ಬಂದೂಕು ಸಂಸ್ಕೃತಿಗೆ ಅಮೆರಿಕ ಗಡಗಡ

Untitled design (8)
Published on

ಅಮೆರಿಕದಲ್ಲಿ ಬಂದೂಕಿನ ಆರ್ಭಟ ಮುಂದುವರಿದಿದೆ. ಬಲಪಂಥೀಯ ಚಿಂತಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಆಪ್ತ 32 ವರ್ಷ ವಯಸ್ಸಿನ ಚಾರ್ಲಿ ಕಿರ್ಕ್​ನನ್ನು ಸೆ.10ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಂವಾದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿಗಳ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಿರುವಾಗಲೇ ಅವರ ಮೇಲೆ ಗುಂಡಿನ ದಾಳಿ ನಡೆಯಿತು. ಕಳೆದ ವರ್ಷ ಅಂದರೆ 2024ರ ಸೆಪ್ಟೆಂಬರ್​ನಲ್ಲಿ ಪೆನ್ಸಿಲ್ವೇನಿಯಾದ ಬಟ್ಲರ್ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಡೊನಾಲ್ಡ್ ಟ್ರಂಪ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಅಮೆರಿಕದಲ್ಲಿ ಪ್ರತಿ ಚುನಾವಣೆ ಸಂದರ್ಭದಲ್ಲೂ ಬಂದೂಕು ನಿಯಂತ್ರಣದ ಬಗ್ಗೆ ಚರ್ಚೆ ನಡೆಯುತ್ತಿದೆಯಾದರೂ, ಈವರೆಗೂ ದಿಟ್ಟ ಕ್ರಮ ಕೈಗೊಂಡಿಲ್ಲ.

ಬಂದೂಕು ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಬೇಕು ಎಂಬ ಕೂಗು ಹಲವು ದಶಕಗಳಿಂದಲೂ ಕೇಳಿಬರುತ್ತಿದ್ದು, ಗನ್ ಸಂಸ್ಕೃತಿ ನಿಯಂತ್ರಿಸುವಂತೆ ಜನರು ಪ್ರತಿಭಟನೆ ನಡೆಸಿಯಾಗಿದೆ. ಬಂದೂಕಿನಿಂದ ಹಿಂಸಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಅಮೆರಿಕ ಈ ಸಮಸ್ಯೆಗೆ ಪ್ರಬಲ ಪರಿಹಾರ ಕಂಡುಕೊಳ್ಳುವ ಅನಿವಾರ್ಯ ಸ್ಥಿತಿಯಲ್ಲಿದೆ. ಶೂಟೌಟ್ ಕರಾಳತನ ಅಮೆರಿಕವನ್ನು ಬೆಂಬಿಡದೆ ಕಾಡುತ್ತಿದೆ. ವಸತಿ ಸಮುಚ್ಛಯಗಳು, ಶಾಲೆ-ಕಾಲೇಜುಗಳ ಕ್ಯಾಂಪಸ್​ಗಳು, ಪಾರ್ಕ್​ಗಳು ಸೇರಿದಂತೆ ಯಾವುದೇ ಸಾರ್ವಜನಿಕ ಪ್ರದೇಶಗಳು ಸುರಕ್ಷಿತವಾಗಿಲ್ಲ. ಪರಿಸ್ಥಿತಿ ಎಷ್ಟು ವಿಷಮಗೊಂಡಿದೆಯೆಂದರೆ, ಗುಂಡಿನ ದಾಳಿಗೆ (ಆತ್ಮಹತ್ಯೆ ಪ್ರಕರಣಗಳು ಸೇರಿ) ಅಮೆರಿಕದಲ್ಲಿ ಪ್ರತಿನಿತ್ಯ ಸರಾಸರಿ 132 ಮಂದಿ, ವರ್ಷಕ್ಕೆ 40 ಸಾವಿರಕ್ಕಿಂತ ಅಧಿಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

2021ರಲ್ಲಿ ಗುಂಡೇಟಿಗೆ 48,830 ಮಂದಿ ಬಲಿಯಾದರೆ, 2023ರಲ್ಲೂ 40 ಸಾವಿರಕ್ಕಿಂತ ಅಧಿಕ ಜನರು ಮೃತಪಟ್ಟಿದ್ದಾರೆ. ಚಾರ್ಲಿ ಕಿರ್ಕ್ ಹತ್ಯೆ ಹಿನ್ನೆಲೆಯಲ್ಲಿ, ಅಮೆರಿಕದ ಗನ್ ಕಲ್ಚರ್ ಬಗ್ಗೆ ಮತ್ತೆ ಚರ್ಚೆ ಗರಿಗೆದರಿದ್ದು, ಬಂದೂಕು ನಿಯಂತ್ರಣ ಕ್ರಮಗಳನ್ನು ಇನ್ನಾದರೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜನರು ಆಗ್ರಹಿಸತೊಡಗಿದ್ದಾರೆ. 2023ರ ಎಲ್ಲ ತಿಂಗಳುಗಳಲ್ಲಿ ಗುಂಡಿನ ದಾಳಿ ಪ್ರಕರಣಗಳು ವರದಿಯಾಗಿವೆ. (2024ರ ಅಂಕಿಸಂಖ್ಯೆಗಳ ಮಾಹಿತಿ ಇನ್ನೂ ಬಿಡುಗಡೆಗೊಂಡಿಲ್ಲ) 2023 ಜನವರಿಯಿಂದ ಡಿಸೆಂಬರ್​ವರೆಗೆ 600ಕ್ಕೂ ಹೆಚ್ಚು ಗುಂಡಿನ ದಾಳಿ ಪ್ರಕರಣಗಳು ಸಂಭವಿಸಿದ್ದು, ಇದರ ನಿಯಂತ್ರಣ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 1984ರಿಂದ ಸಾಮೂಹಿಕ ಗುಂಡಿನ ದಾಳಿಗಳು ಅಮೆರಿಕದಲ್ಲಿ ನಡೆಯುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅದರ ಪ್ರಮಾಣ ಮತ್ತು ಜೀವಹಾನಿ ಆತಂಕ ಮೂಡಿಸುವಷ್ಟು ಹೆಚ್ಚಾಗಿದೆ. ‘ಎಂಟು ವರ್ಷದ ಬಾಲಕನಿಂದ ಹಿಡಿದು 60 ವರ್ಷದ ವೃದ್ಧರವರೆಗೂ ಏಕಾಏಕಿ ಬಂದೂಕನ್ನು ಆರ್ಭಟಿಸಿ, ಅಮಾಯಕ ಜನರ ಪ್ರಾಣ ತೆಗೆಯುತ್ತಿದ್ದಾರೆ. ಅದರಲ್ಲೂ, ವಿದ್ಯಾರ್ಥಿಗಳು ಸಹಪಾಠಿಗಳನ್ನು ಮತ್ತು ಶಿಕ್ಷಕರನ್ನು ಕೊಲ್ಲುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಶಾಲೆಗಳನ್ನು ‘ಬಂದೂಕು ಮುಕ್ತ ವಲಯ’ಗಳನ್ನಾಗಿಸಬೇಕು ಎಂಬ ಆಗ್ರಹ ತೀವ್ರ ಸ್ವರೂಪ ಪಡೆದುಕೊಂಡಿದೆ.

ಸುಲಭ ಲಭ್ಯತೆ

ಅಮೆರಿಕದಲ್ಲಿ ಜನರು ಬಂದೂಕು/ ಪಿಸ್ತೂಲ್/ರೈಫಲ್​ಗಳನ್ನು ಸುಲಭವಾಗಿ ಖರೀದಿಸಬಹುದು. ಸಂವಿಧಾನದಲ್ಲೇ ಅದಕ್ಕೆ ಮಾನ್ಯತೆ ಇದ್ದು, ಇದಕ್ಕೆ ತಿದ್ದುಪಡಿ ತರಬೇಕು ಎಂಬ ಆಗ್ರಹ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿದೆ. ಬಂದೂಕು ಮಾರಲು ಪರವಾನಗಿ ಹೊಂದಿರುವ ಮಳಿಗೆಗಳಿಗೆ ಹೋದರೆ ಗರಿಷ್ಠ ಎಂದರೆ ಒಂದೂವರೆ ಗಂಟೆಯಲ್ಲಿ ಹೊಸ ಬಂದೂಕು/ಪಿಸ್ತೂಲು ಖರೀದಿಸಬಹುದು. ಈ ಸುಲಭ ಲಭ್ಯತೆಯೇ ಸಮಸ್ಯೆಯಾಗಿ ಪರಿಣಮಿಸಿದ್ದು, ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಕಳವಳ ಮೂಡಿಸಿದೆ. ಅಮೆರಿಕನ್ ರೌಂಡ್ಸ್ ಎಂಬ ಕಂಪನಿಯು ಟೆಕ್ಸಾಸ್, ಅಲಬಾಮ, ಓಕ್ಲಹೋಮ ರಾಜ್ಯಗಳಲ್ಲಿ ದಿನಸಿ ಮಳಿಗೆಗಳಲ್ಲಿ ಬಂದೂಕು ಮಾರುವ ಯಂತ್ರಗಳನ್ನು (ವೆಂಡಿಂಗ್ ಮಶೀನ್) ಅಳವಡಿಸಿದೆ. ‘ಅಮೆರಿಕದಲ್ಲಿ ಬಂದೂಕು ಹಿಂಸಾಚಾರ ದೊಡ್ಡ ಸಮಸ್ಯೆ’ ಎಂದು ಹಲವು ಸಮೀಕ್ಷಾ ಸಂಸ್ಥೆಗಳ ವರದಿಗಳು ಸ್ಪಷ್ಟಪಡಿಸಿವೆ.

ವಿಡಿಯೋ ಗೇಮ್ ಹಾವಳಿ

ಮಾರಕ ಗುಂಡಿನ ದಾಳಿಯ ಹಿಂದೆ ಹಿಂಸೆಗೆ ಪ್ರಚೋದಿಸುವ ವಿಡಿಯೋ ಗೇಮ್ಳು ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಬಂದೂಕು ಹಿಂಸೆಯ ವಿಡಿಯೋ ಗೇಮ್ ನೋಡಿರುವ ಅಥವಾ ಆಡಿರುವ ಮಕ್ಕಳ ಪೈಕಿ ಶೇಕಡ 60 ಮಕ್ಕಳು ಕೂಡಲೇ ಗನ್ ಹೊಂದಲು ಬಯಸುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ‘ಹಿಂಸಾತ್ಮಕ ವಿಡಿಯೋ ಗೇಮ್ಳು ಮತ್ತು ದ್ವೇಷದ ಭಾವನೆಯೇ ಶೂಟೌಟ್​ಗಳಿಗೆ ಕಾರಣವಾಗುತ್ತಿವೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹೇಳಿದ್ದಾರೆ. ಅಮೆರಿಕದಲ್ಲಿ ಶೇಕಡ 90 ಮಕ್ಕಳು ವಿಡಿಯೋ ಗೇಮ್ ಆಡುತ್ತಾರೆ. ಈ ಪೈಕಿ ಬಾಲಕರ ಪ್ರಮಾಣ ಶೇಕಡ 99 ಆಗಿದ್ದರೆ ಬಾಲಕಿಯರ ಪ್ರಮಾಣ ಶೇ. 94. ಹಿಂಸೆಯ ವಿಡಿಯೋ ಗೇಮ್ಳನ್ನು ಆಡಿದ ಬಳಿಕ ಮಕ್ಕಳಲ್ಲಿ ಗನ್​ಗಳನ್ನು ಹೊಂದುವ, ಟ್ರಿಗರ್ ಅದುಮುವ ಇಚ್ಛೆ ಬಲಗೊಳ್ಳುತ್ತದೆ. ಗನ್ ಪಡೆದುಕೊಂಡ ಮಕ್ಕಳು ಸಣ್ಣಪುಟ್ಟ ಚಿಂತೆಗಳಿಗೆ ಅಥವಾ ಕೆಲವೊಮ್ಮೆ ಮನೆಯಲ್ಲಿನ ವಾತಾವರಣಕ್ಕೆ ರೋಸಿಹೋಗಿ ಗುಂಡಿನ ದಾಳಿಯಂಥ ಕೃತ್ಯಗಳಿಗೆ ಕೈಹಾಕುತ್ತಾರೆ. 2018ರಲ್ಲಿ ಫ್ಲೋರಿಡಾ ಹೈಸ್ಕೂಲ್​ನಲ್ಲಿ ಶೂಟೌಟ್ ಮಾಡಿ 17 ಜನರ ಸಾವಿಗೆ ಕಾರಣನಾದ ನಿಕೊಲಸ್ ಕ್ರೂಜ್ ದಿನಕ್ಕೆ 15 ಗಂಟೆ ಹಿಂಸಾತ್ಮಕ ವಿಡಿಯೋ ಗೇಮ್ ಆಡುತ್ತಿದ್ದ. ಕೆಲವು ಘಟನೆಗಳಿಗೆ ಖಿನ್ನತೆ, ಅತಿಯಾದ ಚಿಂತೆಯೂ ಕಾರಣವಾಗಿವೆ.

ರಾಜಕೀಯ ಭಿನ್ನಾಭಿಪ್ರಾಯ

ಗನ್ ಕಲ್ಚರ್ ನಿಯಂತ್ರಣದ ಬಗ್ಗೆ ರಾಜಕೀಯ ಭಿನ್ನಾಭಿಪ್ರಾಯ ಈ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ರಿಪಬ್ಲಿಕನ್ ಪಕ್ಷದ ಸದಸ್ಯರು, ಬೆಂಬಲಿಗರು ಬಂದೂಕು ಬಳಕೆ, ಮಾರಾಟದ ಪರವಾಗಿದ್ದರೆ, ಡೆಮಾಕ್ರಟಿಕ್ ಪಕ್ಷದವರು ವಿರುದ್ಧವಾಗಿದ್ದಾರೆ. ಆದರೆ, ಏಕಕಾಲಕ್ಕೆ ಹೆಚ್ಚು ಗುಂಡುಗಳನ್ನು ಹೊಡೆಯುವ ಸಾಮರ್ಥ್ಯವಿರುವ ಬಂದೂಕುಗಳು ಮತ್ತು ಅಸಾಲ್ಟ್ ರೈಫಲ್​ಗಳ ಮಾರಾಟ ಮತ್ತು ಬಳಕೆಗೆ ನಿಯಂತ್ರಣ ಹೇರಬೇಕು ಎಂಬ ಅಭಿಪ್ರಾಯವನ್ನು ಉಭಯ ಪಕ್ಷದ ಸದಸ್ಯರು ಹೊಂದಿದ್ದಾರೆ. ಕಠಿಣ ಕಾನೂನಿಗೆ ಟ್ರಂಪ್ ವಿರೋಧವಿದೆ. ಬಂದುಕನ್ನು ಖರೀದಿಸಿದವರ ಹಿನ್ನೆಲೆ ಪರಿಶೀಲನೆ ಮತ್ತು ಇತರ ಕೆಲ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಈ ಹಿಂದಿನ ಅಧ್ಯಕ್ಷ ಜೋ ಬೈಡೆನ್ ಬಂದೂಕು ಭದ್ರತಾ ಕಾನೂನಯ ಜಾರಿಗೆ ತಂದಿದ್ದರು ಅಲ್ಲದೆ, ‘ಘೋಸ್ಟ್ ಗನ್’ (ಬಿಡಿ ಭಾಗ ತಂದು ಜೋಡಿಸಿದ ಬಂದೂಕು) ನಿಷೇಧಿಸಿದ್ದರು. ಆದರೆ, ಬಂದೂಕುಗಳ ನಿಯಂತ್ರಣ ನೀತಿಗೆ ವಿರುದ್ಧವಾಗಿರುವ ಡೊನಾಲ್ಡ್ ಟ್ರಂಪ್ ಸ್ವತಃ ಕಳೆದ ವರ್ಷ ಗುಂಡಿನ ದಾಳಿಗೆ ಒಳಗಾಗಿದ್ದಾರೆ. ಟ್ರಂಪ್ ಮೊದಲನೇ ಬಾರಿ ಅಧ್ಯಕ್ಷರಾಗಿದ್ದಾಗ (2017-2021) ಬಂದೂಕು ಕಾನೂನನ್ನು ಸಡಿಲಗೊಳಿಸಿದ್ದರು.

ಬೆಚ್ಚಿಬೀಳಿಸಿದ ಪ್ರಕರಣಗಳು

  • 2022ರಲ್ಲಿ ಟೆಕ್ಸಾಸ್​ನ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ 8 ವರ್ಷದ ವಿದ್ಯಾರ್ಥಿ ಸಾಲ್ವಾಡೋರ್ ರೈಮಸ್ ಎಂಬಾತ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ 19 ಜನ ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸೇರಿ 21 ಜನರು ಬಲಿಯಾದರು. ಪೊಲೀಸರು ದಾಳಿಕೋರರನ್ನು ಹತ್ಯೆ ಮಾಡಿದರಾದರೂ, ಮಕ್ಕಳನ್ನು ಕಳೆದುಕೊಂಡ ಪಾಲಕರ ಸ್ಥಿತಿ?
  • 2012ರಲ್ಲಿ ಕನೆಕ್ವಿಕಟ್​ನ ನ್ಯೂಟೌನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ದಾಳಿ ನಂತರ ಎಲಿಮೆಂಟ್ರಿ ಶಾಲೆಯೊಂದರಲ್ಲಿ ನಡೆದ ಭೀಕರ ದಾಳಿ ಇದಾಗಿತ್ತು. 2012ರ ಡಿಸೆಂಬರ್ 14ರಂದು 20 ವರ್ಷದ ಯುವಕ ಎಡಮ್ ಲಾಂಜಾ ನ್ಯೂಟೌನ್ ಶಾಲೆಯಲ್ಲಿ ನಡೆಸಿದ ಭೀಕರ ಗುಂಡಿನ ದಾಳಿಗೆ 26 ಜನ ಮೃತಪಟ್ಟಿದ್ದರು. ಈ ಪೈಕಿ 20 ವಿದ್ಯಾರ್ಥಿಗಳು ಮತ್ತು ಆರು ಜನ ಶಿಕ್ಷಕರಿದ್ದರು. ಮನೆಯಲ್ಲಿ ತನ್ನ ತಾಯಿಯನ್ನು ಹತ್ಯೆಗೈದ ಬಳಿಕ ಎಡಮ್ ಶಾಲೆಗೆ ನುಗ್ಗಿ, ಈ ಕೃತ್ಯ ಎಸಗಿದ್ದ.

ಹೆಚ್ಚುತ್ತಲೇ ಇವೆ ಘಟನೆಗಳು

2022ರಲ್ಲಿ ಅಮೆರಿಕದ 40 ಶಾಲೆಗಳಲ್ಲಿ ಗುಂಡಿನ ದಾಳಿ ನಡೆದಿದ್ದವು. ದೇಶಾದ್ಯಂತ ಇದೇ ಅವಧಿಯಲ್ಲಿ 200ಕ್ಕೂ ಹೆಚ್ಚು ಗುಂಡಿನ ದಾಳಿಯ ಘಟನೆಗಳು ಸಂಭವಿಸಿದವು. 2023, 2024ರಲ್ಲೂ ಪರಿಸ್ಥಿತಿ ಭಿನ್ನವೇನಿಲ್ಲ. ನ್ಯಾಶನಲ್ ಗನ್ ವೈಲೆನ್ಸ್ ಮೆಮೊರಿಯಲ್​ನ ಅಂಕಿಅಂಶದ ಪ್ರಕಾರ, 2021ರಲ್ಲಿ ಅಮೆರಿಕದಲ್ಲಿ ಗುಂಡಿನ ದಾಳಿಯ 693, 2020ರಲ್ಲಿ 611, 2019ರಲ್ಲಿ 417 ಘಟನೆಗಳು ಸಂಭವಿಸಿವೆ.

ದಾಳಿಗೆ ಕಾರಣಗಳು

ಜನರಲ್ಲಿ ತೀವ್ರಗೊಳ್ಳುತ್ತಿರುವ ಹತಾಶ ಮನೋಭಾವ ಮತ್ತು ಖಿನ್ನತೆ. ಜನರಲ್ಲಿನ ಅಭದ್ರತೆಯ ಭಾವ ಮತ್ತು ಆತಂಕ. ರಾಜಕೀಯ ದ್ವೇಷ ಮತ್ತು ಅಸೂಯೆ. ಕೌಟುಂಬಿಕ ಸಮಸ್ಯೆ, ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು, ಕಲಹ. ಒತ್ತಡದ ಜೀವನಶೈಲಿ, ಬದುಕಿನ ಕುರಿತಂತೆ ನಿರಾಶಾವಾದ.

ಜಾಗೃತಿಯ ಅಗತ್ಯವೂ ಇದೆ

ಗುಂಡಿನ ದಾಳಿ ಪ್ರಕರಣಗಳು ಸಮೂಹಸನ್ನಿ ಯಂತೆ ಮಾರ್ಪಡುತ್ತಿದ್ದು, ಕೂಡಲೇ ಕಡಿವಾಣ ಹಾಕದಿದ್ದರೆ ಅಶಾಂತಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳು, ಹದಿಹರೆಯದವರು, ಯುವಕ- ಯುವತಿಯರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ಅಗತ್ಯವಿದೆ. ಇದಕ್ಕಾಗಿ, ಶಾಲೆ- ಕಾಲೇಜುಗಳಲ್ಲಿಯೇ ಕೌನ್ಸೆಲಿಂಗ್ ಕೇಂದ್ರ ತೆರೆಯುವುದು, ಹಿಂಸೆ ವಿರೋಧಿ ಮನೋ ಭಾವ ಬೆಳೆಸುವುದು, ಉತ್ತಮ ಹವ್ಯಾಸಗಳಿಗೆ ಉತ್ತೇಜನ ಅಗತ್ಯ.

ಮಾರಕವಾದದ್ದು ಹೇಗೆ?

ಗನ್ ಮಾಲೀಕತ್ವ ಹಾಗೂ ಹಿಂಸಾಚಾರದ ನಡುವೆ ನೇರ ಸಂಬಂಧ ಇರುವಂಥದ್ದನ್ನು ಹಲವು ಅಧ್ಯಯನಗಳು ಪತ್ತೆ ಹಚ್ಚಿವೆ. ಜಗತ್ತಿನಲ್ಲೇ ಅತಿಹೆಚ್ಚು ಜನರು ಗನ್ ಮಾಲೀಕತ್ವ ಹೊಂದಿರುವುದು ಅಮೆರಿಕದಲ್ಲೆ ಆಗಿದ್ದು, ಇದರ ಪರಿಣಾಮ ಜಗತ್ತಿನ ಶೇಕಡ 62ರಷ್ಟು ಶೂಟೌಟ್​ಗಳು ಶಾಲೆ ಹಾಗೂ ಕೆಲಸದ ಸ್ಥಳಗಳಲ್ಲೇ ನಡೆಯತ್ತವೆ. ‘ಸಮಸ್ಯೆ, ಬಿಕ್ಕಟ್ಟು ಶಮನಕ್ಕೆ ಬಂದೂಕು ಒಂದೇ ಪರಿಹಾರ’ ಎಂಬ ಭಾವ ಅನೇಕರಲ್ಲಿದೆ.

ಪ್ಯೂ ರಿಸರ್ಚ್ ಸೆಂಟರ್ ದತ್ತಾಂಶಗಳ ಪ್ರಕಾರ, ಗುಂಡಿನ ದಾಳಿಗೆ ಬಲಿಯಾಗುವವರಲ್ಲಿ ಬಿಳಿಯರಿಗಿಂತ ಕರಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಂದೂಕು ಹೊಂದಿದವರನ್ನು ಗಮನಿಸಿದರೆ, ಕರಿಯರ ಸಂಖ್ಯೆ(24%)ಗಿಂತ ಬಿಳಿಯರ ಸಂಖ್ಯೆ(38%) ಹೆಚ್ಚು.

ಆತ್ಮಹತ್ಯೆ, ಸಾಮೂಹಿಕ ಹತ್ಯಾಕಾಂಡದಂಥ ಘಟನೆಗಳಿಗೂ ಬಂದೂಕೇ ಅಸ್ತ್ರವಾಗಿದೆ. ಇದು ಸಾಮಾಜಿಕ ಅಶಾಂತಿಗೆ ಕಾರಣವಾಗಿದ್ದು, ಯಾವ ಸಂದರ್ಭದಲ್ಲಿ ಎಲ್ಲಿ ಗುಂಡಿನ ದಾಳಿ ನಡೆಯುತ್ತದೆ ಎಂದು ಊಹಿಸಲು ಸಾಧ್ಯವಾಗದಂಥ ಪರಿಸ್ಥಿತಿ ಉದ್ಭವಿಸಿದೆ.

ಶಾಲೆಗಳಲ್ಲಿ ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಗುಂಡಿನ ದಾಳಿಗಳು ನಿಲ್ಲುತ್ತಿಲ್ಲ. ತೀರ ಕ್ಷುಲ್ಲಕ ಕಾರಣಗಳಿಗಾಗಿ ಮಕ್ಕಳು ಶಿಕ್ಷಕರನ್ನು, ಸಹಪಾಠಿಗಳನ್ನು ಗುಂಡಿನ ದಾಳಿ ಮೂಲಕ ಹತ್ಯೆಗೈಯ್ಯುವ ಘಟನೆಗಳು ಮರುಕಳಿಸುತ್ತಿವೆ. ಕೆಲ ಬಿಗಿಕ್ರಮಗಳನ್ನು ಅನುಸರಿಸಿದರೆ ಗುಂಡಿನ ದಾಳಿಗಳಲ್ಲಿ 1/3ರಷ್ಟು ಪ್ರಕರಣಗಳನ್ನು ತಡೆಯಲು ಸಾಧ್ಯ ಎನ್ನುವ ರಕ್ಷಣಾ ವಿಶ್ಲೇಷಕರು ಇದರಿಂದ ವರ್ಷಕ್ಕೆ ಕನಿಷ್ಠ 10 ಸಾವಿರ ಜನರ ಪ್ರಾಣ ಉಳಿಸಬಹದು ಎಂದು ಅಭಿಪ್ರಾಯಪಡುತ್ತಾರೆ.

ಅಮೆರಿಕದ ನ್ಯಾಷನಲ್ ರೈಫಲ್ ಅಸೋಸಿಯೇಷನ್ (National Rifle Association) ವಿರುದ್ಧವೂ ಆಕ್ಷೇಪ, ಟೀಕೆಗಳು ಕೇಳಿಬರುತ್ತಿವೆ. ಕಾರಣ, ಎನ್​ಆರ್​ಎ ಬೇಕಾಬಿಟ್ಟಿ ಗನ್ ಪರವಾನಿಗೆ ನೀಡುತ್ತಿದ್ದು, ವ್ಯಕ್ತಿಗಳ ಪೂರ್ವಾಪರವನ್ನು ಸರಿಯಾಗಿ ಪರಿಶೀಲಿಸುತ್ತಿಲ್ಲ. ಹಾರ್ವರ್ಡ್ ವಿಶ್ವವಿದ್ಯಾಲಯ ನಡೆಸಿರುವ ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಗನ್ ಲೈಸೆನ್ಸ್ ಪಡೆದವರ ಪೈಕಿ ಶೇಕಡ 40ರಷ್ಟು ಜನರ ಹಿನ್ನೆಲೆಯನ್ನು ಪರಿಶೀಲಿಸಲಾಗಿಲ್ಲ. ಇದರಿಂದ ಅಪಾಯಕಾರಿ ವ್ಯಕ್ತಿಗಳ ಕೈಗೆ ಬಂದೂಕು ಸೇರುತ್ತಿವೆ. ಈ ಹಿಂದೆಯೂ ಈ ಬಗ್ಗೆ ಎನ್​ಐಎ ಗಮನಕ್ಕೆ ತರಲಾದರೂ, ಹೇಳಿಕೊಳ್ಳುವಂಥ ಪ್ರಯೋಜನವಾಗಿಲ್ಲ. ಶಸ್ತ್ರಾಸ್ತ್ರಗಳು ಸುಲಭವಾಗಿ ಸಿಗುವವರೆಗೂ ಇಂಥ ಗುಂಡಿನ ದಾಳಿಗಳನ್ನು ತಡೆಯುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net