

Election Commission: ಪಶ್ಚಿಮ ಬಂಗಾಳ ಮುಖ್ಯ ಚುನಾವಣಾ ಆಯುಕ್ತರಿಗೆ ಸಿಎಂ ಮಮತಾ ಬ್ಯಾನರ್ಜಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಚುನಾವಣಾ ಆಯೋಗ, ಸಿಎಂ ಮಾತನಾಡಿರುವ ವಿಡಿಯೋವನ್ನು ಕೇಳಿದೆ ಎಂದು ಶನಿವಾರ(ಅ. 11) ವರದಿಯಾಗಿದೆ.
ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಅಗರ್ವಾಲ್ಗೆ ಮಿತಿ ಮೀರಿದರೆ, ನಿಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಬಹಿರಂಗಗೊಳ್ಳುತ್ತವೆ ಎಂದು ಸಭೆಯಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ಸಭೆಯಲ್ಲಿ ಸಿಎಸ್ ಮನೋಜ್ ಪಂತ್ ಮತ್ತು ಸಚಿವ ಅರೂಪ್ ಬಿಸ್ವಾಸ್ ಕೂಡ ಸಭೆಯಲ್ಲಿ ಹಾಜರಿದ್ದರು ಎಂದು ತಿಳಿದುಬಂದಿದೆ.
ಇನ್ನೂ ಸಿಎಂ ಹೇಳಿಕೆಗಳ ವಿಡಿಯೋವನ್ನು ಶನಿವಾರದ ರಾತ್ರಿಯೊಳಗೆ ಕಳುಹಿಸುವಂತೆ ಭಾರತೀಯ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎನ್ನಲಾಗಿದೆ. ರಾಜ್ಯ ಚುನಾವಣಾ ಅಧಿಕಾರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಸಿಎಂ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಬಿಜೆಪಿಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಚುನಾವಣಾ ಆಯೋಗಕ್ಕೆ ಪತ್ರ ಸಲ್ಲಿಸಿದ್ದಾರೆ.
2011ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ರಾಜ್ಯ ಚುನಾವಣಾ ಅಧಿಕಾರಿಯ ವಿರುದ್ಧ ಇಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)