

ಆದರೆ, ಅಲ್ಲಮನದು ನೈಷ್ಠುರ್ಯ ಸ್ವಭಾವ. ಅವನು ಎಲ್ಲವನ್ನು ಅರೆದು-ಒರೆದು ನೋಡುವುದರತ್ತ ಗಮನ. ಬಸವಣ್ಣನು ಅಲ್ಲಮನನ್ನು ಕುರಿತು ಅಕ್ಕನ ಬಗೆಗೆ ಹೇಳುವ ಈ ವಚನವನ್ನು ನಾವೊಮ್ಮೆ ಪರಾಂಬರಿಸಬೇಕು.
ಕಾಯದ ಲಜ್ಜೆಯ ಕಲ್ಪಿತವ ಕಳೆದು/ಜೀವದ ಲಜ್ಜೆಯ ಮೋಹವನಳಿದು/ ಮನದ ಲಜ್ಜೆಯ ನೆನಹ ಸುಟ್ಟು/ಭಾವದ ಕೂಟ ಬತ್ತಲೆಯಂದಳೆದು /ತವಕದ ಸ್ನೇಹ ವ್ಯವಹಾರಕ್ಕೆ ಹುಗದು/ ಕೂಡಲ ಸಂಗಮದೇವಯ್ಯ ಎನ್ನ ಹೆತ್ತ ತಾಯಿ/ಮಹಾದೇವಿ ಯಕ್ಕನ ನಿಲುವ ನೋಡಾ ಪ್ರಭುವೆ (ಶಿವ.ಪ್ರಸಾದಿ.ಶೂನ್ಯ..ಪುಟ 166)
ಬಸವಣ್ಣ ಆಕೆಯ ಕಾಯ, ಜೀವ, ಮನ, ಭಾವಗಳನ್ನು ಒಳಗಣ್ಣಿನಿಂದಲೇ ಅರಿತಿದ್ದಾನೆ. ಆಕೆಯನ್ನು ಮಾತೃಸ್ವರೂಪಿಯಾಗಿ ಭಾವಿಸಿದ್ದಾನೆ. ಕಾಳಿದಾಸನು ‘ಪ್ರಮಾಣಂ ಅಂತಕರಣ ಪ್ರವೃತ್ತಯಃ’ ಎಂದಲ್ಲವೇ ಹೇಳಿದ್ದು. ಮಾತು ಹೇಳಲಾರದ್ದನ್ನು ‘ಭಾವ’ ಹೇಳುತ್ತದೆ. ಭಾವವು ಗಮ್ಯವೂ ಹೌದು, ಅಗಮ್ಯವೂ ಹೌದು! ಬಸವಣ್ಣ ಭಾವವ್ಯಾಪಾರಿಯೇ ಹೊರತು ಭವವ್ಯಾಪಾರಿಯಲ್ಲ!
ಅಲ್ಲಮನು ಬಸವಣ್ಣನ ಮಾತನ್ನು ತೆಗೆದುಹಾಕಲಿಲ್ಲ. ಒಮ್ಮೊಮ್ಮೆ ಶಬ್ದವು ಬೆಂಕಿಯ ಕೆಂಡವೂ ಆಗಬಹುದು. ಶಬ್ದಕ್ಕೆ ತೆರೆದುಕೊಳ್ಳುವ ಗುಣ ಇರುವಂತೆ; ಮುಚ್ಚಿಕೊಳ್ಳುವ ಗುಣವೂ ಉಂಟು. ಅವನು ಅಕ್ಕನನ್ನು ಅನುಭವ ಮಂಟಪದಲ್ಲಿ ಕಂಡ. ಆಕೆಯು ಯೌವನದ ಪರಾಕಾಷ್ಠೆಯಲ್ಲಿದ್ದಾಳೆ. ಇಂಥವಳು ಶರಣರ ಕಣ್ಣಿಗೆ ಬಿದ್ದಿದ್ದಾಳೆ. ಅವರು ‘ಶರಣಸತಿ-ಲಿಂಗಪತಿ’ ಎಂಬ ಭಾವವನ್ನು ಮಾತ್ರ ತಿಳಿದಿದ್ದಾರೆ. ಅಲ್ಲಮನು ‘ನಿನ್ನ ಪತಿ ಯಾರೆಂದು ಹೇಳಾ ಎಲೆಯವ್ವಾ’ ಎಂದು ಮಾತೃಸಂಹಿತೆಯ ಭಾವದಲ್ಲಿ ಕೇಳುತ್ತಿದ್ದಾನೆ. ಈ ಮಾತಿಗೆ ಆಕೆಯು ಕೊಟ್ಟ ಉತ್ತರ ಸಾಂಕೇತಿಕವೂ ಹೌದು; ಶಿವಾದ್ವೈತ ದೃಷ್ಟಿಯಿಂದ ಆಲೋಚನೀಯವೂ ಹೌದು. ಅಕ್ಕನು ಹೇಳುವುದಿಷ್ಟು:
ಗುರುವೆ ತೆತ್ತಿಗನಾದ, ಲಿಂಗವೆ ಮದವಣಿಗನಾದ/ನಾನೆ ಮದವಳಿಗೆಯಾದೆನು/ಈ ಭುವನವೆಲ್ಲಾ ಅರಿಯಲು/ ಅಸಂಖ್ಯಾತರೆನಗೆ ತಾಯಿತಂದೆಗಳು/ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನ ನೋಡಿ/ ಇದು ಕಾರಣ: ಚೆನ್ನಮಲ್ಲಿಕಾರ್ಜುನ/ ಗಂಡನೆನಗೆ ಮಿಕ್ಕಿನ ಲೋಕದವರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೆ (ಶಿವಶರಣೆಯರ ವಚನಗಳು ಸಂ. 3, ಪುಟ-203)
ಅಕ್ಕನ ಮಾತು ಲೋಕದ ಅರಿವಿಗೆ ವಿಲಕ್ಷಣವಾದುದು. ಮದುವೆಯೆಂಬುದು ಲೋಕದ ವ್ಯಾಪಾರ. ಅಕ್ಕನು ಮದವಳಿಗಳಾದಾಗ ಮದವಣಿಗನಾಗು ವವನು ಸಾಮಾನ್ಯನಾಗಲು ಸಾಧ್ಯವೇ? ಅಕ್ಕ ಮಹಾದೇವಿಗೆ ತಕ್ಕ, ಸಾದೃಶ್ಯವಾಗಬಲ್ಲ ವರಬೇಕಷ್ಟೆ. ಅಕೆಗೆ ಅಸಂಖ್ಯಾತರಾದ ತಾಯಿ-ತಂದೆಯರು ಇದ್ದಾರೆ. ಅವರೆಲ್ಲಾ ಆಕೆಯೊಡನೆ ಸೇರಿಕೊಂಡಿದ್ದಾರೆ. ಇದು ಅಕ್ಕನ ಪುಣ್ಯ. ‘ಚೆನ್ನ ಮಲ್ಲಿಕಾರ್ಜುನ ಗಂಡನು ಎನಗೆ; ಮಿಕ್ಕಿನ ಲೋಕದವರು ಎನಗೆ ಸಂಬಂಧವಿಲ್ಲವಯ್ಯಾ’ ಎಂದು ದೃಢನಿರ್ಧಾರವನ್ನು ತಾಳಿದ್ದಾಳೆ. ಇದು ಅಕ್ಕ ಮಾಡಿಕೊಂಡಿರುವ ಆತ್ಯಂತಿಕ ನಿರ್ಣಯ.
ಅಲ್ಲಮನು ಅಕ್ಕಮಹಾದೇವಿಯ ಮಾತನ್ನು ಕೇಳಿದ; ಒಮ್ಮೆಲೆ ಅವನು ಮೂಕವಿಸ್ಮಿತನಾದ. ಇಂಥವಳು ಲೋಕದಲ್ಲಿ ಇರಬಲ್ಲಳೆ? ಎಂಬ ಪ್ರಶ್ನೆ ಅವನಲ್ಲಿ ಮೂಡಿತು. ಆದರೂ ಅಕ್ಕನನ್ನು ಝುಂಕಿಸಿ ಇನ್ನಷ್ಟು ಪ್ರಶ್ನೆಗಳ ಮಳೆಯನ್ನು ಆಕೆಯ ಮೇಲೆ ಸುರಿಸಿದ. ಅವನ ಪ್ರಶ್ನೆಗಳು ತನು- ಮನ- ಇಂದ್ರಿಯಗಳಿಗೆ ಸಂಬಂಧಿಸಿದಾಗಿದ್ದವು. ತನು ಸದಾ ವಿಕಾರದಲ್ಲಿಯೇ ಇರುತ್ತದೆ. ಆ ವಿಚಾರವನ್ನು ಗೆಲ್ಲಬೇಕಾದರೆ ‘ಮನಸ್ಸು’ ದೃಢವಾಗಬೇಕು. ಮನಸ್ಸಿನ ಮೂಲಕ ಕಮೇಂದ್ರಿಯಗಳು ಅಧೀನಕ್ಕೆ ಬರಬೇಕು.
ಇಷ್ಟಾದರೆ ಸಾಕಾಗದು. ಕರ್ಮೆಂದ್ರಿಯಗಳು ಜ್ಞಾನೇಂದ್ರಿಯಗಳ ಮೂಲಕ ಹದಗೊಳ್ಳಬೇಕು. ಆಗ ಲಿಂಗಮುಖಕ್ಕ ವೇದ್ಯವಾಗಲು ಸಾಧ್ಯವಾಗುತ್ತದೆ. ತನು- ಮನ- ಇಂದ್ರಿಯಗಳು ಲೋಕವ್ಯಾಪಾರದ ಸ್ಥಿತಿಗಳು. ಇವೆಲ್ಲವೂ ಬಹಿರ್ವ್ಯಾಪಾರಕ್ಕೆ ಲಗತ್ತಾಗಿ ಇರುತ್ತವೆ. ಈ ಲೋಕದ ಸಂತೆಯಿಂದ ಮುಕ್ತವಾಗಬೇಕಾದರೆ, ಲಿಂಗಮುಖದಲ್ಲಿ ಸಮಸ್ತವನ್ನು ಒಪ್ಪಿಸಬೇಕು. ಇದು ಅಲ್ಲಮನ ಪ್ರಶ್ನೆ. ಈ ಪ್ರಶ್ನೆಗಳಿಗೆ ಅಕ್ಕಮಹಾದೇವಿಯು ಪ್ರತ್ಯುತ್ತರವನ್ನೇ ನೀಡುತ್ತಾಳೆ.
ಆ ಉತ್ತರ ಅಕ್ಕನಂತಹ ಶರಣೆ ಮಾತ್ರ ನೀಡಬಲ್ಲಳು. ‘ಅಂಗಸಂಗದಲ್ಲಿ ಲಿಂಗಸಂಗಿಯಾದೆ; ಲಿಂಗಸಂಗದಲ್ಲಿ ಅಂಗಸಂಗಿಯಾದೆ! ಅಂಗ ಮತ್ತು ಲಿಂಗಗಳ ಸಂಗವನ್ನು ತಿಳಿಯದೆ ಪರಿಣಾಮಿಯಾದೆ, ಬರಿ ಮಾತಿನ ಆಡಂಬರ ನನಗೆ ಗೊತ್ತಿಲ್ಲ. ಆದರೆ, ಚೆನ್ನಮಲ್ಲಿಕಾರ್ಜುನನ ಬೆರೆಸಿದ ಬಳಿಕ ನಾನು ಏನೆಂದೂ ಅರಿಯೆನಯ್ಯಾ’ ಎಂದು ಬಿಡುತ್ತಾಳೆ. ಇದು ಶಬ್ದಮುಗ್ಧದ ಸ್ಥಿತಿ! ಅಕ್ಕಮಹಾದೇವಿಯು ಮಾತಿನ ಸಂತೆಯನ್ನು ಮೀರಿದ್ದಾಳೆ. ವಾದ-ಪ್ರತಿವಾದಗಳು ಅನುಭವದ ನಿಜಸ್ಥಿತಿಯನ್ನು ತಂದುಕೊಡುವುದಿಲ್ಲವೆಂಬುದು ಆಕೆಗೆ ಮನವರಿಕೆ ಆಗಿದೆ. ಇದು ಅಕ್ಕಮಹಾದೇವಿಯು ನಿಂತ ನಿಲುವು!
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು) (ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)