ನಾಳೆ ಕೃಷಿ ಮಾಹಿತಿ ಕಾರ್ಯಾಗಾರ : ಪ್ರಾ.ಕೃ.ಸ.ಸಂಘ ಅಧ್ಯಕ್ಷ ರಾಕೇಶ್ ಹೆಗ್ಡೆ ಮಾಹಿತಿ : ಕಾಳುಮೆಣಸು, ಜಾಯಿಕಾಯಿ ಬೆಳೆ ವಿವರ

workshop
Published on

ಬೆಳ್ತಂಗಡಿ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಾಳುಮೆಣಸು ಮತ್ತು ಜಾಯಿಕಾಯಿ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ ಜುಲೈ 20ರಂದು ಬೆಳಗ್ಗೆ 9.30ರಿಂದ ಕೆದ್ದು ಶ್ರೀ ದೀಪಾ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಾ.ಕೃ.ಸ.ಸಂಘ ಅಧ್ಯಕ್ಷ ರಾಕೇಶ್ ಹೆಗ್ಡೆ ತಿಳಿಸಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಸಿ ವಿತರಣೆ ಕಾರ್ಯಕ್ರಮ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ., ಬೆಳ್ತಂಗಡಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಎಸ್.ಚಂದ್ರಶೇಖರ್, ಬಳಂಜ ಗ್ರಾಪಂ ಅಧ್ಯಕ್ಷೆ ಶೋಭಾ ಕುಲಾಲ್, ಅಳದಂಗಡಿ ಗ್ರಾಪಂ ಅಧ್ಯಕ್ಷೆ ಸರಸ್ವತಿ, ಸುಲ್ಕೇರಿ ಗ್ರಾಪಂ ಅಧ್ಯಕ್ಷೆ ಗಿರಿಜಾ ಭಾಗವಹಿಸಲಿದ್ದಾರೆ.

ಕರಾವಳಿಯ ಮುಖ್ಯ ಬೆಳೆಯಾಗಿರುವ ಅಡಕೆ ಈಗ ಮಲೆನಾಡು ಘಟ್ಟ ಪ್ರದೇಶಗಳಿಗೂ ವ್ಯಾಪಿಸಿದೆ. ಹೊರರಾಜ್ಯಗಳಲ್ಲೂ ಹೇರಳವಾಗಿ ಅಡಕೆ ಬೆಳೆಯುತ್ತಿದ್ದು ಮುಂದಿನ ದಿನಗಳಲ್ಲಿ ಅಡಕೆ ಭವಿಷ್ಯ ಯಾವ ಮಟ್ಟದಲ್ಲಿ ನಿಲ್ಲಬಹುದೆಂಬುದು ನಮ್ಮೆಲ್ಲರ ಮುಂದಿರುವ ಪ್ರಶ್ನೆ. ಹೀಗಾಗಿ ನಾವು ಅಡಕೆಯ ಮಧ್ಯೆ ಉಪ ಬೆಳೆ ಬೆಳೆಸುವತ್ತ ಚಿತ್ತ ಹರಿಸಬೇಕಾಗಿದೆ. ಇದಕ್ಕೆ ನಮಗಿರುವ ಮುಖ್ಯ ಅವಕಾಶಗಳು ಕಾಳುಮೆಣಸು ಹಾಗೂ ಜಾಯಿಕಾಯಿ ಕೃಷಿ. ಈ ಬೆಳೆ ಬಗ್ಗೆ ರೈತರಿಗೆ ವೈಜ್ಞಾನಿಕವಾಗಿ ತರಬೇತಿ ನೀಡಿ ಅವರನ್ನು ಸುಸ್ಥಿರರನ್ನಾಗಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಕಪ್ಪು ಬಂಗಾರವೆಂದೇ ಕರೆಯಲಾಗುವ ಕಾಳುಮೆಣಸಿಗೆ ಮಾರುಕಟ್ಟೆಯಲ್ಲೀಗ ಚಿನ್ನದ ಬೆಲೆ. ಕಾಳುಮೆಣಸನ್ನು ಕಡೆಗಣ್ಣಿನಿಂದ ನೋಡಿದವರೂ ಈಗ ಕಾಳುಮೆಣಸಿನ ಕೃಷಿ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ. ಘಟ್ಟ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕಾಳುಮೆಣಸಿನ ಕೃಷಿ ಎಲ್ಲ ಪ್ರದೇಶಕ್ಕೂ ವಿಸ್ತರಣೆಗೊಳ್ಳುತ್ತಿದೆ. ಎಲ್ಲ ಕಡೆಗಳಲ್ಲೂ ಕಾಳುಮೆಣಸು ಬೆಳೆಸುವ ಪ್ರಯತ್ನ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಅಡಕೆಯಷ್ಟೇ ಕಾಳುಮೆಣಸಿನ ಕಡೆಗೂ ಮುತುವರ್ಜಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ರಾಕೇಶ್ ಹೆಗ್ಡೆ ಬಳಂಜ ಹೇಳಿದರು.

ಕಾಳುಮೆಣಸು ಗಿಡ ವಿತರಣೆ

ಸಂಪನ್ಮೂಲ ವ್ಯಕ್ತಿಗಳಾಗಿ ಯಶಸ್ವಿ ಕಾಳುಮೆಣಸು ಕೃಷಿಕ ಸುರೇಶ್ ಬಲ್ನಾಡು, ಜಾಯಿಕಾಯಿ ಕೃಷಿ ಸಾಧಕ ಟಿ.ಆರ್.ಸುರೇಶ್ಚಂದ್ರ ತೊಟ್ಟೆತ್ತೋಡಿ, ಕಾಳುಮೆಣಸು, ಸಿಲ್ವರ್ ವೋಕ್, ಕಾಫಿ ಬೆಳೆಗಾರ ಅಜಿತ್ ಪ್ರಸಾದ್ ರೈ ಕಾಯರ್‌ತಡಿ, ಪುತ್ತೂರು ಭಾಗವಹಿಸಲಿದ್ದಾರೆ. ಶಂಕರ್ ಭಟ್ ಕಟ್ಟೂರು, ಈಶ್ವರ ಪೂಜಾರಿ ಬಿರ್ಮಜಿ - ಕುದ್ಯಾಡಿ ರವರನ್ನು ಸನ್ಮಾನಿಸಲಾಗುತ್ತದೆ. ಹಾಗೂ ಸಂಘ ಸದಸ್ಯರಿಗೆ ಉಚಿತ ಕಾಳು ಮೆಣಸಿನ ಗಿಡ ವಿತರಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net