3 ನಿಮಿಷದಲ್ಲಿ 184 ಸೆಲ್ಫೀ; ಗಿನ್ನೆಸ್​​ ದಾಖಲೆ ಬರೆದ ಅಕ್ಷಯ್​ ಕುಮಾರ್​

Selfie (2) - New
Published on

ಮುಂಬೈ: ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಹೊಸ ದಾಖಲೆಯನ್ನೇ ಮಾಡಿದ್ದಾರೆ. ತಮ್ಮ ಹೊಸ ಚಿತ್ರ 'ಸೆಲ್ಫೀ' ಪ್ರಮೋಷನ್​ನ ಸಂದರ್ಭದಲ್ಲಿ ಅತೀ ಹೆಚ್ಚು ಸೆಲ್ಫೀಗಳನ್ನು ತೆಗೆಸಿಕೊಳ್ಳುವ ಮೂಲಕ ಗಿನ್ನೆಸ್​ ದಾಖಲೆ ಪುಸ್ತಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಈ ಹಿಂದೆ, 2015ರಲ್ಲಿ ಹಾಲಿವುಡ್​ ಸ್ಟಾರ್​ ಡ್ವೇನ್​ ಜಾನ್ಸನ್​, 'ಸ್ಯಾನ್​ ಏಂಡ್ರಿಯಾಸ್​' ಎಂಬ ಚಿತ್ರದ ಲಂಡನ್​ ಪ್ರೀಮಿಯರ್​ ವೇಳೆ 105 ಸೆಲ್ಫೀ ಕ್ಲಿಕ್ಕಿಸಿದ್ದು ದಾಖಲೆಯಾಗಿತ್ತು. ಆ ನಂತರ 2018ರಲ್ಲಿ ಅಮೆರಿಕದ ಜೇಮ್ಸ್​ ಸ್ಮಿತ್​ ಮೂರು ನಿಮಿಷಗಳಲ್ಲಿ 168 ಸೆಲ್ಫೀಗಳನ್ನು ಕ್ಲಿಕ್ಕಿಸಿದ್ದರು. ಈಗ ಅಕ್ಷಯ್​ ಕುಮಾರ್​, ಆ ದಾಖಲೆಯನ್ನು ಮುರಿದಿದ್ದಾರೆ. 'ಸೆಲ್ಫೀ' ಚಿತ್ರದ ಪ್ರಚಾರದ ವೇಳೆ ಕೇವಲ ಮೂರು ನಿಮಿಷಗಳಲ್ಲಿ 184 ಸೆಲ್ಫೀಗಳನ್ನು ಕ್ಲಿಕ್ಕಿಸುವ ಮೂಲಕ ಹಳೆಯ ದಾಖಲೆಗಳನ್ನೆಲ್ಲಾ ಮುರಿದಿದ್ದಾರೆ.

ವಿಶೇಷವೆಂದರೆ, ಗಿನ್ನೆಸ್​ ವಿಶ್ವದಾಖಲೆ ತಂಡದ ಸದಸ್ಯರು ಸಹ ಈ ದಾಖಲೆಗೆ ಮಾನ್ಯತೆ ನೀಡಿದ್ದಾರೆ. ಸ್ಥಳದಲ್ಲೇ ಹಾಜರಿದ್ದು, ಎಲ್ಲ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಗಿನ್ನೆಸ್​ ತಂಡದವರು, ಸ್ಥಳದಲ್ಲೇ ಅಕ್ಷಯ್​ ಕುಮಾರ್​ಗೆ ವಿಶ್ವದಾಖಲೆಯ ಸರ್ಟಿಫಿಕೇಟ್​ ಕೊಟ್ಟಿದ್ದಾರೆ.

ಅಂದಹಾಗೆ, 'ಸೆಲ್ಫೀ' ಚಿತ್ರವು ಮೂರು ವರ್ಷಗಳ ಹಿಂದೆ ಮಲಯಾಳಂನಲ್ಲಿ ಬಿಡುಗಡೆಯಾಗಿದ್ದ 'ಡ್ರೈವಿಂಗ್ ಲೈಸೆನ್ಸ್​' ಚಿತ್ರದ ರೀಮೇಕ್​. ಮೂಲ ಚಿತ್ರದಲ್ಲಿ ಪೃಥ್ವಿರಾಜ್​ ಮತ್ತು ಸೂರಜ್​ ನಟಿಸಿದ್ದರು. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಜತೆಗೆ ಎಮ್ರಾನ್​ ಹಶ್ಮಿ ಸಹ ನಟಿಸಿದ್ದು, ಚಿತ್ರವನ್ನು ರಾಜ್​ ಮೆಹ್ತಾ ನಿರ್ದೇಶನ ಮಾಡಿದ್ದಾರೆ. 'ಸೆಲ್ಫೀ' ಚಿತ್ರವು ನಾಳೆ (ಫೆಬ್ರವರಿ 24) ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net