

AB de Villiers : ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ದಕ್ಷಿಣ ಆಫ್ರಿಕಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸಂತಾಪ ಸೂಚಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಆರು ರನ್‌ಗಳಿಂದ ಸೋಲಿಸಿ, ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದ ಆರ್‌ಸಿಬಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಹಮ್ಮಿಕೊಂಡಿತ್ತು. ಈ ಸಮಾರಂಭಕ್ಕೆ ಸಾಕ್ಷಿಯಾಗಲು ದೊಡ್ಡ ಜನಸಮೂಹ ಸ್ಥಳದಲ್ಲಿ ಜಮಾಯಿಸಿತ್ತು. ಆದಾಗ್ಯೂ, ಜನಸಂದಣಿಯನ್ನು ಸಂಪೂರ್ಣವಾಗಿ ನಿರ್ವಹಿಸದ ಕಾರಣ ಕಾಲ್ತುಳಿತ ಸಂಭವಿಸಿ 11 ಜನರು ಮೃತಪಟ್ಟರು. ಸುಮಾರು 50 ಜನರು ಗಾಯಗೊಂಡಿದ್ದಾರೆ.
ಈ ದುರಾದೃಷ್ಟಕರ ಘಟನೆಯಿಂದ ಅಮಾಯಕ ಜೀವಗಳು ಬಲಿಯಾಗಿದ್ದು, 18 ವರ್ಷದ ಬಳಿಕ ಆರ್‌ಸಿಬಿ ಕಪ್ ಗೆದ್ದ ಖುಷಿಯನ್ನೇ ಕಸಿದುಕೊಂಡಿದೆ. ಈ ಘಟನೆಯ ಬಗ್ಗೆ ವಿರಾಟ್ ಕೊಹ್ಲಿ, ಸಚಿನ್ ಹಾಗೂ ಅನಿಲ್ ಕುಂಬ್ಳೆ ಸೇರಿದಂತೆ ಹಲವಾರು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಇದೀಗ ಎಬಿ ಡಿವಿಲಿಯರ್ಸ್ ಕೂಡ ಸಂತಾಪ ಸೂಚಿಸಿದ್ದು, ಬಾಧಿತ ಎಲ್ಲರೊಂದಿಗೂ ತಮ್ಮ ಪ್ರಾರ್ಥನೆ ಇದೆ ಎಂದಿದ್ದಾರೆ.
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ ಘಟನೆಯಿಂದ ಬಾಧಿತರಾದ ಎಲ್ಲರೊಂದಿಗೂ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇದೆ ಎಂದು ಡಿವಿಲಿಯರ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆಯುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಅಂದಹಾಗೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಸಹ ಘೋಷಿಸಿದೆ. ಅದೇ ರೀತಿ, ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ದುರಂತ ಕಾಲ್ತುಳಿತಕ್ಕೆ ಭಾರತದ ದಂತಕಥೆ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಕೂಡ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದದ್ದು ಅತ್ಯಂತ ದುರಂತ. ಬಾಧಿತ ಪ್ರತಿಯೊಂದು ಕುಟುಂಬಕ್ಕೂ ನನ್ನ ಹೃದಯ ಮಿಡಿಯುತ್ತದೆ. ಎಲ್ಲರಿಗೂ ಶಾಂತಿ ಮತ್ತು ಶಕ್ತಿಯನ್ನು ಹಾರೈಸುತ್ತೇನೆ ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.
ಭಾರತದ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ, ಕಾಲ್ತುಳಿತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಇದು ಕ್ರಿಕೆಟ್‌ಗೆ ದುಃಖದ ದಿನ! ಇಂದು ಆರ್‌ಸಿಬಿ ವಿಜಯವನ್ನು ಆಚರಿಸುವಾಗ ಜೀವ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಹೃದಯ ಮಿಡಿಯುತ್ತದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ನಲ್ಲಿ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)