More

    ರಫ್ತು ಹೆಚ್ಚಳದ ಗುರಿ: ಭಾರತದ ಹೊಸ ವಿದೇಶ ವ್ಯಾಪಾರ ನೀತಿ ಅನಾವರಣ

    ಕೇಂದ್ರ ಸರ್ಕಾರವು 2015ರಲ್ಲಿ ಅನುಷ್ಠಾನಗೊಳಿಸಿದ್ದ ಐದು ವರ್ಷಗಳ ಅವಧಿಯ ವಿದೇಶ ವ್ಯಾಪಾರ ನೀತಿಯೇ ಇದುವರೆಗೆ ವಿಸ್ತರಣೆಗೊಂಡಿತ್ತು. ಈಗ ನೂತನ ನೀತಿಯನ್ನು ಜಾರಿಗೊಳಿಸಲಾಗಿದ್ದು, ರಫ್ತಿನ ಪ್ರಮಾಣವನ್ನು 2030ರ ಹೊತ್ತಿಗೆ 2 ಟ್ರಿಲಿಯನ್ ಡಾಲರ್​ಗೆ (164 ಲಕ್ಷ ಕೋಟಿ ರೂಪಾಯಿಗೆ) ಹೆಚ್ಚಿಸುವ ಮಹತ್ವದ ಗುರಿಯನ್ನು ಇದು ಹೊಂದಿದೆ.

    ಕೇಂದ್ರ ಸರ್ಕಾರ ಹೊಸ ವಿದೇಶ ವ್ಯಾಪಾರ ನೀತಿಯನ್ನು (ಎಫ್​ಟಿಪಿ) ಅಂತಿಮವಾಗಿ ಅನಾವರಣಗೊಳಿಸಿದ್ದು, ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಈ ಹಿಂದಿನ ನೀತಿ 2015ರಲ್ಲಿ ಆರಂಭವಾಗಿದ್ದು, 2020ರ ಮಾರ್ಚ್​ನಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ಮತ್ತು ಲಾಕ್​ಡೌನ್​ಗಳ ಹಿನ್ನೆಲೆಯಲ್ಲಿ ಅನೇಕ ಬಾರಿ ವಿಸ್ತರಿಸಲಾಗಿತ್ತು. ರಷ್ಯಾ- ಯೂಕ್ರೇನ್ ಯುದ್ಧದ ಬೆಳವಣಿಗೆಗಳ ಕಾರಣದಿಂದಾಗಿ 2022ರ ಸೆಪ್ಟೆಂಬರ್​ನಿಂದ 2023ರ ಮಾರ್ಚ್ 31ರವರೆಗೆ ಕೊನೆಯ ಬಾರಿಗೆ ವಿಸ್ತರಿಸಲಾಗಿತ್ತು.

    ಸರಕು ಮತ್ತು ಸೇವಾ ವಲಯಗಳಿಂದ ಸಮಾನ ಕೊಡುಗೆಗಳೊಂದಿಗೆ 2030 ರ ವೇಳೆಗೆ ಭಾರತದ ಒಟ್ಟಾರೆ ರಫ್ತು ಪ್ರಮಾಣವನ್ನು 2 ಟ್ರಿಲಿಯನ್ ಡಾಲರ್​ಗೆ (164 ಲಕ್ಷ ಕೋಟಿ ರೂಪಾಯಿಗೆ) ಹೆಚ್ಚಿಸುವ ಗುರಿಯನ್ನು ಹೊಸ ವಿದೇಶ ವ್ಯಾಪಾರ ನೀತಿಯು ಹೊಂದಿದೆ. ಜುಲೈ 2022 ರಲ್ಲಿ ಆರ್​ಬಿಐ ಪರಿಚಯಿಸಿದ ಹೊಸ ಪಾವತಿ ವ್ಯವಸ್ಥೆಯ ಸಹಾಯದಿಂದ ಗಡಿಯಾಚೆಗಿನ ವ್ಯಾಪಾರದಲ್ಲಿ ಭಾರತೀಯ ಕರೆನ್ಸಿಯ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಉದ್ದೇಶಿಸಿದೆ. ಭಾರತವು ವ್ಯಾಪಾರ ಮಿಗತೆ (ಆಮದಿಗಿಂತ ರಫ್ತು ಹೆಚ್ಚಾಗಿರುವುದು) ಹೊಂದಿರುವ ದೇಶಗಳ ಸಂದರ್ಭದಲ್ಲಿ ಇದು ವಿಶೇಷವಾಗಿ ಅನುಕೂಲ ಆಗಲಿದೆ.

    ವಿದೇಶ ವ್ಯಾಪಾರ ನೀತಿಯ ಅವಧಿ ಈ ಹಿಂದೆ ಐದು ವರ್ಷಗಳ ಅವಧಿಯದ್ದಾಗಿತ್ತು. ಆದರೆ, ಈ ಬಾರಿ ಈ ಸಂಪ್ರದಾಯವನ್ನು ಸರ್ಕಾರ ಮುರಿದಿದೆ. ಹೊಸ ನೀತಿಗೆ ಯಾವುದೇ ಕಾಲಮಿತಿ ನಿಗದಿಪಡಿಸಲಾಗಿಲ್ಲ. ಹೊಸ ನೀತಿಯು ಬದಲಾಗುತ್ತಿರುವ ಸಂದರ್ಭಗಳಿಗೆ ಸ್ಪಂದಿಸುವ ಉದ್ದೇಶ ಹೊಂದಿದ್ದು, ಅಗತ್ಯವಿದ್ದಾಗ ಅದನ್ನು ಮಾರ್ಪಡಿಸಬಹುದಾಗಿದೆ. ಹೆಚ್ಚುವರಿಯಾಗಿ, ನೀತಿಯನ್ನು ವರ್ಧಿಸಲು ಮತ್ತು ಪರಿಷ್ಕರಿಸಲು ಸರ್ಕಾರವು ಸಂಬಂಧಿತ ಮಧ್ಯಸ್ಥಗಾರರಿಂದ ಸತತವಾಗಿ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ.

    ವಿದೇಶ ವ್ಯಾಪಾರ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ 1992ರ ಪ್ರಕಾರ, ರಫ್ತುಗಳನ್ನು ಹೆಚ್ಚಿಸಲು, ಆಮದುಗಳನ್ನು ಸುಗಮಗೊಳಿಸಲು ಮತ್ತು ಪಾವತಿಗಳ ಅನುಕೂಲಕರ ಸಮತೋಲನವನ್ನು ನಿರ್ವಹಿಸಲು ಸರ್ಕಾರವು ವ್ಯಾಪಾರ ನೀತಿಗಳನ್ನು ರೂಪಿಸುವುದು, ಕಾರ್ಯಗತಗೊಳಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ಅಗತ್ಯ 1992ರ ಮೊದಲ ಐದು ವರ್ಷಗಳ ರಫ್ತು-ಆಮದು (ಎಕ್ಸಿಂ) ನೀತಿ ಮತ್ತು 1997-2002 ರಲ್ಲಿ ಎರಡನೆಯ ಎಕ್ಸಿಂ ನೀತಿಯು ಸ್ವಾತಂತ್ರಾ್ಯನಂತರದ ಅನೇಕ ವ್ಯಾಪಾರ ರಕ್ಷಣಾ ಕ್ರಮಗಳನ್ನು ತೆಗೆದುಹಾಕಲು ಮತ್ತು ಜಾಗತಿಕ ಆರ್ಥಿಕತೆಯೊಂದಿಗೆ ಭಾರತದ ಏಕೀಕರಣವನ್ನು ಉತ್ತೇಜಿಸುವ ಗುರಿ ಹೊಂದಿತ್ತು. 2004ರಲ್ಲಿ, ಭಾರತದ ವಿದೇಶಿ ವ್ಯಾಪಾರಕ್ಕೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಎಕ್ಸಿಂ ನೀತಿಯನ್ನು ವಿದೇಶ ವ್ಯಾಪಾರ ನೀತಿ ಎಂದು ಮರುನಾಮಕರಣ ಮಾಡಲಾಯಿತು. ನಂತರ, 2009-14 ಮತ್ತು 2015-20ರ ಅವಧಿಗೆ ಎಫ್​ಟಿಪಿಗಳನ್ನು ಜಾರಿಗೆ ತರಲಾಯಿತು.

    ಹಲವು ಅಂಶಗಳಿಗೆ ಒತ್ತು

    ಹೊಸ ನೀತಿಯಲ್ಲಿ ಹಲವು ಅಂಶಗಳಿಗೆ ಒತ್ತು ನೀಡಲಾಗಿದೆ. ಇವುಗಳೆಂದರೆ, ರಫ್ತುಗಳನ್ನು ಉತ್ತೇಜಿ ಸುವ ಪೋ›ತ್ಸಾಹ ಆಧಾರಿತ ವ್ಯವಸ್ಥೆಯನ್ನು ಅರ್ಹತೆ ಆಧಾರಿತ ಆಡಳಿತಗಳೊಂದಿಗೆ ಬದಲಾಯಿಸುವುದು. ರಫ್ತುದಾರರು, ರಾಜ್ಯಗಳು, ಜಿಲ್ಲೆಗಳು ಮತ್ತು ಭಾರತೀಯ ಕಾರ್ಯಪಡೆಗಳ ನಡುವೆ ಸಹಯೋಗವನ್ನು ಹೆಚ್ಚಿಸು ವುದು. ವಹಿವಾಟಿನ ವೆಚ್ಚವನ್ನು ಕಡಿಮೆ ಮಾಡುವುದು. ವ್ಯಾಪಾರ ಕಾರ್ಯಾಚರಣೆಗಳಲ್ಲಿ ಸುಲಭವಾಗುವಂತೆ ಇ-ಉಪಕ್ರಮಗಳನ್ನು ಪರಿಚಯಿಸುವುದು. ಹೆಚ್ಚುವರಿ ರಫ್ತು ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು. ವಿಶೇಷ ರಾಸಾಯನಿಕಗಳು, ಜೀವಿಗಳು, ವಸ್ತುಗಳು, ಸಲಕರಣೆಗಳು ಮತ್ತು ತಂತ್ರಜ್ಞಾನಗಳ ಅಡಿಯಲ್ಲಿ ಬರುವ ವಸ್ತುಗಳಿಗೆ ರಫ್ತು ಪ್ರಕ್ರಿಯೆಯನ್ನು ಸರಳಗೊಳಿಸುವುದು.

    ಹಿಂದಿನ ಉದ್ದೇಶಗಳು ಈಡೇರಿವೆಯೇ?

    2015-20ರ ಎಫ್​ಟಿಪಿಯು ಭಾರತದ ರಫ್ತುಗಳನ್ನು 2013-14ರಲ್ಲಿದ್ದ 465 ಶತಕೋಟಿ ಡಾಲರ್​ನಿಂದ (38,27,252 ಕೋಟಿ ರೂಪಾಯಿ) 2019-20ರ ವೇಳೆಗೆ 900 ಶತಕೋಟಿ ಡಾಲರ್​ಗೆ (74,07,585 ಕೋಟಿ ರೂಪಾಯಿ) ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಇದು ಮೂಲಸೌಕರ್ಯ ಕೊರತೆ ಮತ್ತು ಸಂಬಂಧಿತ ವೆಚ್ಚಗಳನ್ನು ಸರಿದೂಗಿಸಲು ರಫ್ತುದಾರರಿಗೆ ಪ್ರೋತ್ಸಾಹಕಗಳನ್ನು ನೀಡಲು ಭಾರತದಿಂದ ಹೊಸ ಸರಕು ರಫ್ತು ಯೋಜನೆಯನ್ನು ಪರಿಚಯಿಸಿತು. ಅಲ್ಲದೆ, ಅಧಿಸೂಚಿತ ಸೇವೆಗಳ ರಫ್ತುಗಳನ್ನು ಉತ್ತೇಜಿಸಲು ಭಾರತದಿಂದ ಸೇವೆಗಳ ರಫ್ತು ಯೋಜನೆಯನ್ನು ಪರಿಚಯಿಸಿತು. 2019-20ರಲ್ಲಿ ನೀತಿಯ ಆರಂಭಿಕ ಅವಧಿಯ ಮುಕ್ತಾಯದಲ್ಲಿ, ಸರಕು ಮತ್ತು ಸೇವೆಗಳ ರಫ್ತು 526.55 ಬಿಲಿಯನ್ ಡಾಲರ್​ಗೆ (43,33,848 ಕೋಟಿ ರೂಪಾಯಿ) ತಲುಪಿತು. ಸಾಂಕ್ರಾಮಿಕ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ರಫ್ತಿನ ವೇಗ 2020-21ರಲ್ಲಿ ಹಳಿತಪ್ಪಿತು. 2022-23ರ ಹಣಕಾಸು ವರ್ಷದಲ್ಲಿ ರಫ್ತಿನ ಪ್ರಮಾಣ 760 ಶತಕೋಟಿ ಡಾಲರ್ (62,55,294 ಕೋಟಿ ರೂಪಾಯಿ) ತಲುಪಲಿದೆ ಎಂದು ಅಂದಾಜಿಸಲಾಗಿದೆ.

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts