ಕರೊನಾ ಲಸಿಕೆ ವಿತರಣೆಗೂ ಮುನ್ನ ಅನುಸರಿಸಬೇಕಾದ ನಿಯಮಗಳೇನು? ಕೇಂದ್ರದ ಮಾರ್ಗಸೂಚಿಯಲ್ಲೇನಿದೆ?

Vaccination
Published on

ನವದೆಹಲಿ: ದೇಶದಲ್ಲಿ ಕರೊನಾ ಲಸಿಕೆ ಅಭಿಯಾನಕ್ಕೆ ಶನಿವಾರ ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಆನ್​ಲೈನ್ ಮೂಲಕ ಚಾಲನೆ ನೀಡಲಿದ್ದು, ಮೊದಲ ದಿನ 3 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ನಾಳೆ ಆರಂಭವಾಗುವ ಲಸಿಕೆ ಅಭಿಯಾನದಲ್ಲಿ ದೇಶಾದ್ಯಂತ 3,006 ಕೇಂದ್ರಗಳಲ್ಲಿ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡುವ ಮುನ್ನ ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ.

ಮಾರ್ಗಸೂಚಿಯಲ್ಲಿರುವಂತೆ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು ಮತ್ತು ಗರ್ಭಿಣಿಯರು ಮತ್ತು ಬಾಣಂತಿಯರು ಲಸಿಕೆಯನ್ನು ಸ್ವೀಕರಿಸುವಂತಿಲ್ಲ ಹಾಗೂ ನೀಡುವಂತಿಲ್ಲ.

ಬಹುಮುಖ್ಯವಾಗಿ ಪರಸ್ಪರ ಲಸಿಕೆ ಬದಲಾಯಿಸುವಂತಿಲ್ಲ. ಅಂದರೆ, ಕೋವಾಕ್ಸಿನ್​ ನೀಡಿದರೆ ಎರಡನೇ ಡೋಸ್​ ನೀಡುವಾಗಲೂ ಅದನ್ನೇ ನೀಡಬೇಕು. ಕೋವಿಶೀಲ್ಡ್​ ನೀಡುವಾಗ ಎರಡನೇ ಬಾರಿಯು ಅದನ್ನೇ ಕೊಡಬೇಕು. ಅಲ್ಲದೆ, ಮೊದಲನೇ ಡೋಸ್​ ಮತ್ತು ಎರಡನೇ ಡೋಸ್​ ನಡುವೆ 28 ದಿನಗಳ ಅಂತರವಿರಬೇಕು.

ಲಸಿಕೆ ಹಾಕಿದ ಪ್ರತಿ ವ್ಯಕ್ತಿಯ ಮೇಲೆ 30 ನಿಮಿಷ ನಿಗಾ ಇಡಬೇಕು. ಲಸಿಕೆ ನೀಡುವ ಸ್ಥಳ ವಿಶಾಲವಾಗಿರಬೇಕು ಮತ್ತು ವೇಟಿಂಗ್​ ರೂಮ್​ ಸಹ ಹೊಂದಿರಬೇಕು. ಲಸಿಕೆ ವಿತರಣೆ ತಂಡದಲ್ಲಿ ಕನಿಷ್ಠ 5 ಮಂದಿಯಾದರೂ ಇರಬೇಕು. ಹೈಬಿಪಿ, ಉಸಿರಾಟ ಸಮಸ್ಯೆ ಇರುವವರ ಮೇಲೆ ತೀವ್ರ ನಿಗಾ ಇರಿಸಬೇಕು. ಒಂದು ದಿನಕ್ಕೆ 100 ರಿಂದ 200 ಮಂದಿಗೆ ಮಾತ್ರ ಲಸಿಕೆ ನೀಡಬೇಕು.

ಲಸಿಕೆ ವಿತರಣೆ ವೇಳೆ ಆಧಾರ್​ ಕಾರ್ಡ್​, ವೋಟರ್​ ಐಡಿ, ಡ್ರೈವಿಂಗ್​ ಲೈಸೆನ್ಸ್​ ಹಾಗೂ ಪಾಸ್​ಪೋರ್ಟ್​ ಸೇರಿದಂತೆ ಮುಂತಾದ ಗುರುತಿನ ಚೀಟಿಗಳು ಕಡ್ಡಯಾವಾಗಿರಬೇಕು.

ವೈರಸ್ ಸೋಂಕಿಗೆ ಒಳಗಾದ ಜನರಿಗೆ ಕಟ್ಟುನಿಟ್ಟಾದ ಶಿಷ್ಟಾಚಾರ ಸಹ ಇದೆ. ಕರೊನಾ ಸಕ್ರಿಯ ರೋಗ ಲಕ್ಷಣಗಳಿಂದ ಗುಣವಾದ ರೋಗಿಗಳು, ಪ್ಲಾಸ್ಮಾ ಥೆರಪಿ ಪಡೆದುಕೊಂಡವರು ಮತ್ತು ಇತರೆ ಕಾರಣಗಳಿಂದ ಆಸ್ಪತ್ರೆಗೆ ದಾಖಲಾದವರಿಗೆ ಲಸಿಕೆ ನೀಡುವುದನ್ನು 4 ರಿಂದ 8 ವಾರಗಳವರೆಗೆ ಮುಂದೂಡಬೇಕು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net