

ಕಾಲಿವುಡ್ ನಟರಾದ ವಿಜಯ್ ಮತ್ತು ಅಜಿತ್ ಹೆಚ್ಚೂ ಕಡಿಮೆ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು ಮತ್ತು ತಮಿಳು ಚಿತ್ರರಂಗದಲ್ಲಿ ಸ್ನೇಹಿತರೆಂದು ಗುರುತಿಸಿಕೊಂಡವರು. ಆದರೆ, ಅವರ ಅಭಿಮಾನಿಗಳು ಮಾತ್ರ ಸದಾ ಕಿತ್ತಾಡುತ್ತಲೇ ಇರುತ್ತಾರೆ.
ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಯಾವಾಗಲೂ, ಅವರಿಬ್ಬರಲ್ಲಿ ಯಾರು ಮೇಲು, ಯಾರು ಕೀಳು ಎಂಬ ವಿಷಯದಲ್ಲಿ ಕಿತ್ತಾಡುತ್ತಲೇ ಬಂದಿದ್ದು, ಇದರಿಂದ ಇಬ್ಬರೂ ನಟರಿಗೆ ಇದುವರೆಗೂ ಸಾಕಷ್ಟು ಇರಿಸುಮುರುಸಾಗಿದೆ. ಆದರೆ, ಇದೇ ಮೊದಲ ಬಾರಿಗೆ ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಒಂದೊಳ್ಳೆಯ ಕಾರಣಕ್ಕೆ ಜತೆಯಾಗಿದ್ದಾರೆ.
ಇಷ್ಟಕ್ಕೂ ಏನದು ಕಾರಣ ಎಂಬ ಪ್ರಶ್ನೆ ಬರಬಹುದು. ವಿಷಯ ಏನೆಂದರೆ, ವಿಜಯ್ ಅವರ ಅಭಿಮಾನಿಯೊಬ್ಬನ ಮಾವ ಅನಾರೋಗ್ಯಕ್ಕೀಡಾದರು. ಕಷ್ಟದಲ್ಲಿದ್ದ ಆತ, ಸೋಷಿಯಲ್ ಮೀಡಿಯಾ ಮೂಲಕ ಧನಸಹಾಯ ಸಾಧ್ಯವಾ ಎಂದು ವಿಜಯ್ ಅಭಿಮಾನಿಗಳಲ್ಲಿ ಕೇಳಿದ. ಇದಕ್ಕೆ ವಿಜಯ್ ಅಭಿಮಾನಿಗಳು ಧನಸಹಾಯ ಮಾಡಿರುವುದಷ್ಟೇ ಅಲ್ಲ, ಅಜಿತ್ ಅವರ ಹಲವು ಅಭಿಮಾನಿಗಳು ಸಹ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಎನ್ನುವುದು ವಿಶೇಷ.
ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಹೀಗೆ ಜತೆಗೆ ಸೇರಿ ಸಹಾಯ ಮಾಡುತ್ತಿರುವುದು, ಇದೀಗ ಸಾಕಷ್ಟು ಚರ್ಚೆಯಾಗುತ್ತಿದ್ದು, ಅಜಿತ್ವಿಜಯ್ಪ್ರೈಡ್ಆಫ್ಇಂಡಿಯಾ ಎಂಬ ಹ್ಯಾಶ್ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಇಬ್ಬರೂ ಜನಪ್ರಿಯ ನಟರ ಅಭಿಮಾನಿಗಳು ಫಾರ್ ಎ ಚೇಂಜ್ ಹೀಗೆ ಜರೆಯಾಗುತ್ತಿರುವುದು ಬೇರೆಯವರಿಗೂ ಖುಷಿ ನೀಡುತ್ತಿದೆ. ಈ ಕುರಿತು ಬೇರೆಯವರು ಸಹ ಪ್ರತಿಕ್ರಿಯಿಸುತ್ತಿದ್ದು, ಇಬ್ಬರ ಅಭಿಮಾನಿಗಳು ಹೀಗೆ ಜತೆಯಾದರೆ ನೋಡುವುದಕ್ಕೆ ಎಷ್ಟು ಚೆಂದ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.