

ಸುಬ್ರಹ್ಮಣ್ಯ: ಕೃಷಿ ಚಟುವಟಿಕೆಗಳು ಅಧಿಕವಾಗಿ ಬೆಳೆಯಲು ಇಂತಹ ಕೃಷಿ ಮೇಳಗಳು ಅತ್ಯಗತ್ಯ. ಇಂತಹ ಮೇಳಗಳ ಆಯೋಜನೆಯಿಂದ ಯುವ ಜನಾಂಗ ಕೃಷಿಯತ್ತ ಆಕರ್ಷಿತರಾಗಲು ಸಾಧ್ಯವಿದೆ. ಕುಕ್ಕೆ ಜಾತ್ರೆಗೆ ಬರುವ ಭಕ್ತರಿಗೆ ವ್ಯವಸಾಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಮೇಳ ಹೆಚ್ಚು ಆವಶ್ಯಕವಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರಾ ಹೇಳಿದರು.
ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಸಿಡಿಪಿಒ ಶೈಲಜಾ, ಸಿಪಿಸಿಆರ್‌ಐ ಕಿದು ವಿಜ್ಞಾನಿ ದಿವಾಕರ, ದೇವಳದ ನೋಣಪ್ಪ ಗೌಡ, ಪ್ರಮುಖರಾದ ವಿಮಲಾ ರಂಗಯ್ಯ, ಉಮೇಶ್ ಕೆ.ಎನ್., ಕಿರಣ್ ಗುಡ್ಲೆಗುತ್ತು, ಗೋಪಾಲ್ ಎಣ್ಣೆಮಜಲು ಉಪಸ್ಥಿತರಿದ್ದರು.
ಕೃಷಿ ಮೇಳದಲ್ಲಿ ಸಿಪಿಸಿಆರ್‌ಐನ ಸಂಶೋಧಿತ ತಳಿಗಳ ಪ್ರದರ್ಶನ, ತೋಟಗಾರಿಕಾ ಇಲಾಖೆ ಸ್ಟಾಲ್, ಕೃಷಿ ಇಲಾಖೆ ಸ್ಟಾಲ್ ಮತ್ತಿತರ ಸ್ಟಾಲ್‌ಗಳನ್ನು ಆರಂಭಿಸಲಾಗಿತ್ತು. ಜಾತ್ರೆಗೆ ಆಗಮಿಸಿದ ಭಕ್ತರು ಕೃಷಿ ಮೇಳದ ಸದುಪಯೋಗಪಡೆದುಕೊಂಡರು.