

ಅಥಣಿ: ವಿದ್ಯಾರ್ಥಿಗಳು ವೃತ್ತಿ ಕೌಶಲ ಬೆಳೆಸಿಕೊಳ್ಳಬೇಕು. ಇದರಿಂದ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸ್ಥಳೀಯ ಜೆಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ಹೇಳಿದರು.
ಪಟ್ಟಣದ ಜೆ.ಇ ಸಂಸ್ಥೆಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವಕರ್ಮ ದಿನ ಘಟಿಕೋತ್ಸವ ಪ್ರಶಸ್ತಿ ಪತ್ರ ವಿತರಣೆ, ಇಂಜಿನಿಯರ್ಸ್ ಡೇ ಮತ್ತು ಮೊದಲ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು.
ನಿವೃತ್ತ ಅಭಿಯಂತ ಅರುಣ ಯಲಗುದ್ರಿ ಮಾತನಾಡಿ, ಎಂ.ವಿಶ್ವೇಶ್ವರಯ್ಯನವರು ಕಟ್ಟಿದ ಕಟ್ಟಡಗಳು, ಡ್ಯಾಂಗಳನ್ನು ವಿದ್ಯಾರ್ಥಿಗಳು ವೀಕ್ಷಿಸಬೇಕು. ಅಂದಾಗ ಅಂದಿನ ಇಂಜಿನಿಯರ್ಸ್ ಹೇಗೆ ಇದ್ದರು ನಾವು ಯಾವ ರೀತಿ ಅಧ್ಯಯನ ಮಾಡಬೇಕು ಎಂಬುದು ಅರಿವಾಗುತ್ತದೆ. ದೇಶ ಕಟ್ಟುವಲ್ಲಿ ಇಂಜಿನಿಯರ್ಸ್ ಕೊಡುಗೆ ಅಪಾರ ಎಂದರು.
ಸಂಚಾಲಕ ಮಂಡಳಿ ಸದಸ್ಯ ಸಂದೀಪ ಸಂಗೊರಾಮ, ಪ್ರಾಚಾರ್ಯ ದೀಪಕ ಗಸ್ತಿ ಮಾತನಾಡಿದರು. ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಅನೀಲ ದೇಶಪಾಂಡೆ, ಸದಸ್ಯರಾದ ವಿ.ಬಿ.ಮಿರಜಕರ, ಅಜೇಯ ದೇಶಪಾಂಡೆ, ಹೃಷಿಕೇಶ ದೇಶಪಾಂಡೆ ಇತರರಿದ್ದರು.