ನಿಮ್ಮ ಮೇಲಿದ್ದ ಗೌರವ ಕಡಿಮೆಯಾಯ್ತು ... 'ಬಿಗ್​ ಬಿ'ಗೆ ಹಾಗಂತ ಆ ಮಹಿಳೆ ಹೇಳಿದ್ದ್ಯಾಕೆ?

Amitabh Bachchan - Final
Published on

ಭಾನುವಾರವಷ್ಟೇ ಮುಂಬೈನ ನಾನಾವತಿ ಆಸ್ಪತ್ರೆಯಿಂದ, ಬಾಲಿವುಡ್​ನ ಖ್ಯಾತ ನಟ ಅಮಿತಾಭ್​ ಬಚ್ಚನ್​​ ಅವರು ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ. ಕರೊನಾದಿಂದ ಸಂಪೂರ್ಣ ಗುಣಮುಖರಾಗಿರುವ ಅವರು ಸದ್ಯಕ್ಕೆ ಮನೆಯಲ್ಲಿ ಕ್ವಾರಂಟೈನ್​ನಲ್ಲಿ ಇದ್ದಾರೆ. ಅಷ್ಟೇ ಅಲ್ಲ, ತಾವು ಹುಷಾರಾಗುತ್ತಿರುವ ವಿಷಯವನ್ನು ಸೋಷಿಯಲ್​ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

ಅಮಿತಾಭ್​ ಅವರು ನಾನಾವತಿ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ದಿನಗಳ ಕಾಲ ಚಿಕಿತ್ಸೆ ಪಡೆದರು. ಈ ಸಮಯದಲ್ಲಿ ಆಗಾಗ ತಮಗೆ ಶುಶ್ರೂಷೆ ಮಾಡಿದ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್​ಗಳ ಕುರಿತು ಅವರು ಬರೆಯುತ್ತಲೇ ಇದ್ದರು. ಅಷ್ಟೇ ಅಲ್ಲ, ಅವರನ್ನು ಪ್ರಾಣ ಕಾಪಾಡುವ ದೇವತೆಗಳು ಎಂದು ಸಹ ಕರೆದಿದ್ದರು.

ಈಗ ಅದೇ ಅವರಿಗೆ ಮುಳುವಾಗಿದೆ. ಇದೇ ವಿಷಯವಾಗಿ ಟ್ವೀಟ್​ ಮಾಡಿರುವ ಮಹಿಳೆಯೊಬ್ಬರು, ಬಿಗ್​ ಬಿ ಮೇಲೆ ತಮಗಿದ್ದ ಗೌರವ ಬಹಳ ಕಡಿಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಆಗಿದ್ದೇನೆಂದರೆ, ಜಾಹ್ನವಿ ಮಕೀಜ ಎನ್ನುವವರು ತಮ್ಮ ತಂದೆಯನ್ನು ಅದೇ ಆಸ್ಪತ್ರೆಗೆ ಸೇರಿಸಿದ್ದರಂತೆ. ಅವರಿಗೆ ಕರೊನಾ ಇದೆ ಎಂದು ಹೇಳಿದ ಆಸ್ಪತ್ರೆಗೆ ಸೇರಿಸಿಕೊಳ್ಳಲಾಯಿತಂತೆ. ಕೊನೆಗೆ ಡಿಸ್ಚಾರ್ಜ್​ ಆದ ಮೇಲೆ ಇನ್ನೊಂದು ಆಸ್ಪತ್ರೆಯಲ್ಲಿ ತೋರಿಸಿದಾಗ, ಟೆಸ್ಟ್​ನಲ್ಲಿ ಅವರಿಗೆ ಕರೊನಾ ಇರಲಿಲ್ಲ ಎಂಬ ವರದಿ ಬಂದಿದೆ. ಈ ಬಗ್ಗೆ ಸಿಟ್ಟಾಗಿರುವ ಅವರು, 'ನೀವು ನೋಡಿದರೆ ಆಸ್ಪತ್ರೆಯ ಬಗ್ಗೆ ಆ ರೀತಿ ಹೊಗಳ್ತೀರಾ. ಅವರು ನೋಡಿದರೆ ಈ ರೀತಿ ಮಾಡುತ್ತಾರೆ. ಇದರಿಂದ ಬಹಳ ಬೇಸರವಾಗಿದೆ. ನಿಮ್ಮ ಮೇಲಿದ್ದ ಗೌರವ ಸಹ ಕಡಿಮೆಯಾಗಿದೆ' ಎಂದು ಟ್ವೀಟ್​ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಗ್​ ಬಿ, 'ನಿಮ್ಮ ತಂದೆಯವರಿಗೆ ಈ ರೀತಿ ಆಗಿದ್ದು ಕೇಳಿ ಬೇಸರವಾಯಿತು. ಬಹಳ ಚಿಕ್ಕ ವಯಸ್ಸಿನಿಂದ ನಾನು ಒಂದಲ್ಲಾ ಒಂದು ಕಾರಣಕ್ಕೆ ಆಸ್ಪತ್ರೆಗಳಿಗೆ ಹೋಗುತ್ತಿದ್ದೇನೆ ಮತ್ತು ಚಿಕಿತ್ಸೆ ಪಡೆಯುತ್ತಲೇ ಇದ್ದೇನೆ. ಪ್ರತೀ ಬಾರಿ ಹೋದಾಗಲೂ ವೈದ್ಯರು, ನರ್ಸ್​ಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ತೋರಿಸುವ ಕಾಳಜಿ ಮತ್ತು ಪ್ರೀತಿ ಖುಷಿ ಕೊಡುತ್ತದೆ. ಲ್ಯಾಬ್​ ಟೆಸ್ಟ್​ಗಳಿಂದ ಕೆಲವೊಮ್ಮೆ ಸಮಸ್ಯೆಗಳು ಎದುರಾಗುವುದು ಹೌದು. ಆದರೆ, ಯಾರೊಬ್ಬ ವೈದ್ಯ ಸಹ ಹಣಕಾಸಿನ ಆಸೆಗೆ ತೊಂದರೆ ಕೊಡುವುದನ್ನು ನಾನು ನೋಡಿಲ್ಲ' ಎಂದು ಬರೆದಿದ್ದಾರೆ.

ಇನ್ನು ಆಸ್ಪತ್ರೆಯ ಬಗ್ಗೆ ತಾವು ಪ್ರಚಾರ ಕೊಡುತ್ತಿದ್ದೇನೆ ಎಂಬ ವಿಷಯವನ್ನು ಅಲ್ಲಗೆಳೆದಿರುವ ಅವರು, 'ನಾನು ಆಸ್ಪತ್ರೆಗೆ ಸುಮ್ಮನೆ ಪ್ರಚಾರ ಕೊಡುತ್ತಿಲ್ಲ. ನನಗೆ ಒಳ್ಲೆಯ ಚಿಕಿತ್ಸೆ ಕೊಟ್ಟಿದ್ದಿಕ್ಕೆ ಧನ್ಯವಾದಗಳನ್ನು ಹೇಳಿದ್ದೇನೆ. ನಾನಾವತಿ ಆಸ್ಪತ್ರೆಯಲ್ಲದೆ, ಯಾವುದೇ ಆಸ್ಪತ್ರೆಯಾಗಿದ್ದರೂ ನಾನು ಅಷ್ಟೇ ಗೌರವದಿಂದ ಮಾತನಾಡುತ್ತಿದ್ದೆ. ನಿಮಗೆ ನನ್ನ ಮೇಲೆ ಗೌರವ ಕಡಿಮೆಯಾಗಿರಬಹುದು. ಆದರೆ, ನನಗೆ ಮಾತ್ರ ವೈದ್ಯಕೀಯ ವೃತ್ತಿ ಮತ್ತು ನಮ್ಮ ದೇಶದ ವೈದ್ಯರ ಮೇಲೆ ನಂಬಿಕೆ ಕಡಿಮೆಯಾಗುವುದಿಲ್ಲ. ಇಷ್ಟಕ್ಕೂ ನನ್ನ ಗೌರವದ ಬಗ್ಗೆ ನಿರ್ಧರಿಸುವುದಕ್ಕೆ ನೀವ್ಯಾರು' ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net