

ಅಳವಂಡಿ: ಜಗತ್ತು ನೂತನ ತಾಂತ್ರಿಕತೆ ಕಡೆಗೆ ವೇಗವಾಗಿ ಓಡುತ್ತಿದ್ದು, ಉದ್ಯಮದ ಬೆಳೆವಣಿಗೆಗೆ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಎಸ್‌ಬಿಐನ ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆಯ ತರಬೇತುದಾರ ಲಕ್ಷ್ಮೀಕಾಂತ ಎಚ್. ತಿಳಿಸಿದರು.
ಸಮೀಪದ ಹಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆ, ಜಲಾನಯನ ಇಲಾಖೆ, ಸ್ವರ್ಡ ಕೆ. ಸಂಸ್ಥೆ, ಎಸ್‌ಬಿಐ ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಸಹಾಯ ಗುಂಪಿನ ಸದಸ್ಯರಿಗೆ ಎರಡು ದಿನಗಳ ಉದ್ಯಮಶೀಲತಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ: ಮಕ್ಕಳು ವೃತ್ತಿ ಕೌಶಲ ಬೆಳೆಸಿಕೊಳ್ಳಲಿ
ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಕೌಶಲ ತರಬೇತಿ ಅವಶ್ಯ. ಅಲಂಕಾರಿಕ ವಸ್ತು ತಯಾರಿಕೆ, ಹೊಲಿಗೆ ತರಬೇತಿ, ಹೈನುಗಾರಿಕೆ, ಜೇನು, ಕುರಿ ಮತ್ತು ಮೇಕೆ ಸಾಕಣೆ, ಜೂಟ್‌ಬ್ಯಾಗ ಇತರ ವಸ್ತುಗಳ ತಯಾರಿಗೆ ತರಬೇತಿ ನೀಡಿ ಉದ್ಯಮಶೀಲರನ್ನಾಗಿ ಮಾಡುವ ಉದ್ದೇಶವಿದೆ ಎಂದರು.
ಮಹಿಳಾಧ್ವನಿ ಸಂಸ್ಥೆಯ ಮುಖ್ಯಸ್ಥೆ ಪ್ರಿಯದರ್ಶಿನಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸಬಲತೆ ಹೊಂದುತ್ತಿದ್ದಾರೆ. ಆರ್ಥಿಕ ಸಹಾಯ, ಕೌಶಲ ತರಬೇತಿ, ಕ್ಷೇತ್ರ ಭೇಟಿ ಮುಂತಾದವುಗಳ ಮೂಲಕ ಮಹಿಳೆಯರಿಗೆ ಮಾಹಿತಿ ನೀಡಲಾಗುತ್ತಿದೆ. ಕಾರಣ ಇವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ರಿವಾರ್ಡ್ ಟೀಮ್ ಲೀಡರ್ ಗವಿಸಿದ್ದಪ್ಪ, ಸಿಬ್ಬಂದಿ ಬಸನಗೌಡ, ಲಕ್ಷ್ಮಣ, ಸಂಜೀವಿನಿ ಸಂಘದ ಎಂಬಿಕೆ ಭಾರತಿ ನಾಗಣ್ಣವರ, ರೇಖಾ ತಳವಾರ ಹಾಗೂ ಮಹಿಳಾ ಸಂಘದ ಸದಸ್ಯೆಯರು ಇದ್ದರು.