ಸರ್ವಪಕ್ಷ ನಿಯೋಗ; ಕಾಂಗ್ರೆಸ್‌ ಕೊಟ್ಟ 4 ಹೆಸರು ಬಿಟ್ಟು ಶಶಿ ತರೂರ್‌ ಆಯ್ಕೆಮಾಡಿದ ಕೇಂದ್ರ; ಕಾಂಗ್ರೆಸ್ ಕೆಂಡ| All-party delegation

Untitled design
Published on

7 ಸಂಸದರ ನಿಯೋಗದ ಪಟ್ಟಿಗೆ ಕಾಂಗ್ರೆಸ್‌ ಸಂಸದ ಶಶಿ ತರೂ‌ರ್ ಅವರ ಹೆಸರನ್ನೂ ಕೇಂದ್ರ ಸರ್ಕಾರ ಸೇರಿಸಿದೆ. ವಿಶೇಷವೆಂದರೆ ಕಾಂಗ್ರೆಸ್‌ನಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾದ ಪಟ್ಟಿಯಲ್ಲಿ 4 ಹೆಸರುಗಳ ಪೈಕಿ ಶಶಿ ತರೂರ್‌ ಅವರ ಹೆಸರೇ ಇಲ್ಲದಿರುವುದು ಚರ್ಚೆಯನ್ನ ಹುಟ್ಟುಹಾಕಿದೆ.

All-party delegation | ಆಪರೇಷನ್ ಸಿಂಧೂರ್ ಮುಖಾಂತರ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ದ ಪ್ರತೀಕಾರ ತೀರಿಸಿಕೊಂಡ ಭಾರತ, ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದ ಉಗ್ರರ ಮುಖವಾಡವನ್ನು ಬಯಲು ಮಾಡಲು ಪಣ ತೊಟ್ಟಿದೆ. ಕೇಂದ್ರ ಸರ್ಕಾರವು ಮೇ ತಿಂಗಳ ಕೊನೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಏಳು ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲಿದೆ.

ನಿಯೋಗಕ್ಕೆ ತಾನು ನೀಡಿದ್ದ ನಾಲ್ಕು ಸಂಸದರ ಹೆಸರುಗಳನ್ನು ಬಿಟ್ಟು ಶಶಿ ತರೂರ್ ಹೆಸರನ್ನು ಅಂತಿಮಗೊಳಿಸಿರುವುದಕ್ಕೆ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮೇ 16ರಂದು ನಿಯೋಗಕ್ಕೆ 4 ಸಂಸದರ ಹೆಸರು ಶಿಫಾರಸು ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೋರಿದ್ದರು. ಅದರಂತೆಯೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸೂಚನೆಯಂತೆ ಆನಂದ ಶರ್ಮಾ, ಗೌರವ್ ಗೊಗೊಯಿ, ಡಾ. ಸಯದ್ ನಾಸೀರ್ ಹುಸೇನ್ ಮತ್ತು ರಾಜ್ ಬ್ರಾರ್ ಅವರ ಹೆಸರುಗಳನ್ನು ಶಿಫಾರಸು ಮಾಡಿ ಶುಕ್ರವಾರ ಸಂಜೆಯೇ ಪಟ್ಟಿ ಕಳುಹಿಸಲಾಗಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಆಪರೇಷನ್‌ ಸಿಂಧೂರದ ಬಳಿಕ ಶಶಿ ತರೂರ್‌ ಅವರು ಪ್ರಧಾನಿ ಮೋದಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದರು. ಇದರಿಂದ ʻಲಕ್ಷ್ಮಣ ರೇಖೆʼ ಮೀರಿದ್ದಾರೆ ಎಂದು ಕಾಂಗ್ರೆಸ್‌ನಿಂದಲೇ ಟೀಕೆಗೆ ಒಳಗಾಗಿದ್ದರು.

ಜೈರಾಮ್ ರಮೇಶ್ ಹೇಳಿದ್ದೇನು?

(ಏಜೆನ್ಸೀಸ್)

ನಮ್ಮ ಬಳಿ ಸಂಸದರ ಹೆಸರುಗಳನ್ನು ಕೇಳಿದ್ದರು. ನಾವು ನೀಡಿದ್ದ ಹೆಸರುಗಳನ್ನು ಸೇರಿಸಲಾಗುವುದು ಎಂದು ನಾವು ನಿರೀಕ್ಷಿಸಿದ್ದೆವು. ಪಕ್ಷವು ನೀಡಿದ ಹೆಸರುಗಳನ್ನು ಸೇರಿಸಲಾಗುವುದು ಎಂದು ನಾವು ಆಶಿಸಿದ್ದೆವು. ಆದರೆ ಪಿಐಬಿಯ ಪತ್ರಿಕಾ ಪ್ರಕಟಣೆಯನ್ನು ನೋಡಿದಾಗ, ನಮಗೆ ಆಶ್ಚರ್ಯವಾಯಿತು. ನಾಲ್ಕು ಹೆಸರುಗಳನ್ನು ಕೇಳುವುದು, ನಾಲ್ಕು ಹೆಸರುಗಳನ್ನು ನೀಡುವುದು ಮತ್ತು ಇನ್ನೊಂದು ಹೆಸರನ್ನು ಘೋಷಿಸುವುದು ಸರ್ಕಾರದ ಕಡೆಯಿಂದ ಅಪ್ರಾಮಾಣಿಕವಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ತೆಗೆದುಕೊಂಡ ನಂತರವೂ ರಾಹುಲ್ ಜಿ ಮತ್ತು ಖರ್ಗೆ ಅವರೊಂದಿಗೆ ಮಾತನಾಡಿರಬಹುದು. ಆದರೆ ಈಗ ನಡೆದದ್ದು ಅಪ್ರಾಮಾಣಿಕ. ನಾವು ಈ ನಾಲ್ಕು ಹೆಸರುಗಳನ್ನು ಬದಲಾಯಿಸುವುದಿಲ್ಲ ಎಂದು ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net