'ಯಾರ ಮರ್ಜಿಯಲ್ಲಿ ಆ ಸ್ಥಾನದಲ್ಲಿ ಕುಳಿತಿದ್ದಾರೆ ಎಂಬುದನ್ನ ಮರೆತಿದ್ದಾರೆ' ಸಿಎಂ ವಿರುದ್ಧ ವಿಶ್ವನಾಥ್​ ಅಸಮಾಧಾನ

bsy
Published on

ಬೆಂಗಳೂರು: ಎ.ಎಚ್​.ವಿಶ್ವನಾಥ ಅವರು ಸಚಿವ ಸ್ಥಾನಕ್ಕೆ ಅನರ್ಹ ಎಂದು ರಾಜ್ಯ ಹೈ ಕೋರ್ಟ್​ ಮಧ್ಯಂತರ ತೀರ್ಪು ನೀಡಿದ ಬೆನ್ನಲ್ಲೇ ವಿಶ್ವನಾಥ ಅವರು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಯಾರ ಮರ್ಜಿಯಲ್ಲಿ ಆ ಸ್ಥಾನದಲ್ಲಿ ಕುಳಿತಿದ್ದಾರೆ ಎನ್ನುವುದನ್ನು ಮರೆತಿದ್ದಾರೆ ಎಂದು ಅವರು ಹೇಳಿದ್ದಾರೆ.

'ನಾವು ಕೆಲವರ ಕಣ್ಣಲ್ಲಿ ಕೆಲವು ರೀತಿ ಕಾಣುತ್ತೇವೆ. ಯಾರ‌ ಮರ್ಜಿಯಲ್ಲಿ ಯಾರು ಖುರ್ಚಿ ಮೇಲೆ ಕುಳಿತಿದ್ದಾರೆ? ಕೆಲವರು ಇದನ್ನೆಲ್ಲಾ ಮರೆತಿದ್ದಾರೆ. ಸಿಎಂ ಸೇರಿದಂತೆ ಇಂದು ಇವರೆಲ್ಲಾ ಯಾರ ಸಹಕಾರದಿಂದ ಕುಳಿತಿದ್ದಾರೆ? ಯಾರ ಮರ್ಜಿಯಲ್ಲಿ ಕುಳಿತಿದ್ದಾರೆ ಎಂಬುದನ್ನ ಮರೆತಿದ್ದಾರೆ. ಹೊಳೆ ದಾಟುವ ತನಕ ಅಂಬಿಗ ಗಂಡ, ಹೊಳೆ ದಾಟಿದ ಮೇಲೆ ಅಂಬಿಗ... ಎನ್ನುವ ಸ್ಥಿತಿ ಇಂದು ಬಂದಿದೆ' ಎಂದು ವಿಶ್ವನಾಥ ಅವರು ಹೇಳಿದ್ದಾರೆ.

ಸಿ.ಪಿ ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಮಾತನಾಡಿರುವ ಅವರು, 'ಸಿ.ಪಿ ಯೋಗೇಶ್ವರ್ ಹುಣಸೂರು ಅಭ್ಯರ್ಥಿ ವಿರುದ್ಧ ಹೇಗೆ ನಡೆದುಕೊಂಡರು ಎಂಬುದನ್ನ ನೋಡಬೇಕಲ್ಲವೇ? ಅವರು ನನಗೆ ಟಿಕೆಟ್ ಕೊಡುವ ಮೊದಲೇ ಅಲ್ಲಿಗೆ ಬಂದು ತಾನೇ ಅಭ್ಯರ್ಥಿ ಅಂತಾ ಹೇಳಿ ಗೊಂದಲ ಮಾಡಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಸೋಲಿಸಲು ಹೊರಟಿದ್ದವರು ಅವರು. ಯಾವ ನಂಬಿಕೆ ಮೇಲೆ ಇಂತವರಿಗೆ ಸಚಿವ ಸ್ಥಾನ ಕೊಡುತ್ತಾರೆ? ವಿಮರ್ಶೆ ಮಾಡಿ ಸಚಿವ ಸ್ಥಾನ ನೀಡಬೇಕು' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net