ಸಿಹಿತಿಂಡಿ ಜತೆಗೆ 500 ರೂ. ನೋಟುಗಳನ್ನು ಬಡಿಸಿದ ಅಂಬಾನಿ ಕುಟುಂಬ! ಇಲ್ಲಿದೆ ನೋಟಿನ ಅಸಲಿಯತ್ತು​

Ambani Family
Published on

ಮುಂಬೈ: ಕಲಾವಿದರ ಸಮಾಗಮದಲ್ಲಿ ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್​ಎಂಎಸಿಸಿ) ಅದ್ಧೂರಿಯಾಗಿ ಉದ್ಘಾಟನೆಯಾಗಿದೆ. ಭಾರತದ ಮೆಟ್​ ಗಾಲಾ ಎಂದು ಕರೆಯಲ್ಪಡುವ ಕಾರ್ಯಕ್ರಮಕ್ಕೆ ಜಗತ್ತಿನ ಮೂಲೆ ಮೂಲೆಗಳಿಂದ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ಅದ್ಧೂರಿ ಕಾರ್ಯಕ್ರಮ ಮಾರ್ಚ್ 31 ಮತ್ತು ಏಪ್ರಿಲ್​ 1ರಂದು ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಸಂಬಂಧಿಸಿದ ಅನೇಕ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಅವುಗಳಲ್ಲಿ ಒಂದು ಫೋಟೋ ಮಾತ್ರ ವಿಶೇಷವಾಗಿ ಜನರ ಗಮನ ಸೆಳೆದಿದೆ. ಆ ಫೋಟೋ ಯಾವುದೆಂದರೆ, ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬ ಊಟೋಪಚಾರ ಮಾಡಿರುವ ಫೋಟೋ.

ಅತಿಥಿಗಳಿಗೆ ಭೂರಿ ಭೋಜನ ವ್ಯವಸ್ಥೆಯನ್ನೇ ಮಾಡಲಾಗಿತ್ತು. ಎಲ್ಲರಿಗೂ ಬೆಳ್ಳಿ ತಟ್ಟೆಯಲ್ಲಿ ಉಣ ಬಡಿಸಲಾಯಿತು. ರೋಟಿ, ದಾಲ್​, ಪಾಲಕ್​ ಪನ್ನೀರ್​, ಕರ್ರಿ, ಹಲ್ವಾ, ಸಿಹಿತಿಂಡಿ, ಅಪ್ಪಳ ಮತ್ತು ಲಾಡು ಮುಂತಾದ ಭಾರತೀಯ ಆಹಾರದ ಜತೆಗೆ ಒಂದು ಗ್ಲಾಸ್​ ವೈನ್​ ಕೂಡ ಅತಿಥಿಗಳಿಗೆ ನೀಡಲಾಯಿತು.

ಇದೀಗ ಊಟದ ಮೆನುವಿನಲ್ಲಿದ್ದ ಒಂದು ಖಾದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಉತ್ತರ ಭಾರತದ ಜನಪ್ರಿಯ ಸಿಹಿ ಖಾದ್ಯವಾದ ದೌಲತ್​ ಕಿ ಚಾತ್ ಜೊತೆಗೆ 500 ರೂ. ಗರಿ ಗರಿಯಾದ ನೋಟುಗಳನ್ನು ಸಹ ಬಡಿಸಲಾಗಿದೆ. 500 ರೂ. ನೋಟುಗಳು ಊಟದ ತಟ್ಟೆಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಅಸಲಿಯತ್ತು ಏನೆಂದರೆ, ಈ ನೋಟುಗಳು ನಕಲಿ ನೋಟುಗಳಾಗಿವೆ.

NMACC ಯ ಭವ್ಯ ಉದ್ಘಾಟನಾ ಸಮಾರಂಭವು ಎರಡು ದಿನಗಳ ಸುದೀರ್ಘ ಕಾರ್ಯಕ್ರಮವಾಗಿತ್ತು. ನೀತಾ ಅಂಬಾನಿಯವರ ಕನಸಿನ ಯೋಜನೆ ಎಂದು ಬಣ್ಣಿಸಲಾದ NMACC ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಹಾಲಿವುಡ್ ತಾರೆಯರಾದ ಟಾಮ್ ಹಾಲೆಂಡ್, ಝೆಂಡಾಯಾ, ಗಿಗಿ ಹಡಿದ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರಾ, ಗೌರಿ ಖಾನ್, ಕಿಯಾರಾ ಅಡ್ವಾಣಿ, ಕರಣ್ ಜೋಹರ್, ಕರೀನಾ ಕಪೂರ್, ಐಶ್ವರ್ಯಾ ರೈ, ಕಾಜೋಲ್, ರಣವೀರ್ ಸಿಂಗ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ಉದ್ಘಾಟನಾ ಸಮಾರಂಭದಲ್ಲಿ ಪೂರ್ಣವಾಗಿ ಹಾಜರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net