ತಿರುಪತಿ ಲೋಕಸಭೆ ಉಪಚುನಾವಣೆ: ಪ್ರಮುಖ ಅಭ್ಯರ್ಥಿಗಳಿಗೆ ಸವಾಲಾಗಿರುವ ಕನ್ನಡತಿ, ಬಿಜೆಪಿ ಅಭ್ಯರ್ಥಿ ಕೆ ರತ್ನ ಪ್ರಭಾ!

k ratna prabha
k ratna prabha
Published on

ಬೆಂಗಳೂರು: ಆಂಧ್ರ ಪ್ರದೇಶದ ತಿರುಪತಿ ಲೋಕಸಭೆ ಉಪಚುನಾವಣೆಗೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ ರತ್ನ ಪ್ರಭಾ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದಾರೆ. ವೈಎಸ್​ಆರ್ ಕಾಂಗ್ರೆಸ್​ ಹಿಡಿತದಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿ ರತ್ನ ಪ್ರಭಾ ಅವರನ್ನು ಕಣಕ್ಕಿಳಿಸುವ ಮೂಲಕ ಆಂಧ್ರದಲ್ಲಿ ಮುಖ್ಯಮಂತ್ರಿ ಜಗನ್ಮೋಹನ್ ರಡ್ಡಿ ಅವರಿಗೆ ಠಕ್ಕರ್ ಕೊಟ್ಟಿದೆ.

ಕನ್ನಡತಿಯೊಬ್ಬರು ನೆರೆಯ ರಾಜ್ಯದ ಪ್ರಮುಖ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಕರ್ನಾಟಕದಲ್ಲಿ ಕುತೂಹಲ ಮೂಡಿಸಿದೆ. ಕರ್ನಾಟಕದ ಕಲಬುರಗಿ ಮೂಲದ ಕೆ ರತ್ನಾ ಪ್ರಭಾ ಅವರು ಈ ಚುನಾವಣೆಯಲ್ಲಿ ವೈಎಸ್​ಆರ್​ ಕಾಂಗ್ರೆಸ್​ನ ಡಾ ಎಂ ಗುರುಮೂರ್ತಿ ಹಾಗೂ ತೆಲಗು ದೇಶಂ ಪಾರ್ಟಿಯ (ಟಿಡಿಪಿ) ಪಣಬಾಕಾ ಲಕ್ಷ್ಮಿ ಮತ್ತು ಎರಡು ಬಾರಿ ಸಂಸದರಾಗಿದ್ದ ಕಾಂಗ್ರೆಸ್​​ನ ಚಿಂತಾ ಮೋಹನ್​ರಂತಹ ಘಟನಾನುಘಟಿಗಳನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ 17 ರಂದು ಮತದಾನ ನಡೆಯಲಿದೆ. ಹೀಗಾಗಿ ಮೂವರು ಪ್ರಮುಖ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ತಿರುಪತಿ ಎಸ್​ಸಿ ಮೀಸಲು ಕ್ಷೇತ್ರವಾಗಿದ್ದು ಸಂಸದರಾಗಿದ್ದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರ ನಿಧನದಿಂದ ತೆರವಾಗಿತ್ತು. ರಾವ್ ಅವರು ಕರೊನಾ ವೈರಸ್ ಸೋಂಕಿನಿಂದ ಕಳೆದ ವರ್ಷ ಮೃತಪಟ್ಟಿದ್ದರು. ಅವರು ವೈಎಸ್​ಆರ್​ ಕಾಂಗ್ರೆಸ್​​ ಪ್ರತಿನಿಧಿಸಿದ್ದರು.

ತಿರುಪತಿ ಲೋಕಸಭೆ ಉಪ ಚುನಾವಣೆಗೆ ದಿವಂಗತ ದುರ್ಗಾ ಪ್ರಸಾದ್ ರಾವ್ ಅವರ ಮಗ ಬಲ್ಲಿ ಕಲ್ಯಾಣ ಚಕ್ರವರ್ತಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ಇತ್ತು. ಆದರೆ, ಕಲ್ಯಾಣ ಚಕ್ರವರ್ತಿಯನ್ನು ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ನೀಡಿದ್ದರಿಂದ ವೈದ್ಯರಾಗಿರುವ ಗುರುಮೂರ್ತಿ ಅವರಿಗೆ ಅವಕಾಶ ಲಭಿಸಿದೆ.

ಗುರುಮೂರ್ತಿ ಅವರು ಖ್ಯಾತ ಪಿಜಿಯೋಥೆರಪಿಸ್ಟ್​ ಆಗಿದ್ದು, ಜಗನ್ಮೋಹನ್ ರೆಡ್ಡಿ ಅವರ ವೈದ್ಯಕೀಯ ಸಲಹೆಗಾರರೂ ಆಗಿದ್ದಾರೆ. ಆಂಧ್ರ, ಕರ್ನಾಟಕದಲ್ಲಿ ಅವರು ಅನೇಕ ಪಿಜಿಯೋಥೆರಪಿ ಆಸ್ಪತ್ರೆಗಳನ್ನು ನಡೆಸುತ್ತಾರೆ. ಈ ಹಿಂದೆ ರಾಜ್ಯಾದ್ಯಂತ ಪಾದಯಾತ್ರೆ ನಡೆಸಿದ್ದ ಜಗನ್ಮೋಹನ್ ರೆಡ್ಡಿ ಅವರಿಗೆ ಎಡೆಬಿಡದೆ ವೈದ್ಯಕೀಯ ನೆರವು ನೀಡಿದ್ದವರು ಗುರುಮೂರ್ತಿ. ಹೀಗಾಗಿ ಅವರ ಸಹಾಯಕ್ಕೆ ಕಟ್ಟುಬಿದ್ದು ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕ್ಷೇತ್ರದಲ್ಲಿ ವೈಎಸ್​ಆರ್​ನಿಂದ ಯಾವುದೇ ಬಂಡಾಯ ಕಂಡು ಬಂದಿಲ್ಲ ಎನ್ನುವುದು ವಿಶೇಷವಾಗಿದೆ.

ಇನ್ನು ಕ್ಷೇತ್ರದ ಗಣಿತಕ್ಕೆ ಬರುವುದಾದರೇ, ತಿರುಪತಿ ಲೋಕಸಭೆ ಕ್ಷೇತ್ರ ಏಳು ವಿಧಾನಸಭೆ ಕ್ಷೇತ್ರಗಳನ್ನು ತನ್ನಲ್ಲಿ ಒಳಗೊಂಡಿದೆ. ವಿಶೇಷವೆಂದರೆ ಇದರಲ್ಲಿ ಮೂರು ಕ್ಷೇತ್ರಗಳು ಎಸ್​ಸಿ ಮೀಸಲು ಕ್ಷೇತ್ರಗಳಾಗಿವೆ. ಸರ್ವೆಪಲ್ಲಿ, ಗುಡೂರು (ಎಸ್​ಸಿ) ಸುಳ್ಳೂರುಪೇಟ್ (ಎಸ್​​ಸಿ), ವೆಂಕಟಗಿರಿ, ತಿರುಪತಿ, ಶ್ರೀಕಾಳಹಸ್ತಿ ಹಾಗೂ ಸತ್ಯವೇದು (ಎಸ್​​ಸಿ) ಅಂಸೆಂಬ್ಲಿ ಕ್ಷೇತ್ರಗಳು ಇದರ ವ್ಯಾಪ್ತಿಗೆ ಬರುತ್ತವೆ. ವಿಶೇಷವೆಂದರೆ ಈ ಎಳೂ ವಿಧಾನಸಭೆ ಕ್ಷೇತ್ರಗಳು ವೈಎಸ್​ಆರ್​ ಕಾಂಗ್ರೆಸ್​ ತೆಕ್ಕೆಯಲ್ಲಿವೆ. ತಿರುಪತಿ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 15,75,161 ಮತದಾರರಿದ್ದಾರೆ. 2014 ಹಾಗೂ 1019ರ ಲೋಕಸಭೆ ಚುನಾವಣೆಯಲ್ಲಿ ವೈಎಸ್​ಆರ್​ ಕಾಂಗ್ರೆಸ್ ಪಕ್ಷವೇ ಇಲ್ಲಿ ಗೆದ್ದಿದೆ. 1999 ರ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಇಲ್ಲಿ ಬಿಜೆಪಿ ಗೆದ್ದಿತ್ತು.

ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿತ್ತು. ಶೇ 1.22 ಮತಗಳ ಹಂಚಿಕೆಯೊಂದಿಗೆ ಆರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬೊಮ್ಮಿ ಶ್ರೀಹರಿ ರಾವ್ ಅವರು ಕೇವಲ 16,125 ಮತಗಳನ್ನು ಮಾತ್ರ ಪಡೆಯುವಲ್ಲಿ ಸಫಲರಾಗಿದ್ದರು. ವೈಎಸ್​ಆರ್​ ಕಾಂಗ್ರೆಸ್​ನಿಂದ ಸ್ಪರ್ಧಿಸಿ 7,22,877 ಮತಗಳನ್ನು ಪಡೆಯುವ ಮೂಲಕ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ವಿಜಯಶಾಲಿಯಾಗಿದ್ದರು. ಒಟ್ಟು 13,16,473 ಮತಗಳು ಚಲಾವಣೆಗೊಂಡಿದ್ದವು. ಕ್ಷೇತ್ರದಲ್ಲಿ ಎಸ್​ಸಿ ಎಸ್​ಟಿ ಮತದಾರರೇ ನಿರ್ಣಾಯಕರಾಗಿದ್ದಾರೆ. ಅದರಲ್ಲೂ ಬಲಿಜ ಸಮುದಾಯದ ಮತಗಳ ಸಂಖ್ಯೆ ಹೆಚ್ಚಿದೆ.

ತಿರುಪತಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲವಾದರೂ ಬಿಜೆಪಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ರತ್ನ ಪ್ರಭಾ ಅವರು ಮನೆ ಮನೆಗೆ ತೆರಳಿ ಮತ ಕೇಳುತ್ತಿದ್ದಾರೆ. ಅವರಿಗೆ ನರೇಂದ್ರ ಮೋದಿ ಅವರ ಕೆಲಸಗಳು ಬೆನ್ನಿಗಿವೆ. ಹೀಗಾಗಿ ಉತ್ಸಾಹದಿಂದಲೇ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಕೇಂದ್ರದಿಂದ ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ಬಿಜೆಪಿ ರತ್ನಪ್ರಭಾ ಅವರ ಸಹಾಯಕ್ಕೆ ಕಳಿಸಿದೆ. ಉನ್ನತ ನಾಯಕರು ಬಿಜೆಪಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ತೆಲಗು ಜನಪ್ರಿಯ ನಟ ಹಾಗೂ ಬಿಜೆಪಿ ಮುಖಂಡ ಪವನ್ ಕಲ್ಯಾಣ್ ಅವರೇ ಸ್ವತಃ ರತ್ನ ಪ್ರಭಾ ಅವರ ಬೆನ್ನಿಗೆ ನಿಂತಿದ್ದಾರೆ.

pavan kalyan and ratna prabha
pavan kalyan and ratna prabha

ದಕ್ಷ ಐಎಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿ ರತ್ನ ಪ್ರಭಾ ಅವರು ಆಡಳಿತದಲ್ಲಿ ಬದಲಾವಣೆ ತಂದಿದ್ದರು. ಈಗ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅವರು ಬಹುದೊಡ್ಡ ವೇದಿಕೆಯಿಂದಲೇ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಗಮನ ಸೆಳೆದಿದ್ದಾರೆ. ತಿರುಪತಿ ಮತದಾರರು ರತ್ನ ಪ್ರಭಾ ಅವರಿಗೆ ಆಶಿರ್ವಾದ ಮಾಡುತ್ತಾರಾ ಎನ್ನುವುದನ್ನು ಕಾಯ್ದು ನೋಡಬೇಕಿದೆ.

-ಮಂಜುನಾಥ್ ಭದ್ರಶೆಟ್ಟಿ (ವೆಬ್ ಡೆಸ್ಕ್​, ವಿಜಯವಾಣಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net