

ಅಮೆರಿಕದ( America) ಅಲಾಸ್ಕಾದಲ್ಲಿ ನಾಳೆ(ಆ.15ರಂದು) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಖಾಮುಖಿ ಭೇಟಿಯಾಗಲು ಸಜ್ಜಾಗಿದ್ದಾರೆ. ಅಮೆರಿಕದ ಶ್ವೇತಭವನದ ಬದಲಿಗೆ ಅಲಾಸ್ಕಾದಲ್ಲಿ ಭೇಟಿಯಾಗಲು ಎರಡು ರಾಷ್ಟ್ರಗಳ ನಾಯಕರು ತೀರ್ಮಾನಿಸಿದ್ದಾರೆ. ಈ ಸಭೆಗೆ ಇನ್ನೊಂದು ದಿನ ಬಾಕಿ ಇರುವಂತೆಯೇ ಇದೀಗ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬೆದರಿಕೆ ಹಾಕಿದ್ದಾರೆ.
ಹೌದು, ಅಮೆರಿಕದಲ್ಲಿ ನಡೆಯಲಿರುವ ಟ್ರಂಪ್-ಪುಟಿನ್ ಭೇಟಿಯ ಮಾತುಕತೆ ಸಕಾರಾತ್ಮಕ ಫಲಿತಾಂಶ ನೀಡುವಲ್ಲಿ ವಿಫಲವಾದ್ರೆ ಅಮೆರಿಕಾ ಮತ್ತಷ್ಟು ನಿರ್ಬಂಧಗಳು ಮತ್ತು ಸುಂಕ ಹೆಚ್ಚಿಸಬಹುದು ಎಂದು ಬುಧವಾರ ಬ್ಲೂಮ್ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಕಾಟ್ ಬೆಸೆಂಟ್ ಹೇಳಿದರು.
ರಷ್ಯಾದ ತೈಲ ಖರೀದಿಸುವುದಕ್ಕಾಗಿ ನಾವು ಭಾರತೀಯರ ಮೇಲೆ ದ್ವಿಗುಣ ಸುಂಕ ವಿಧಿಸಿದ್ದೇವೆ. ಒಂದು ವೇಳೆ ಮಾತುಕತೆ ವಿಫಲವಾದ್ರೆ ಇದು ಮತ್ತಷ್ಟು ಹೆಚ್ಚಾಗಬಹುದು ಎಂದು ಸ್ಕಾಟ್ ಬೆಸೆಂಟ್ ಪರೋಕ್ಷವಾಗಿ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಟ್ರಂಪ್ ಇತ್ತೀಚಿಗೆ 25ರಷ್ಟು ಸುಂಕ ವಿಧಿಸಿದೆ. ಅಲ್ಲದೆ, ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳು ಖರೀದಿಗೆ ಮಾಡುತ್ತಿರುವುದಕ್ಕೆ ಶೇ. 25 ರಷ್ಟು ಸುಂಕ ಹೆಚ್ಚಿಸಿದ್ದಾರೆ. ಇದೀಗ ಭಾರತದ ಮೇಲೆ 50ರಷ್ಟು ಸುಂಕ ವಿಧಿಸಿದ್ದಾರೆ. ಅಲ್ಲದೆ, ಯುಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಭಾರತ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಹೆಚ್ಚುವರಿ ಸುಂಕವು “ಅನ್ಯಾಯ, ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ. ಅಲ್ಲದೆ, ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಭಾರತ ತೆಗೆದುಕೊಳ್ಳುತ್ತದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.(ಏಜೆನ್ಸೀಸ್)