ಭಾರತದ ಸೋಲು ಕ್ರಿಕೆಟ್​ಗೆ​ ಗೆಲುವು! ಕರ್ಮದ ಫಲ ಎಂದು​ ನಾಲಿಗೆ ಹರಿಬಿಟ್ಟ ಅಬ್ದುಲ್​ ರಜಾಕ್​

Abdul Razak
Published on

ನವದೆಹಲಿ: ವಿಶ್ವಕಪ್​ನಲ್ಲಿ ಆತಿಥೇಯ ಭಾರತದ ಸೋಲನ್ನು ವಿಕೃತ ಮನಸ್ಸಿನ ಪಾಕಿಸ್ತಾನಿಗಳು ಸಂಭ್ರಮಿಸುತ್ತಲೇ ಇದ್ದಾರೆ. ತಮ್ಮ ದೇಶವೇ ಹೀನಾಯ ಸ್ಥಿತಿಯನ್ನು ತಲುಪಿರುವಾಗ ಅದರ ಬಗ್ಗೆ ಧ್ವನಿ ಎತ್ತುವುದನ್ನು ಬಿಟ್ಟು ಕೆಲ ಪಾಕ್​ ಕ್ರಿಕೆಟಿಗರು ಟೀಮ್​ ಇಂಡಿಯಾ ಸೋಲನ್ನು ಆನಂದಿಸುತ್ತಿರುವ ಪರಿ ನೋಡಿದರೆ, ಎಷ್ಟರ ಮಟ್ಟಿಗೆ ಭಾರತದ ಏಳಿಗೆಯನ್ನು ಸಹಿಸುವುದಿಲ್ಲ ಎಂಬುದು ಗೊತ್ತಾಗುತ್ತದೆ. ಕೆಲ ದಿನಗಳ ಹಿಂದೆ ಅಶ್ಲೀಲ ಕಾಮೆಂಟ್​ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ಪಾಕಿಸ್ತಾನದ​ ಮಾಜಿ ಆಲ್​ರೌಂಡರ್ ಅಬ್ದುಲ್​ ರಜಾಕ್​ ಇದೀಗ ಮತ್ತೊಮ್ಮೆ​ ನಾಲಿಗೆ ಹರಿಬಿಟ್ಟಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಾಕಿಸ್ತಾನದ ಶೋ ಒಂದರಲ್ಲಿ ಮಾತನಾಡಿರುವ ರಜಾಕ್​, ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದನ್ನು ನೋಡಿ ಸಂತೋಷವಾಯಿತು ಎಂದಿದ್ದಾರೆ. ಅಲ್ಲದೆ, ಭಾರತ ಸೋಲಿಗೆ ಅವರು ಮಾಡಿದ ಕರ್ಮಗಳೇ ಕಾರಣ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ನಾನು ಪ್ರಾಮಾಣಿಕನಾಗಿದ್ದರೆ, ಕ್ರಿಕೆಟ್​ ಗೆಲ್ಲುತ್ತೇನೆ. ಅವರು ಮೈದಾನದ ಪರಿಸ್ಥಿತಿಯನ್ನು ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು. ಒಂದು ವೇಳೆ ಭಾರತ ವಿಶ್ವಕಪ್ ಗೆದ್ದಿದ್ದರೆ ಕ್ರಿಕೆಟ್ ಪಾಲಿಗೆ ಅದು ದುಃಖದ ಕ್ಷಣವಾಗುತ್ತಿತ್ತು. ಧೈರ್ಯಶಾಲಿ ಮತ್ತು ಮಾನಸಿಕವಾಗಿ ಸದೃಢವಾಗಿರುವ ತಂಡಕ್ಕೆ ಮಾತ್ರ ಕ್ರಿಕೆಟ್ ಸಹಾಯ ಮಾಡುತ್ತದೆ. ಆಸ್ಟ್ರೇಲಿಯಾ ಗೆಲುವು ಕ್ರಿಕೆಟ್​ನ ಗೆಲುವು ಎಂದು ಹೇಳುವ ಮೂಲಕ ಟೀಮ್​ ಇಂಡಿಯಾದ ಪ್ರಾಮಾಣಿಕತೆಯನ್ನು ಕೆಣಕಿ, ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಿಚ್‌ಗಳು ಮತ್ತು ವಾತಾವರಣವು ಎರಡೂ ತಂಡಗಳಿಗೆ ನ್ಯಾಯಯುತವಾಗಿರಬೇಕು ಮತ್ತು ಸಮತೋಲಿತವಾಗಿರಬೇಕು. ಆದರೆ, ಭಾರತ ಫೈನಲ್‌ನಲ್ಲಿಯೂ ಲಾಭ ಪಡೆಯಲು ಪ್ರಯತ್ನಿಸಿತು ಮತ್ತು ಕೊಹ್ಲಿ ಮತ್ತೊಂದು ಶತಕ ಬಾರಿಸಿದ್ದರೆ ಭಾರತ ಮತ್ತೊಮ್ಮೆ ಪಂದ್ಯವನ್ನು ಗೆಲ್ಲಬಹುದಿತ್ತು. ಭಾರತ, ವಿಭಿನ್ನ ಪರಿಸ್ಥಿತಿಗಳಲ್ಲಿ 10 ಪಂದ್ಯಗಳನ್ನು ಗೆದ್ದಿದೆ. ಆದರೆ, ಅತ್ಯಂತ ಮುಖ್ಯವಾದ ಫೈನಲ್‌ನಲ್ಲಿ ಪರಿಸ್ಥಿತಿಗಳನ್ನು ಸರಿಯಾಗಿ ಓದದೆ ಭಾರತ ಬಲಿಪಶುವಾಯಿತು. ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದಾಗ್ಯೂ, ಟಾಸ್ ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ, ಏಕೆಂದರೆ ರೋಹಿತ್ ಅವರು ಮೊದಲು ಬ್ಯಾಟಿಂಗ್ ಮಾಡಲು ಮಾತ್ರ ನೋಡುತ್ತಿದ್ದೇವೆ ಹೇಳಿದ್ದರು ಎಂದರು.

ಪಂದ್ಯದ ವಿಚಾರಕ್ಕೆ ಬರುವುದಾದರೆ, ನ.19ರಂದು ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net