ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವೂ ಮುಖ್ಯ

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವೂ ಮುಖ್ಯ
Published on

ಚನ್ನರಾಯಪಟ್ಟಣ: ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶಾಲೆಯಲ್ಲಿ ಸಿಗುವ ಪಠ್ಯ ಶಿಕ್ಷಣದ ಜತೆಗೆ ಮನೆಯಲ್ಲಿ ಪಾಲಕರು ನೀಡುವ ಸಂಸ್ಕಾರದ ಶಿಕ್ಷಣವೂ ಬಹಳ ಮುಖ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಹಾಸನ ಮತ್ತು ಕೊಡಗು ಶಾಖಾಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ಸಮೂಹ ಶಿಕ್ಷಣ ಸಂಸ್ಥೆಯ ಕಬಳಿ, ಅಣತಿ ಹಾಗೂ ಚನ್ನರಾಯಪಟ್ಟಣದ ಶ್ರೀ ಬಾಲಗಂಗಾಧರನಾಥ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಜ್ಞಾನಾಂಕುರ-2025 ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷತೆ ಹಾಕುವ ಮೂಲಕ ಅಕ್ಷರಾಭ್ಯಾಸ ಮಾಡಿಸಿ ಆಶೀರ್ವಚನ ನೀಡಿದ ಅವರು, ಮನೆಯೇ ಮೊದಲ ಪಾಠಶಾಲೆ ಮತ್ತು ಪಾಲಕರು ಮೊದಲ ಶಿಕ್ಷಕರು. ಸಂಸ್ಕಾರಯುತ ಶಿಕ್ಷಣವು ಮಗುವಿನ ನಡವಳಿಕೆ, ಮೌಲ್ಯಗಳು ಮತ್ತು ಸಾಮಾಜಿಕ ಕೌಶಲಗಳನ್ನು ರೂಪಿಸುತ್ತದೆ. ಶಾಲೆಯಲ್ಲಿ ಪಠ್ಯ ಶಿಕ್ಷಣವು ಜ್ಞಾನವನ್ನು ನೀಡಿದರೆ, ಮನೆಯಲ್ಲಿ ಸಂಸ್ಕಾರದ ಶಿಕ್ಷಣವು ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಶಾಲೆಯಲ್ಲಿ ಕಲಿತ ಜ್ಞಾನವನ್ನು ಸಮಾಜದಲ್ಲಿ ಅನ್ವಯಿಸಲು ಮತ್ತು ಉತ್ತಮ ನಾಗರಿಕರಾಗಲು ಸಂಸ್ಕಾರದ ಶಿಕ್ಷಣವು ಸಹಾಯ ಮಾಡುತ್ತದೆ.

ಪಾಲಕರು ತಮ್ಮ ಮಕ್ಕಳೊಂದಿಗೆ ಉತ್ತಮ ನಡವಳಿಕೆ, ಸಭ್ಯತೆ, ಗೌರವ ಮತ್ತು ಇತರ ಮೌಲ್ಯಗಳನ್ನು ಹಂಚಿಕೊಳ್ಳಬೇಕು. ಇದು ಮಗುವಿಗೆ ಜೀವನದುದ್ದಕ್ಕೂ ಸಹಾಯ ಮಾಡುತ್ತದೆ. ಶಾಲೆಯ ಶಿಕ್ಷಣವು ಜ್ಞಾನವನ್ನು ನೀಡಿದರೆ, ಮನೆಯಲ್ಲಿನ ಸಂಸ್ಕಾರದ ಶಿಕ್ಷಣವು ಜೀವನದ ಮೌಲ್ಯಗಳನ್ನು ಕಲಿಸುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಜವಾಬ್ದಾರಿ ಮುಗಿಯುವುದಿಲ್ಲ. ತಂದೆ-ತಾಯಿ ಮಗುವಿನ ಮೊದಲ ಗುರುವಾಗಿದ್ದು, ಮಕ್ಕಳ ಚಟುವಟಿಕೆ ಬಗ್ಗೆ ಪ್ರತಿದಿನ ಗಮನ ಹರಿಸಬೇಕು. ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಮಕ್ಕಳು ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಮಕ್ಕಳು ದೇಶದ ಆಸ್ತಿಯಾಗಿದ್ದು, ಅವರ ಭವಿಷ್ಯ ರೂಪಿಸುವ ಆಸೆ ಎಲ್ಲ ಪಾಲಕರಿಗಿರುತ್ತದೆ. ಅದಕ್ಕೆ ಪೂರಕವಾಗಿ ಆಧುನಿಕ ಜಗತ್ತಿನ ಪ್ರವೇಶಕ್ಕೆ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ಅಣಿಗೊಳಿಸುವುದು ಮಠದ ಉದ್ದೇಶವಾಗಿದೆ. ಹುಟ್ಟಿದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಿದೆ ಎಂದರು. ಮಕ್ಕಳು ಶಾಲೆಯಲ್ಲಿ ಗುರುಗಳು ಹೇಳಿದ್ದನ್ನು ಕೇಳುವುದಕ್ಕಿಂತ ಹೆಚ್ಚಾಗಿ ಪಾಲಕರನ್ನು ಅನುಕರಣೆ ಮಾಡಿ ಕಲಿಯುವುದು ಹೆಚ್ಚು ಹಾಗಾಗಿ ಪ್ರತಿಯೊಬ್ಬ ಪಾಲಕರು ಮಕ್ಕಳ ಮುಂದೆ ಸಂಸ್ಕಾರಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಸ್ವಾಮೀಜಿ ಮಾರ್ಗದರ್ಶನದಲ್ಲಿ ಸರಸ್ವತಿ ಹಾಗೂ ಲೇಖನ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿದ ಪಾಲಕರು ನಂತರ ತಮ್ಮ ಪುಟ್ಟ ಮಕ್ಕಳ ಜತೆ ಕುಳಿತು ಪೂಜೆ ಸಲ್ಲಿಸಿದ ತಟ್ಟೆಯಲ್ಲಿದ್ದ ಅಕ್ಕಿಯಲ್ಲಿ ಓಂಕಾರ ಬರೆಯುವ ಮೂಲಕ ಅಕ್ಷರಾಭ್ಯಾಸ ನಡೆಸಿದರು.

ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ಕಬಳಿ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ತಿಮ್ಮೇಗೌಡ, ಅಣತಿ ಬಿಜಿಎಸ್ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ, ಚನ್ನರಾಯಪಟ್ಟಣ ಬಿಜಿಎಸ್ ಶಾಲೆಯ ಪ್ರಾಂಶುಪಾಲ ಸಿ.ಸಿ.ಕುಮಾರ್ ಸೇರಿದಂತೆ ಶಿಕ್ಷಕ ವೃಂದ ಹಾಗೂ ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net