗು ಪಟ್ಟಿ’ (ವಿದ್ಯಾಶಂಕರ ಶರ್ಮ, ಆನಂದರಾಮ ಮಡಿ), ‘ಚಂಗು ತುಣುಕು’ (ಅನಂತಕೃಷ್ಣ ಶಿವಮೊಗ್ಗ) ಸಹ ಒಳ್ಳೆಯ ಪದಗಳೇ.
ಕನ್ನಡ ಪದ ಕಟ್ಟುವ ಮತ್ತು ಹುಡುಕುವ ಓದುಗರ ಈ ಉತ್ಸಾಹ ನಿಜಕ್ಕೂ ಪ್ರಶಂಸನೀಯ. ಕನ್ನಡ ಪದಗಳನ್ನು ಸ್ವತಃ ಬಳಸುವ ಮತ್ತು ಇತರರೂ ಬಳಸುವಂತೆ ಪ್ರಚೋದಿಸುವ ಉತ್ಸಾಹವೂ ಹೆಚ್ಚುಹೆಚ್ಚು ಇರಲೆಂದು ಹಾರೈಕೆ.
ಈ ವಾರದ ಮೂರು ಪದಗಳು:
1.Bookmark: ಪುಸ್ತಕಕ್ಕಷ್ಟೇ ಅಲ್ಲ, ಕಂಪ್ಯೂಟರ್ ಬ್ರೌಸರ್ನಲ್ಲೂ ಬಳಕೆಯಿದೆ. ಆದ್ದರಿಂದ ಪುಸ್ತಕಗುರುತು ಎನ್ನುವುದಕ್ಕಿಂತ ಹೆಚ್ಚು ಸಮರ್ಥ ಪದ ಸಿಗುತ್ತದೆಯೇ ನೋಡಿ.
2.Garage: ಅಮೆರಿಕದಲ್ಲಿ ಗರಾಜ್ ಎಂದು, ಭಾರತದಲ್ಲಿ ಗ್ಯಾರೇಜ್ ಎಂದು ಉಚ್ಚಾರ. ಏನಿದ್ದರೂ ಅದು ಆಂಗ್ಲ ಪದವಾಯ್ತು. ಕನ್ನಡದಲ್ಲಿ ಏನೆನ್ನಬಹುದು?
3.Ragging: ವಿದ್ಯಾಸಂಸ್ಥೆಗಳಲ್ಲಿ, ವಿದ್ಯಾರ್ಥಿನಿಲಯಗಳಲ್ಲಿ ಕಂಡುಬರುವ ಈ ಪಿಡುಗು ಯಾವ ರೀತಿಯಲ್ಲೂ ಒಳ್ಳೆಯದಲ್ಲ. ಆದರೂ ಇದಕ್ಕೊಂದು ಕನ್ನಡ ಪದ ಕಂಡುಕೊಳ್ಳುವುದು ಒಳ್ಳೆಯದೇ!
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)