ಸಿನಿಮಾ

ಚುರುಕಾಯ್ತು ಕೃಷಿ ಚಟುವಟಿಕೆ: ಮುಂಗಾರು ಹಂಗಾಮಿಗೆ ಸಿದ್ಧತೆ

ರಮೇಶ ಜಹಗೀರದಾರ್ ದಾವಣಗೆರೆ
ಜಿಲ್ಲೆಯಲ್ಲಿ ಅಲ್ಲಲ್ಲಿ ಮುಂಗಾರು ಪೂರ್ವ ಮಳೆಯ ಸಿಂಚನವಾಗಿದ್ದು, ಕೃಷಿ ಚಟುವಟಿಕೆ ಜೋರಾಗಿವೆ. ರೈತರು ಮಾಗಿ ಉಳುಮೆ, ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಉಳಿದ ಕಡೆಗಳಲ್ಲಿ ಅಷ್ಟೊಂದು ಹಸಿ ಮಳೆಯಾಗಿಲ್ಲ. ಈ ನಡುವೆ ಕೃಷಿ ಇಲಾಖೆಯ ಅಧಿಕಾರಿಗಳು ಯೋಜನೆ ಸಿದ್ಧಪಡಿಸಿಕೊಂಡಿದ್ದು ಅದಕ್ಕೆ ಬೇಕಾದ ತಯಾರಿ ನಡೆಸಿದ್ದಾರೆ.

ವಾಡಿಕೆಗೆ ಹೋಲಿಸಿದರೆ ಇದುವರೆಗೆ ಸಾಧಾರಣ ಮಳೆಯಾಗಿದೆ. ಏಪ್ರಿಲ್‌ನಲ್ಲಿ 32 ಮಿ.ಮೀ. ವಾಡಿಕೆಗೆ 13 ಮಿ.ಮೀ. ಮಾತ್ರ ಮಳೆಯಾಗಿದೆ.

ಮೇ 7ರಿಂದ 13ರ ವರೆಗೆ ವಾಡಿಕೆಯಂತೆ 10.6 ಮಿ.ಮೀ. ಮಳೆಯಾಗಬೇಕಿತ್ತು, 18.3 ಮಿ.ಮೀ. ಆಗಿದೆ. ಆದರೆ ಜಿಲ್ಲಾದ್ಯಂತ ವ್ಯಾಪಕವಾಗಿ ಸುರಿದಿಲ್ಲ, ಅಲ್ಲಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ.

ಭೂಮಿ ಹಸಿಯಾಗಿರುವ ಕಡೆಗಳಲ್ಲಿ ಉಳುಮೆ ಮಾಡಲಾಗುತ್ತಿದೆ. ಪ್ರಸ್ತುತ ಹಂಗಾಮಿನಲ್ಲಿ 2.43 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ.

ಭತ್ತ 69,234 ಹೆಕ್ಟೇರ್, ಜೋಳ 2525 ಹೆಕ್ಟೇರ್, ರಾಗಿ 7500 ಹೆಕ್ಟೇರ್, ಈ ಭಾಗದ ಪ್ರಮುಖ ಬೆಳೆಯಾದ ಮೆಕ್ಕೆಜೋಳವನ್ನು 1.31 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ.

ತೊಗರಿ 8953 ಹೆಕ್ಟೇರ್, ಎಣ್ಣೆಕಾಳುಗಳಲ್ಲಿ ಶೇಂಗಾ 13,750 ಹೆಕ್ಟೇರ್, ಸೂರ್ಯಕಾಂತಿ 310 ಹೆಕ್ಟೇರ್, ವಾಣಿಜ್ಯ ಬೆಳೆಗಳಲ್ಲಿ ಹತ್ತಿ 4584 ಹೆಕ್ಟೇರ್ ಬಿತ್ತನೆಯ ಗುರಿಯಿದೆ.

ಸೋಯಾ ಅವರೆ ಬೆಳೆಯಲು ಉತ್ತೇಜನ
ಜಿಲ್ಲೆಯಲ್ಲಿ ಕಳೆದ 3-4 ವರ್ಷಗಳಿಂದ ಮೆಕ್ಕೆಜೋಳದ ಬೆಳೆಗೆ ಮುಳ್ಳುಸಜ್ಜೆಯ ಹಾವಳಿ ಹೆಚ್ಚಾಗಿದ್ದು ಇದರಿಂದ ಇಳುವರಿ ಕುಂಠಿತವಾಗುತ್ತ ಬಂದಿದೆ.

ಇದನ್ನು ಮನಗಂಡು ಅಧಿಕಾರಿಗಳು ಸೋಯಾ ಅವರೆ ಬೆಳೆಯಲು ರೈತರಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದ್ದಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ 800 ಹೆಕ್ಟೇರ್ ಸೋಯಾ ಅವರೆ ಬೆಳೆಯಲಾಗಿತ್ತು. ಈ ಬಾರಿಯೂ ಅದನ್ನು ಪ್ರೋತ್ಸಾಹಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಶ್ರೀನಿವಾಸ ಚಿಂತಾಲ್ ತಿಳಿಸಿದರು.

ಹಳೇ ಶೇಂಗಾ ತಳಿಗಳನ್ನು ಬಳಸುವ ಬದಲು ಸುಧಾರಿತ ತಳಿಗಳನ್ನು ರೈತರಿಗೆ ಪರಿಚಯಿಸುವ ಚಿಂತನೆಯಿದೆ.

ಇದರ ಜತೆಗೆ ಅಂತರ ಬೆಳೆಯಾಗಿ ತೊಗರಿಯನ್ನು ಬೆಳೆಯಲು, ಮೆಕ್ಕೆಜೋಳದ ಬೆಳೆಯ ಅಂಚಿನಲ್ಲಿ ಔಡಲ ಬೆಳೆಯಲು ರೈತರಿಗೆ ಮಾರ್ಗದರ್ಶನ ನೀಡಲಾಗುವುದು ಎಂದರು.

ನಾಟಿ ಪದ್ಧತಿಯಲ್ಲಿ ತೊಗರಿ ಬೆಳೆಯುವುದು ಕಳೆದ ವರ್ಷ ಯಶಸ್ವಿಯಾಗಿ ಒಳ್ಳೆಯ ಇಳುವರಿ ಬಂದಿತ್ತು. ಈ ಬಾರಿಯೂ ಅದಕ್ಕೆ ಒತ್ತು ನೀಡಲಾಗುವುದು.

ಚೆಲ್ಲು ಭತ್ತ, ಯಾಂತ್ರೀಕೃತ ನಾಟಿ, ಡ್ರಂ ಸೀಡರ್‌ನಿಂದ ಭತ್ತದ ಬಿತ್ತನೆ ಮಾಡುವಂತೆ ರೈತರಿಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.

Latest Posts

ಲೈಫ್‌ಸ್ಟೈಲ್