'ಪುಷ್ಪ: ದಿ ರೂಲ್' ಸೆಟ್‌ ವಿಡಿಯೋ ಹಂಚಿಕೊಂಡು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ ಅಲ್ಲು ಅರ್ಜುನ್

arjun
Published on

ಹೈದರಾಬಾದ್: ಅಲ್ಲು ಅರ್ಜುನ್ ಅಭಿನಯದ 'ಪುಷ್ಪ ದಿ ರೂಲ್' ಬಿಡುಗಡೆಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ಈ ಮಧ್ಯೆ ಸ್ವತಃ ಅಲ್ಲು ಅರ್ಜುನ್ ಚಿತ್ರದ ಶೂಟಿಂಗ್ ಸೆಟ್ ತೋರಿಸಿರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅಷ್ಟೇ ಅಲ್ಲ, ವಿಡಿಯೋ ನೋಡಿದಾಗ ಸಿನಿಮಾದಲ್ಲಿ ಅಲ್ಲು ಅರ್ಜುನ್ ಫುಲ್ ಆಕ್ಷನ್ ಸೀನ್​​​ನಲ್ಲಿ ಕಾಣಿಸಿಕೊಂಡಿರುವುದು ಕಂಡುಬಂದಿದೆ. ಅಂದಹಾಗೆ ಪುಷ್ಪ 2 ಶೂಟಿಂಗ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

ಇನ್ಸ್ಟಾದಲ್ಲಿ ವಿಡಿಯೋ ಹಂಚಿಕೊಂಡ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ತಮ್ಮ ದಿನಚರಿಯ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬೆಳಗ್ಗೆ ಯೋಗದಿಂದ ಹಿಡಿದು ಪುಷ್ಪ 2 ಚಿತ್ರೀಕರಣದವರೆಗೆ ತಮ್ಮ ಇಡೀ ದಿನದ ಜರ್ನಿ ತೋರಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ತಮ್ಮ ಐಷಾರಾಮಿ ಬಂಗಲೆಯಿಂದ ಪುಷ್ಪಾ ದಿ ರೂಲ್ ಶೂಟಿಂಗ್ ಸೆಟ್​​ನ ಗ್ಲಿಂಪ್ಸ್ ತೋರಿಸಿದ್ದಾರೆ. ಶೂಟಿಂಗ್ ಸೆಟ್‌ಗೆ ಕರೆದೊಯ್ಯುವ ಮೊದಲು ಹೋಂ ಟೂರ್ ಮಾಡುವುದಾಗಿ ರಿವೀಲ್​​​​ ಮಾಡುವ ಮೂಲಕ ವಿಡಿಯೋ ಪ್ರಾರಂಭಿಸುತ್ತಾರೆ.

ಸುಂದರವಾದ ಉದ್ಯಾನದಲ್ಲಿ ಯೋಗ

ವಿಡಿಯೋದಲ್ಲಿ ಅಲ್ಲು ಅರ್ಜುನ್ ಮನೆಯಲ್ಲಿ ಅಲಂಕರಿಸಿಟ್ಟ ಅನೇಕ ಟ್ರೋಫಿಗಳು, ಸುಂದರವಾದ ಉದ್ಯಾನದಲ್ಲಿ ಯೋಗ ಮಾಡುತ್ತಿರುವುದು, ಆ ನಂತರ ಶೂಟಿಂಗ್ ಸೆಟ್ ಕಡೆಗೆ ಹೊರಟಿರುವುದನ್ನು ತೋರಿಸಿದ್ದಾರೆ. ಹಾಗೆಯೇ ದಾರಿ ಮಧ್ಯೆ ಅಲ್ಲು ಮನೆಗೆ ಕರೆ ಮಾಡಿ ಮಕ್ಕಳೊಂದಿಗೆ ಮಾತನಾಡುತ್ತಿರುವುದನ್ನು ನಾವು ನೋಡಬಹುದು. ಇದು ಅವರ ದಿನಚರಿಯ ಭಾಗವಾಗಿದೆ. ಅಂದಹಾಗೆ ರಾಮೋಜಿ ಚಿತ್ರದ ಸೆಟ್‌ನ ಮುಖ್ಯ ದ್ವಾರವನ್ನು ಪ್ರವೇಶಿಸುವಾಗ, ಇದು ವಿಶ್ವದ ಅತಿದೊಡ್ಡ ಫಿಲ್ಮ್ ಸಿಟಿ ಎಂದು ಅಲ್ಲು ಪರಿಚಯಿಸಿದ್ದಾರೆ.

ಬಿಸಿಲಿನಲ್ಲಿ ಕಾಯುತ್ತಿದ್ದ ಅಭಿಮಾನಿಗಳು

ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಫಿಲ್ಮ್ ಸಿಟಿಯಲ್ಲಿ ಬಿಸಿಲಿನಲ್ಲಿ ಅವರಿಗಾಗಿ ಕಾಯುತ್ತಿರುವುದು ಕಂಡುಬರುತ್ತದೆ. ದುಬಾರಿ ಕಾರಿನಿಂದ ಬಂದಿಳಿದ ತಕ್ಷಣ, ಅವರು ಮೊದಲು ಅಭಿಮಾನಿಗಳನ್ನು ಭೇಟಿಯಾಗುತ್ತಾರೆ. ನಂತರ ಮೇಕಪ್ ಮಾಡಲು ವ್ಯಾನಿಟಿ ವ್ಯಾನ್‌ಗೆ ತೆರಳುತ್ತಾರೆ. ಇನ್ನು ವಿಡಿಯೋದಲ್ಲಿ ಮೇಕಪ್ ಆರ್ಟಿಸ್ಟ್ ಅಲ್ಲುಗೆ ಪುಷ್ಪಾ ಲುಕ್ ನೀಡುತ್ತಿರುವುದು ಕಂಡುಬಂದಿದೆ. ನಂತರ ಪುಷ್ಪ ಪಾತ್ರಧಾರಿಯಾಗಿ ಕೈಯ್ಯಲ್ಲಿ ಆಯುಧವನ್ನು ಹಿಡಿದು, ಮರವನ್ನು ಕತ್ತರಿಸುತ್ತಿರುವುದನ್ನು ನೋಡಬಹುದು.

ಆಕ್ಷನ್ ಮೋಡ್‌ನಲ್ಲಿ 'ಪುಷ್ಪ' ವಿಡಿಯೋದ ಕೊನೆಯಲ್ಲಿ ಅಲ್ಲು ಅರ್ಜುನ್ ಚಿತ್ರದ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಲುಕ್‌ನಲ್ಲಿ, ಕಾಡಿನಲ್ಲಿ ಶತ್ರುಗಳನ್ನು ಸಂಹರಿಸುವಾಗ ಫುಲ್ ಆಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಮೂಲಕ ಅಲ್ಲು ಪುಷ್ಪ 2 ಬಗ್ಗೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net