ಚೆನ್ನೈ: ಇಡೀ ಮಾಲಿವುಡ್ಅನ್ನೇ ಬುಡಮೇಲು ಮಾಡಿರುವ ಜಸ್ಟಿಸ್ ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೇ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ನಟಿಯರು ಲೈಂಗಿಕ ಕಿರುಕುಳದಂತಹ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದು, ಚಿತ್ರರಂಗದಲ್ಲಿ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ಹಗರಣ ದೇಶಾದ್ಯಂತ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಹೇಮಾ ಸಮಿತಿ ವರದಿ ಸಲ್ಲಿಸಿದ ಬೆನ್ನಲ್ಲೇ ಬೇರೆ ಚಿತ್ರರಂಗಗಳ ನಟ-ನಟಿಯರು ತಮ್ಮ ಚಿತ್ರರಂಗದಲ್ಲಿನ ಪರಿಸ್ಥಿತಿಗಳ ಬಗ್ಗೆಯೂ ವರದಿ ಸಲ್ಲಿಸುವಂತೆ ಆಗ್ರಹಿಸುತ್ತಿದ್ದು, #METOO ಅಭಿಯಾನ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಮಾಲಿವುಡ್ ಬಳಿಕ ಇದೀಗ ಟಾಲಿವುಡ್ನಲ್ಲೂ #METOO ಅಭಿಯಾನ ಸದ್ದು ಮಾಡುತ್ತಿದ್ದು, ಈ ಬಗ್ಗೆ ಜನಪ್ರಿಯ ನಟಿ ಸೌಮ್ಯ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮೌನ ಮುರಿದಿದ್ದಾರೆ. ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಟಿ ಸೌಮ್ಯ ನಿರ್ದೇಶಕನ ಹೆಸರೇಳದೆ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ನನಗಾಗ 18 ವರ್ಷ ಮೊದಲ ವರ್ಷ ಡಿಗ್ರಿ ವ್ಯಾಸಂಗ ಮಾಡುತ್ತಿದ್ದೆ. ನಾನು ಬಡತನದ ಹಿನ್ನೆಲೆಯಿಂದ ಬಂದವಳಾಗಿದ್ದು, ರಂಗಭೂಮಿಯಿಂದ ನನಗೆ ತಮಿಳು ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ನಟಿ ರೇವತಿ ಅವರ ಮನೆ ಹತ್ತಿರದಲ್ಲಿ ನಾವು ವಾಸಿಸುತ್ತಿದ್ದೆವು ಮತ್ತು ಅವರಿಂದ ನಾನು ಹೆಚ್ಚು ಆಕರ್ಷಿತಳಾಗಿ ಸಿನಿಮಾ ಕಡೆ ಒಲವು ಹೆಚ್ಚಾಯಿತು. ನನಗೆ ಆಗ ಈ ನಿರ್ದೇಶಕನ ಪರಿಚಯವಾಯಿತು. ಅತ ನಮಗೆ ಮಕ್ಕಳಿಲ್ಲ ನೀನೇ ನಮ್ಮ ಪಾಲಿನ ಮಗಳು ಎಂದು ಹೇಳಿ ನನಗೆ ಕಿರುಕುಳ ನೀಡಿದ.
ಇದನ್ನೂ ಓದಿ: ಶಾಲಾ ವಾಹನ-KKRTC ಬಸ್ ಡಿಕ್ಕಿ; ಇಬ್ಬರು ಸಾವು, 17 ಮಂದಿ ಗಂಭೀರ
ಆ ಬಳಿಕ ಆ ವ್ಯಕ್ತಿಯು ನನ್ನ ಪೋಷಕರನ್ನು ಭೇಟಿ ಮಾಡಿ ನನ್ನನ್ನು ಸಿನಿಮಾಗೆ ಕಳಿಸಿಕೊಡುವಂತೆ ಕೇಳಿದರು. ನನಗೆ ಆ ವ್ಯಕ್ತಿ ಜೊತೆ ಹೋಗಲು ಇಷ್ಟವಿಲ್ಲವೆಂದಾಗ ಆತ ಸ್ಕ್ರೀನ್ ಟೆಸ್ಟ್ಗೆ ಸಾಕಷ್ಟು ಹಣ ವ್ಯಯಿಸಿರುವುದಾಗಿ ಹೇಳಿ ಬಲವಂತವಾಗಿ ಶೂಟಿಂಗ್ಗೆ ಕರೆದೊಯ್ದರು. ಆರಂಭದಲ್ಲಿ ತನ್ನ ಹೆಂಡತಿ ಚಿತ್ರ ನಿರ್ದೇಶಿಸುವುದಾಗಿ ಹೇಳಿ ಆ ನಂತರ ಈತನೇ ಸಿನಿಮಾ ಡೈರೆಕ್ಟ್ ಮಾಡಿದ. ಆ ಬಳಿಕ ನನ್ನನ್ನು ಮಗಳಂತೆ ಸಾಕುವುದಾಗಿ ನಮ್ಮ ಪೋಷಕರ ಬಳಿ ಹೇಳಿ ಅವರ ಮನೆಗೆ ಕರೆದೊಯ್ದ.
ಒಂದು ದಿನ ಆತನ ಹೆಂಡತಿ ಮನೆಯಲ್ಲಿ ಇಲ್ಲದೇ ಇರುವ ಸಮಯದಲ್ಲಿ ಆತ ನನ್ನನ್ನು ಕರೆದು ಮುತ್ತಿಕ್ಕಿದ. ಒಂದು ಕ್ಷಣ ಏನಾಯಿತು ಎಂದು ನನಗೆ ಅರ್ಥವಾಗಲಿಲ್ಲ. ದಿನ ಕಳೆದಂತೆ ಆತ ನನ್ನ ಮೇಲೆ ಸಂಪೂರ್ಣವಾಗಿ ಅಧಿಕಾರ ಚಲಾಯಿಸಲು ಶುರು ಮಾಡಿದನು. ಅದು ಎಷ್ಟರ ಮಟ್ಟಿಗೆಂದರೆ ಮಗಳೆಂದು ಕರೆಯುತ್ತಿದ್ದವಳ ಜೊತೆ ಮಗು ಮಾಡಿಕೊಳ್ಳಲು ಮುಂದಾಗಿದ್ದ. ಇದರಿಂದ ಬೇಸತ್ತ ನಾನು ಅತನ ಮನೆ ತೊರೆದೆ. ಈ ವಿಚಾರ ಹೊರಬರಲು 30 ವರ್ಷಗಳ ಬೇಕಾಯಿತು. ಆ ವ್ಯಕ್ತಿ ಸಂಪೂರ್ಣವಾಗಿ ನನ್ನನ್ನು ಸೆಕ್ಸ್ ಡಾಲ್ ರೀತಿ ಬಳಸಿಕೊಂಡ ಎಂದು ನಟಿ ಸೌಮ್ಯ ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.