ದುಬಾರಿ ಮೊತ್ತಕ್ಕೆ ಸೇಲಾಯ್ತು ಅಲ್ಲು ಅರ್ಜುನ್​ ನಟನೆಯ 'ಪುಷ್ಪ 2' ಡಿಜಿಟಲ್ ಹಕ್ಕು!

allu arjun
Published on

ಹೈದರಾಬಾದ್: ಟಾಲಿವುಡ್​ನ ಸ್ಟೈಲಿಶ್ ಸ್ಟಾರ್​, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ಪುಷ್ಪ 2' ಸಿನಿಮಾ ಸದ್ಯ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುತ್ತಿದ್ದು, ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿದೆ. ಇದೀಗ ತನ್ನ ಡಿಜಿಟಲ್ ಹಕ್ಕುಗಳನ್ನು ಪ್ರಮುಖ ಒಟಿಟಿ ಪ್ಲಾಟ್​ಫಾರ್ಮ್​ಗೆ ಭಾರಿ ಮೊತ್ತಕ್ಕೆ ಸೇಲ್ ಮಾಡಿರುವುದಾಗಿ ಮತ್ತೊಮ್ಮೆ ಸುದ್ದಿಯಾಗಿದೆ.

'ಪುಷ್ಪ 1' ಬ್ಲಾಕ್​ಬಸ್ಟರ್​ ಸಿನಿಮಾವಾಗಿ ಹೊರಹೊಮ್ಮಿದ ಬಳಿಕ ಅಲ್ಲು ಅರ್ಜುನ್​ ನಟನೆ ಹಾಗೂ 'ಪುಷ್ಪ 2' ಚಿತ್ರದ ಮೇಲೆ ಭಾರೀ ನಿರೀಕ್ಷೆಗಳು ವ್ಯಕ್ತವಾಯಿತು. ಈ ಸಿನಿಮಾ ಭಾಗ 1 ಅನ್ನು ಮೀರಿಸಲಿದೆ ಹಾಗೂ ಹೆಚ್ಚಿನ ಮನರಂಜನಾ ಅಂಶಗಳನ್ನು ಒಳಗೊಂಡಿದೆ ಎಂದು ಐಕಾನ್ ಸ್ಟಾರ್ ಅಭಿಮಾನಿಗಳು ಅಂದಾಜಿಸಿದ್ದಾರೆ.

ಈಗಾಗಲೇ ಚಿತ್ರತಂಡ ಸಿನಿಮಾವನ್ನು ಆಗಸ್ಟ್​ 15, 2024ರಂದು ಜಾಗತಿಕವಾಗಿ ರಿಲೀಸ್ ಮಾಡುವುದಾಗಿ ಅಧಿಕೃತ ದಿನಾಂಕ ಕೂಡ ಘೋಷಿಸಿದೆ. ಈ ಬೆನ್ನಲ್ಲೇ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಬೃಹತ್ ಬೆಲೆಗೆ ಖರೀದಿ ಮಾಡಿದೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಭಾರೀ ಮೊತ್ತಕ್ಕೆ ಖರೀದಿಸಿದೆ ಎಂದು ಹೇಳಲಾಗಿದ್ದು, ಮೊದಲ ಭಾಗಕ್ಕಿಂತ ಎರಡನೇ ಭಾಗಕ್ಕೆ ಹೆಚ್ಚಿನ ಹಣವನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ. ಸುಕುಮಾರ್ ನಿರ್ದೇಶನದ 'ಪುಷ್ಪ 2' ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಅನಸೂಯಾ ಭಾರದ್ವಾಜ್, ಸಾಯಿ ಪಲ್ಲವಿ, ಪ್ರಿಯಾಮಣಿ, ವಿಜಯ್ ಸೇತುಪತಿ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net