ಕೃಷಿ ವಿವಿ ಅಲುಮ್ನಿ ಅಸೋಸಿಯೇಷನ್ ಪ್ರಶಸ್ತಿ ಪ್ರದಾನ; 7 ಸಾಧಕರಿ ಗೌರವ

krishi
Published on

ಬೆಂಗಳೂರು: ಅಲುಮ್ನಿ ಅಸೋಸಿಯೇಷನ್, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ವತಿಯಿಂದ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿ ಶನಿವಾರ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತಿ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ, ಕೃಷಿ ನಮ್ಮ ದೇಶದ ಬೆನ್ನೆಲುಬು, ಇತ್ತೀಚಿನ ದಿನಗಳಲ್ಲಿ ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಯುವಕರನ್ನು ಮತ್ತೆ ಕೃಷಿಯತ್ತ ಆಕರ್ಷಿಸಲು ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಇಲಾಖೆಯ ಪ್ರದಾನ ಕಾರ್ಯದರ್ಶಿ ಎನ್.ಸಿ. ಮುನಿಯಪ್ಪ ಮಾತನಾಡಿ, ಸುಮಾರು 20 ಸಾವಿರ ಸದಸ್ಯರನ್ನು ಹೊಂದಿರುವ ಸಂಸ್ಥೆಯು ಸರ್ಕಾರದ ಕೃಷಿ ಕುರಿತ ರೂಪುರೇಷೆಗಳನ್ನು ತಯಾರಿಸುವಾಗ ಸಕ್ರಿಯವಾಗಿ ಭಾಗವಹಿಸುವಂತೆ ಸಲಹೆ ನೀಡಿದರು. ಕೃಷಿ ಕುರಿತಾದ ವಿವಿಧ ಸಮಿತಿಯ ಶಿಫಾರಸ್ಸುಗಳನ್ನು ಸಕಾಲದಲ್ಲಿ ಅನುಷ್ಠಾನ ಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಮತ್ತು ಮನ ಒಲಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ 7 ವಿವಿಧ ಪ್ರಶಸ್ತಿಗಳನ್ನು ಆಯ್ಕೆಯಾದ ಸಾಧಕರಿಗೆ ನಿಡಿ ಗೌರವಿಸಲಾಯಿತು. ಈ ವೇಳೆ ಅಲುಮ್ನಿ ಅಧ್ಯಕ್ಷ ಡಾ. ಹೆಚ್. ಎಲ್. ಹರೀಶ್, ಉಪಾಧ್ಯಕ್ಷ ಡಾ.ಬಿ.ವಿ. ವೆಂಕಟೇಶಯ್ಯ, ಕಾರ್ಯದರ್ಶಿ ಡಾ.ಕೆ.ಎಂ. ಹರಿಣಿಕುಮಾರ್, ಡಾ. ನಿರಂಜನ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಪ್ರಶಸ್ತಿ ಪುರಸ್ಕೃತರ ವಿವರ

ಹೊಂಬಾಳೆ ಸಂಹಿತ ಹರಿಣಿಕುಮಾರ್ ಕೃಷಿ ಮಾಧ್ಯಮ ಮಿತ್ರ ಪ್ರಶಸ್ತಿಗೆ ಪತ್ರಕರ್ತ ಅಂಶೀ ಪ್ರಸನ್ನಕುಮಾರ್, ಡಾ. ಆರ್. ದ್ವಾರಕಿನಾಥ್ ಕೃಷಿ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ಹಿರಿಯ ವಿಜ್ಞಾನಿ ಡಾ. ಸುಧಾ ವಿ. ಮಂಕಣಿ, ಎಸ್.ಎಂ. ನಾರಾಯಣರೆಡ್ಡಿ ಕೃಷಿ ಪದವೀಧರ ರೈತ ಪ್ರಶಸ್ತಿಗೆ ಎಂ.ಟಿ.ರಮೇಶ, ಡಾ. ಬಿ.ಕೆ. ಕುಮಾರಸ್ವಾಮಿ ಪ್ರಸಿದ್ಧಿ ಕೃಷಿ ಪದವೀಧರ ಉದ್ಯಮಿ ಪ್ರಶಸ್ತಿಗೆ ಎನ್. ಮಹದೇವ ಪ್ರಸಾದ್, ಸಕಲವಾರ ರಾಮಯ್ಯರೆಡ್ಡಿ ಅತ್ಯುತ್ತಮ ರೈತ ಪ್ರಶಸ್ತಿಗೆ ಬಿ.ಶ್ರೀಕಾಂತ್, ಗಿರಿಯಪ್ಪ ಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಬಿ. ರಾಮಲಿಂಗಯ್ಯ, ಕರ್ನಾಟಕ ಬ್ಯಾಂಕ್ ಅತ್ಯುತ್ತಮ ಬ್ಯಾಂಕಿಂಗ್ ಕೃಷಿಕ ಪ್ರಶಸ್ತಿಗೆ ಮಲ್ಲಿನಾಥ ಕೊಳ್ಳೂರ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net