ಜಗದ ಬೆಳಕು ಅಕ್ಕಮಹಾದೇವಿ

6-67f95affaabbc
Published on
| ಎಸ್. ಪಿನಾಕಪಾಣಿ

‘ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು ಶಿವನೊಡನೆ...’ ಎನ್ನುವುದು ಮಹಾದೇವಿಯಕ್ಕನ ಒಂದು ಮಾತು. ಇಂತಹ ನೂರಾರು ಮಾತುಗಳನ್ನು ನೀಡಿ ತನ್ಮೂಲಕ ಶಿವಾನುಭಾವ, ಅದಕ್ಕೆ ಪೂರ್ವಭಾವಿಯಾಗಿ ಮಧುರಭಾವ, ಅದಕ್ಕೆ ಜೊತೆಯಾಗಿ ಆತ್ಮಾನುಸಂಧಾನ, ದಿವ್ಯೋನ್ಮಾದ, ಚಿತ್ತಾಹ್ಮಾದಗಳಿಂದ ಕನ್ನಡವಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿಯೂ ಅಕ್ಕ ಎಂದು ಬಣ್ಣಿತಳಾಗಿರುವ ಅಕ್ಕಮಹಾದೇವಿ ಕನ್ನಡದ ಅಮೂಲ್ಯ ರತ್ನ. ಅವಳ ಕುರಿತಾದ ರಗಳೆ-ಕಾವ್ಯಗಳು ಒಂದು ಬಗೆಯಾದರೆ, ಸಮಕಾಲೀನರು ಬಣ್ಣಿಸಿರುವುದು ಅದಕ್ಕೂ ಮಿಗಿಲಾದದ್ದು.

ಉಡುತಡಿಯಲ್ಲಿ ಹುಟ್ಟಿ (ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು), ಬೆಳೆದು ಸ್ಥಳೀಯ ರಾಜ ಕೌಶಿಕನ ಮೋಹಪಾಶಕ್ಕೆ ಒಳಗಾಗದೆ, ಬುದ್ಧಿವಂತಿಕೆಯಿಂದ ಹೆತ್ತವರನ್ನು ಪಾರು ಮಾಡಿದ್ದಲ್ಲದೆ, ನಡೆಸಲು ಸಾಧ್ಯವಾಗದ ಷರತ್ತುಗಳನ್ನು ಹಾಕಿ ವಚನಭಂಗವನ್ನು ಮಾಡಿದ ಕೌಶಿಕ ರಾಜನನ್ನು, ‘ಏ ಕೌಶಿಕ ನೀನು ಸೋತಿದ್ದೀಯಾ. ಕೊಟ್ಟ ಮಾತುಗಳನ್ನು ಪಾಲಿಸಿಲ್ಲ. ನಾನು ಹೋಗುತ್ತೇನೆ’ ಎಂದು ಹೊರಟಳು. ಕಾಡುಮೇಡುಗಳಲ್ಲಿ ಸಂಚರಿಸಿ, ‘ಅಳಿ ಸಂಕುಲವೇ, ಮಾಮರವೇ, ಕೋಗಿಲೆಯೇ ನೀವು ಕಾಣಿರೇ’ ಎಂದು ಚನ್ನಮಲ್ಲಿಕಾರ್ಜುನನ ಹುಡುಕಾಡಿದಳು. ಅನುಭವ ಮಂಟಪದಲ್ಲಿ ಎಲ್ಲರಿಂದಲೂ ಸೈ ಎನಿಸಿಕೊಂಡು ಮಹಾದೇವಿಯಕ್ಕಳಾದಳು. ಕೊನೆಗೂ ಕದಳಿಯಲ್ಲಿ ತನ್ನ ಅರಿವಿನ ಸಾಕ್ಷಾತ್ಕಾರ ಮಾಡಿಕೊಂಡು ಪರಿಪೂರ್ಣಳಾದಳು.

ಅಕ್ಕಮಹಾದೇವಿ ಒಂದು ಜೀವ, ಒಂದು ದೇಹ ಎಂದು ಭಾವಿಸಿದರೆ ಅದು ನಮ್ಮ ಸಣ್ಣ ಭಾವನೆಯಾಗುತ್ತದೆ. ಅನುಭವಿಗಳ ದೊಡ್ಡ ಭಾವನೆಯಲ್ಲಿ ಹೇಳುವುದಾದರೆ, ‘ಆ ಜೀವ ಕೇವಲ ಜೀವವಲ್ಲ, ಅದು ಜ್ಯೋತಿ ಎನ್ನಬೇಕು. ಆ ದೇಹ ಕೇವಲ ದೇಹವಲ್ಲ, ಹಣತೆ ಎನ್ನಬೇಕು’. ದೇಹದ ಹಣತೆಯಲ್ಲಿ ಜೀವನದ ಜ್ಯೋತಿ ಬೆಳಗಿ ಅಧ್ಯಾತ್ಮದ ಬೆಳಕಿನಿಂದ ತಾನೂ ಬೆಳಗಿ ಇತರರಿಗೂ ಬೆಳಕಾಗಿ ಕೊನೆಗೆ ಜಗಜ್ಯೋತಿಯಲ್ಲಿ ಐಕ್ಯವಾದ ಜೀವಪ್ರಭೆ ಅಕ್ಕನದು. ಅದು ಸ್ವಯಂಪ್ರಭೆ.

ಕರ್ನಾಟಕ ಸರ್ಕಾರ ಪ್ರಕಟಿಸಿರುವ ವಚನ ಸಂಪುಟದಲ್ಲಿ ಅಕ್ಕನ 434 ವಚನಗಳು ಪ್ರಕಟವಾಗಿವೆ. ಅಕ್ಕನ 31 ಸ್ವರ ವಚನಗಳು ಲಭ್ಯವಿವೆ. ಅಲ್ಲದೆ ಮಹಾದೇವಿಯಕ್ಕ ರಚಿಸಿರುವ ‘ಯೋಗಾಂಗ ತ್ರಿವಿಧಿ’ ಕುರಿತೂ ಚರ್ಚೆ ನಡೆಯುತ್ತಿರುತ್ತದೆ. ಅಕ್ಕನ ಕಾಲದವರೆಗೂ ಕವಯಿತ್ರಿಗಳು ಇರಲಿಲ್ಲವೇ? ಹೆಣ್ಣುಮಕ್ಕಳು ಕಾವ್ಯವನ್ನು-ಅನುಭಾವವನ್ನು ಹಂಚಿಕೊಂಡಿರಲಿಲ್ಲವೇ? ಎಂಬ ಪ್ರಶ್ನೆ ಎದುರಾಗುತ್ತದೆ.

ಸಾಮಾನ್ಯವಾದ ಉತ್ತರ ‘ಇಲ್ಲ’ ಎಂದೇ ಹೇಳಬೇಕು. ಏಕೆಂದರೆ ಅಲ್ಲಿಯವರೆಗೂ ಹೆಣ್ಣನ್ನು ಭೋಗದ ಸರಕಾಗಿ ಮೀಸಲಿಟ್ಟ ಜಗತ್ತು ಇದು, ಬಸವಣ್ಣನೆಂಬ ಮಹಾತ್ಮ ಈ ನಾಡಿನಲ್ಲಿ, ಅಲ್ಲ, ಈ ಜಗತ್ತಿನಲ್ಲಿ ಉದಯಿಸಿ ಹೆಣ್ಣಿಗೆ ಎಲ್ಲ ರಂಗಗಳಲ್ಲಿಯೂ ಸರ್ವಸಮಾನತೆಯನ್ನು ನೀಡಿದರು. ಹಾಗಾಗಿ ಅಕ್ಕನೇ ಈ ಜಗತ್ತಿನ ಮೊದಲ ಕವಯಿತ್ರಿ ಎಂದು ದಿಟ್ಟವಾಗಿ ಹೇಳಬಹುದಾಗಿದೆ.

ಅಕ್ಕಮಹಾದೇವಿಯ ವಚನಗಳಲ್ಲಿ ಕಾವ್ಯದ ಸೊಗಸು ಹೆಚ್ಚು. ಅವಳ ಕಾವ್ಯದ ಗುಣ ಎರಡು; ಒಂದು ವೇದನೆ, ಇನ್ನೊಂದು ನಿವೇದನೆ. ಹಾಗಾಗಿ ಅವಳ ಸಾಹಿತ್ಯ ಉತ್ಕೃಷ್ಟ ಮಾತ್ರವಲ್ಲ, ಉಜ್ಜೀವಕ ದಿವ್ಯ ಸಾಹಿತ್ಯ. ಅಕ್ಕನ ವಚನಗಳಲ್ಲಿ ಉದ್ದೇಶಪೂರ್ವಕವಾದ ಅಲಂಕಾರಗಳ ಬಳಕೆ ಇಲ್ಲ. ಒಳಗಿನ ಒತ್ತಡಗಳು ಭಾಷೆಯಲ್ಲಿ ಹೊರ ಹೊಮ್ಮುವಾಗ ಸಹಜವಾಗಿ ನುಸುಳಿಕೊಂಡು ಬಂದ ಉಪಮೆ, ದೃಷ್ಟಾಂತಗಳು ಅವು. ಈ ಉಪಮೆಗಳು ವಚನದ ಸೌಂದರ್ಯ ಹೆಚ್ಚಿಸುತ್ತವೆ.

ಅಕ್ಕ ಇಂದಿಗೂ ನಮ್ಮ ನಡುವೆ ಇರುವುದು ಅವಳ ಅನುಭಾವಗಳಿಂದ. ಅವಳ ಜೀವನ ಸಾಧನೆಯ ಎಲ್ಲ ಹಂತದ ಭಾವಲಹರಿಗಳು ಅಕ್ಕನ ವಚನಗಳಲ್ಲಿ ಜೀವಂತ ಅಭಿವ್ಯಕ್ತಿಯನ್ನು ಪಡೆದಿವೆ. ಭಾವಗೀತಾತ್ಮಕವಾದ ಅವುಗಳು ಒಂದೆಡೆ ಆಧ್ಯಾತ್ಮಿಕ ನಿಲುವನ್ನು ಅಭಿವ್ಯಕ್ತಗೊಳಿಸಿದರೆ, ಮತ್ತೊಂದೆಡೆ ಜೀವನದ ನೋವು-ನಲಿವುಗಳನ್ನು ಪ್ರತಿಬಿಂಬಿಸುತ್ತವೆ. ಲಭ್ಯವಿರುವ 434 ವಚನಗಳಲ್ಲಿ ಪ್ರತಿಯೊಂದು ಓದುಗರನ್ನು ಆಕರ್ಷಿಸುತ್ತವೆ. ಅಕ್ಕನ ನಿಸರ್ಗಪ್ರೇಮ, ಪಶು, ಪಕ್ಷಿಗಳೊಡನೆ ಅವಳ ಸಂವಾದ, ಚೆನ್ನಮಲ್ಲಿಕಾರ್ಜುನನ ಮೋಹ, ಸಜೀವ ದೃಷ್ಟಾಂತಗಳು, ಮಾನವೀಯ ಜೀವಂತಿಕೆಯ ಅಂಶಗಳು ಉಸಿರಿನಷ್ಟು ಸಹಜವಾಗಿ ವ್ಯಕ್ತವಾಗಿದ್ದು ತಾನೂ ಬದುಕಿ, ಇತರರನ್ನೂ ನೈತಿಕತೆಯ ಭಕ್ತಿಮಾರ್ಗದೆಡೆಗೆ ಕರೆದೊಯ್ಯಬಲ್ಲ ವ್ಯಕ್ತಿತ್ವವನ್ನು ಅಕ್ಕನ ವಚನಗಳಲ್ಲಿ ಕಾಣುತ್ತೇವೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ, ಮೊಬೈಲ್ ಪ್ರಪಂಚದಲ್ಲಿ ಮುಳುಗಿಹೋಗಿರುವ ಬದುಕಿನ ಬವಣೆಯಲ್ಲಿ ಅಕ್ಕನ ವಚನಗಳು ನಿಜಕ್ಕೂ ಸಂಜೀವಿನಿಯಾಗಿವೆ. ಅಕ್ಕನ ಜನಪ್ರಿಯ ವಚನ ‘ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಯಂತಯ್ಯಾ...’ದಲ್ಲಿ ಅವಳು ಹೇಳುವ ‘ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂಬುದು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅಂತೆಯೇ ಕಲ್ಯಾಣದ ಅನುಭವ ಮಂಟಪದಿಂದ ಹೊರಡುವ ಮುನ್ನ ಎಲ್ಲ ಶರಣರಲ್ಲಿ ಅವಳು ವಿಜ್ಞಾಪಿಸಿ ಕೊಡುವ ಭಾಷೆ ‘ನಿಮ್ಮ ಮಂಡೆಗೆ ಹೂವ ತರುವೆನಲ್ಲದೆ ಹುಲ್ಲ ತಾರೆನು’ ಎಂಬುದು ಪ್ರತಿಯೊಬ್ಬರು ತಮ್ಮ ಕುಟುಂಬ ಮತ್ತು ಸಮಾಜಕ್ಕೆ ಕೊಡುವ ಭಾಷೆಯಾಗಬೇಕಾಗಿದೆ.

ನಾರಿಲೋಕಕ್ಕೆ ಮಾತ್ರ ಮಹಾದೇವಿಯಕ್ಕ ಸೀಮಿತವಲ್ಲ, ಅಥವಾ ಒಂದು ಭಾಷೆ, ಧರ್ಮಕ್ಕೆ ಅಲ್ಲ. ಅಕ್ಕ ಸಮಸ್ತ ಜಗತ್ತಿಗೆ ಸೇರಿದವಳು. ಅಕ್ಕನಂತಹ ವ್ಯಕ್ತಿತ್ವ ಮತ್ತೊಂದಿಲ್ಲ. ಅಕ್ಕನಿಗೆ ಅಕ್ಕನೇ ಸಾಟಿ. (ಲೇಖಕರು ವಚನಜ್ಯೋತಿ ಬಳಗದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net