

Dowry Harassment: ಪತಿ ಮತ್ತು ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ಡೆತ್ ನೋಟ್ ಬರೆದು ತನ್ನ ಮೂರು ವರ್ಷದ ಮಗಳೊಂದಿಗೆ ಮೈಮೈಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣವಾದ ಘಟನೆ ರಾಜಸ್ಥಾನದ ಜೋಧಪುರ್ದಲ್ಲಿ ಶುಕ್ರವಾರ(ಆಗಸ್ಟ್ 22) ನಡೆದಿದೆ.
ಜೋಧಪುರ್ದ ಓಸಿಯನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸರ್ಕಾರಿ ಶಾಲೆಯ ಉಪನ್ಯಾಸಕಿಯಾಗಿರುವ ಸಂಜು ಬಿಷ್ಣೋಯ್(33) ಮತ್ತು ತನ್ನ ಮೂರು ವರ್ಷದ ಮಗಳು ಯಶಸ್ವಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ. ಮಗಳು ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಶನಿವಾರ ಬೆಳಿಗ್ಗೆ ಎಂಜಿಎಚ್ ಆಸ್ಪತ್ರೆಯ ಬರ್ನ್ ಯೂನಿಟ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಸಂಜು ಆತ್ಮಹತ್ಯೆಗೂ ಮುನ್ನ ಬರೆದ ಡೆತ್ನೋಟ್ನಲ್ಲಿ ತನ್ನ ಪತಿ ಸುರೇಂದ್ರ ಬಿಷ್ಣೋಯ್ ಮತ್ತು ಅವರ ಮನೆಯವರಿಂದ ವರದಕ್ಷಿಣೆಗೆ ಕಿರುಕುಳವೇ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಆರೋಪಿಸಿದ್ದಾಳೆ ಎಂದು ತಿಳಿಸಿದ್ದಾರೆ.
ಈ ಕುರಿತು ಓಸಿಯನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್ ನೋಟ್ ಆಧಾರದ ಮೇಲೆ ಪತಿ ಸುರೇಂದ್ರ ಬಿಷ್ಣೋಯ್, ಮಾವ ಓಂಪ್ರಕಾಶ್, ಸಕ್ಕಮ್ಮ ಮತ್ತು ಆಕೆಯ ತಾಯಿ ಗೀತಾದೇವಿಯವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304-ಬಿ ಮತ್ತು 498-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂಜು ಮತ್ತು ಸುರೇಂದ್ರ 2020ರಲ್ಲಿ ವಿವಾಹವಾಗಿದ್ದರು. ಆಕೆಯ ಕುಟುಂಬವು 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ವರದಕ್ಷಿಣೆ ನೀಡಿತ್ತು ಎನ್ನಲಾಗಿದೆ. ಆದಾಗ್ಯೂ, ಗಂಡನ ಮನೆಯವರು ಹೆಚ್ಚಿನ ವರದಕ್ಷಿಣೆಗೆ ಕಿರುಕುಳ ನೀಡಿದ್ದಾರೆ. ಇದರಿಂದ ಮೃತ ಸಂಜು ಮಾನಸಿಕವಾಗಿ ಕುಗ್ಗಿದ್ದಳು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. (ಏಜೆನ್ಸೀಸ್)