ಅಕ್ಷಯ್ ಕುಮಾರ್ ಚಿತ್ರಕ್ಕೆ ಕರ್ಣಿ ಸೇನೆಯಿಂದ ಎಚ್ಚರಿಕೆ!; ಶೀರ್ಷಿಕೆ ಬದಲಿಸುವಂತೆ ತಾಕೀತು

Akshay
Published on

ಮುಂಬೈ: ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಒಂದಿಲ್ಲೊಂದು ವಿವಾದಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಅದರ ಬಿಸಿ ಮತ್ತೊಮ್ಮೆ ಅಕ್ಷಯ್ ಕುಮಾರ್​ಗೆ ತಟ್ಟಿದೆ. ಈ ಹಿಂದೆ ಲಕ್ಷ್ಮೀ ಬಾಂಬ್​ ಚಿತ್ರದ ಶೀರ್ಷಿಕೆ ಬದಲಿಸುವಂತೆ ಕೆಲ ಸಂಘಟನೆಗಳು ಪಟ್ಟು ಹಿಡಿದಿದ್ದವು. ಅದರಂತೆ ಅದನ್ನು ಲಕ್ಷ್ಮೀ ಎಂದು ಬದಲಿಸಲಾಗಿತ್ತು. ಇದೀಗ ಪೃಥ್ವಿರಾಜ್ ಚಿತ್ರಕ್ಕೂ ಆ ಕಂಟಕ ಎದುರಾಗಿದೆ.

ಪೃಥ್ವಿರಾಜ್ ಚೌಹಾಣ್ ಕುರಿತು ಅಕ್ಷಯ್ ಸಿನಿಮಾ ಮಾಡುತ್ತಿದ್ದು, ಈಗಾಗಲೇ ಅದೆ ಮುಹೂರ್ತ ಮುಗಿಸಿ, ಒಂದಷ್ಟು ಭಾಗದ ಚಿತ್ರೀಕರಣವೂ ಆಗಿದೆ. ಇದೀಗ ಇದೇ ಚಿತ್ರದ ಪೃಥ್ವಿರಾಜ್ ಶೀರ್ಷಿಕೆಯನ್ನು ಬದಲಿಸುವಂತೆ ಕರ್ಣಿ ಸೇನೆ ಒತ್ತಾಯಿಸಿದ್ದು, ಪೂರ್ತಿ ಹೆಸರಾದ ಪೃಥ್ವಿರಾಜ್ ಚೌಹಾಣ್​ ಎಂದು ಮರುನಾಮಕರಣ ಮಾಡುವಂತೆ ಆಗ್ರಹಿಸಿದೆ.

2016ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತ್ ಚಿತ್ರದ ಸಂದರ್ಭದಲ್ಲಿಯೂ ಶೀರ್ಷಿಕೆ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ರಜಪೂತ್ ಸಮುದಾಯ ಮತ್ತು ಕರ್ಣಿ ಸೇನೆಯ ಒತ್ತಾಯಕ್ಕೆ ಮಣಿದು ಶೀರ್ಷಿಕೆ ಪದ್ಮಾವತಿ ಎಂಬುದನ್ನು ಪದ್ಮಾವತ್ ಆಗಿ ಬದಲಿಸಲಾಗಿತ್ತು. ಇದೀಗ ಮತ್ತದೇ ಪ್ರಸಂಗ ಪೃಥ್ವಿರಾಜ್ ಚಿತ್ರಕ್ಕೂ ಬಂದೊದಗಿದ್ದು, ಶೀರ್ಷಿಕೆ ವಿಚಾರ ಮುನ್ನೆಲೆಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net