ಚುನಾವಣಾ ಆಯೋಗದ ವಿರುದ್ಧ ಪಿ.ಚಿದಂಬರಂ ಟೀಕೆ: ಅಷ್ಟಕ್ಕೂ ಅವರ ಆರೋಪವೇನು.? P Chidambaram

chidambaram
Published on

P Chidambaram: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ಕುರಿತು ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂದರ್ಭದಲ್ಲಿ, ಕಾಂಗ್ರೆಸ್ಸಿನ ಹಿರಿಯ ನಾಯಕ ಪಿ. ಚಿದಂಬರಂ, ತಮಿಳುನಾಡಿನಲ್ಲಿ 6.5 ಲಕ್ಷ ವಲಸೆ ಕಾರ್ಮಿಕರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ವಿಷಯ ಹಂಚಿಕೊಂಡಿರುವ ಚಿದಂಬರಂ, ಬಿಹಾರದಲ್ಲಿ 65 ಲಕ್ಷ ಮತದಾರರು ಮತದಾನದಿಂದ ವಂಚಿತರಾಗುವ ಅಪಾಯದಲ್ಲಿದ್ದರೂ, ತಮಿಳುನಾಡಿನಲ್ಲಿ 6.5 ಲಕ್ಷ ಜನರನ್ನು ಮತದಾರರಾಗಿ ಸೇರಿಸಿರುವ ವರದಿ ಆತಂಕಕಾರಿ ಮತ್ತು ಕಾನೂನುಬಾಹಿರ. ಚುನಾವಣಾ ಆಯೋಗವು ಅಧಿಕಾರ ದುರುಪಯೋಗಪಡಿಸಿಕೊಂಡು ಆಯಾ ರಾಜ್ಯಗಳ ಚುನಾವಣಾ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಕಚೇರಿ (CMO) ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಬದುಕು ಕಟ್ಟಿಕೊಳ್ಳಲು ಬಂದಿರುವ ಜನರನ್ನು, ಶಾಶ್ವತವಾಗಿ ವಲಸೆ ಬಂದವರು ಎಂದು ಕರೆಯುವುದು ವಲಸೆ ಕಾರ್ಮಿಕರಿಗೆ ಮಾಡಿದ ಅವಮಾನ ಮತ್ತು ತಮಿಳುನಾಡಿನ ಮತದಾರರು ತಮ್ಮ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದರು.

ವಲಸೆ ಕಾರ್ಮಿಕನೊಬ್ಬ ಆಯಾ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ತನ್ನ ತವರು ರಾಜ್ಯಕ್ಕೆ ಏಕೆ ಹಿಂತಿರುಗಬಾರದು ಎಂದು ಚಿದಂಬರಂ ಪ್ರಶ್ನಿಸಿದರು.

ಚುನಾವಣಾ ಆಯೋಗದ ಈ ಅಧಿಕಾರ ದುರುಪಯೋಗದ ವಿರುದ್ಧ ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ ಹೋರಾಡಬೇಕು ಎಂದು ಚಿದಂಬರಂ ಕರೆ ನೀಡಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net