

ಸುಬ್ರಹ್ಮಣ್ಯ: ಜಾತ್ರೆ ಸಮಯದಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಭಕ್ತರಿಗೆ ಮೂಲಸೌಕರ್ಯಗಳನ್ನು ಒದಗಿಸಿ ಕುಂದು ಕೊರತೆಗಳು ಆಗದಂತೆ ಕ್ರಮ ವಹಿಸಬೇಕು. ರಕ್ಷಣೆಗಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅಧಿಕಾರಿಗಳ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು. ಸಾರಿಗೆ ವ್ಯವಸ್ಥೆ ಯಥೇಚ್ಚವಾಗಿರಬೇಕು. ಸಿಡಿಮದ್ದು ಪ್ರದರ್ಶನ ಹಾಗೂ ರಥೋತ್ಸವದ ಸಮಯ ಗರಿಷ್ಠ ಸುರಕ್ಷತೆಯನ್ನು ಅನುಸರಿಸಬೇಕು. ಜಾತ್ರಾ ಮಹೋತ್ಸವ ಸಂಪ್ರದಾಯದಂತೆ ವಿಜೃಂಭಣೆಯಿಂದ ನಡೆಯಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ಹಣಾಧಿಕಾರಿ ಯೇಸುರಾಜ್, ಲೋಕೋಪಯೋಗಿ ಅಭಿಯಂತರ ಪ್ರಮೋದ್ ಕುಮಾರ್, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕೆ ಸಭೆಯಲ್ಲಿ ಭಾಗವಹಿಸಿದ್ದರು. ದೇವಳದ ಅಭಿಯಂತ ಉದಯಕುಮಾರ್, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಸಿಬ್ಬಂದಿ ಮಹೇಶ್ ಕುಮಾರ್ ಎಸ್.ಉಪಸ್ಥಿತರಿದ್ದರು.
ಮಾರ್ಗದರ್ಶನ
ಚಂಪಾಷಷ್ಠಿ ಮಹೋತ್ಸವವನ್ನು ಸಂಪ್ರದಾಯದಂತೆ ವಿಜೃಂಭಣೆಯಿಂದ ನಡೆಸಲು ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಮಹೋತ್ಸವದ ಹಿನ್ನೆಲೆಯಲ್ಲಿ ಕೈಗೊಂಡ ಪೂರ್ವಭಾವಿ ಕೆಲಸ, ಸಿದ್ಧತೆಗಳ ಬಗ್ಗೆ ದೇವಳದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪಾರ್ಕಿಂಗ್, ಸಾರಿಗೆ ವ್ಯವಸ್ಥೆ, ವಸತಿ, ಭೋಜನ ಪ್ರಸಾದ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಎಲ್ಲ ರೀತಿಯ ಮೂಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ನಿರ್ದೇಶನ ನೀಡಿದರು. ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಆಚರಣೆ ಹಾಗೂ ಲಕ್ಷದೀಪೋತ್ಸವದಂದು ಕುಣಿತ ಭಜನೆ ಆಯೋಜನೆಯ ಸಿದ್ಧತೆ ಬಗ್ಗೆ ಮಾಹಿತಿ ಪಡೆದು ಮಾರ್ಗದರ್ಶನಗಳನ್ನು ನೀಡಿದರು.