ವಿಶ್ವಕಪ್​ನಲ್ಲಿ ಆಟಗಾರ, ನಾಯಕನಾಗಿ ಸಾಧ್ಯವಾಗದ್ದನ್ನು ತರಬೇತುದಾರನಾಗಿ ಸಾಧಿಸುವರೇ ದ್ರಾವಿಡ್​?

dravid web
Published on

ಬೆಂಗಳೂರು: ದಿಗ್ಗಜ ಬ್ಯಾಟರ್​ ರಾಹುಲ್​ 2003ರಲ್ಲಿ ಆಟಗಾರನಾಗಿ ವಿಶ್ವಕಪ್​ ಟ್ರೋಫಿ ಗೆಲ್ಲುವ ಸನಿಹ ಬಂದಿದ್ದರೂ, ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 2007ರಲ್ಲಿ ಅವರ ನಾಯಕತ್ವದಲ್ಲಿ ಭಾರತ ಆಡಿದ ವಿಶ್ವಕಪ್​ ದುಃಸ್ವಪ್ನದಂತಿತ್ತು. ಇದೀಗ ಕೋಚ್​ ಆಗಿ ಹೊಸ ಪಾತ್ರದೊಂದಿಗೆ ವಿಶ್ವಕಪ್​ಗೆ ಅವರು ಎಂಟ್ರಿ ಕೊಡುತ್ತಿದ್ದಾರೆ. ಆಟಗಾರ ಮತ್ತು ನಾಯಕನಾಗಿ ಸಾಧ್ಯವಾಗದ್ದನ್ನು ಕೋಚ್​ ಆಗಿ ಸಾಧಿಸುವ ಅವಕಾಶ ಅವರ ಮುಂದಿದೆ.

ತವರಿನಲ್ಲಿ 12 ವರ್ಷಗಳ ಬಳಿಕ, ಒಟ್ಟಾರೆ 3ನೇ ವಿಶ್ವಕಪ್​ ಗೆಲ್ಲುವ ಗುರಿ, 13 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸುವ ಮಹಾದಾಸೆ ಮತ್ತು 1.40 ಕೋಟಿ ಭಾರತೀಯರ ನಿರೀಕ್ಷೆಗೆ ತಕ್ಕ ನಿರ್ವಹಣೆ ತೋರುವ ಹುರುಪಿನೊಂದಿಗೆ ರೋಹಿತ್​ ಶರ್ಮ ಸಾರಥ್ಯದ ಭಾರತ ತಂಡ 13ನೇ ಆವೃತ್ತಿಯ ಏಕದಿನ ವಿಶ್ವಕಪ್​ನಲ್ಲಿ ಭಾನುವಾರ ಅಭಿಯಾನ ಆರಂಭಿಸಲಿದೆ. ಐದು ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ಮೊದಲ ಎದುರಾಳಿಯಾಗಿದೆ.

ಟೀಮ್​ ಇಂಡಿಯಾ ಕೋಚ್​ ಆಗಿ ದ್ರಾವಿಡ್​ ಹಾಲಿ ಅವಧಿ ವಿಶ್ವಕಪ್​ನೊಂದಿಗೆ ಕೊನೆಗೊಳ್ಳಲಿದೆ. ಹೀಗಾಗಿ ವಿಶ್ವಕಪ್​ ಗೆಲುವಿನೊಂದಿಗೆ ಅವರ ವಿದಾಯವೇ ಅಥವಾ ಅವಧಿ ವಿಸ್ತರಣೆಯೇ ಎಂಬ ಕುತೂಹಲವೂ ಹರಡಿದೆ. 2018ರಲ್ಲಿ 19 ವಯೋಮಿತಿ ತಂಡದ ಕೋಚ್​ ಆಗಿ ವಿಶ್ವಕಪ್​ ಗೆದ್ದಿದ್ದ ದ್ರಾವಿಡ್​ಗೆ ಕಿರಿಯ-ಹಿರಿಯ ವಿಭಾಗದಲ್ಲಿ ವಿಶ್ವಕಪ್​ ಗೆದ್ದ ಮೊದಲಿಗರಾಗುವ ಅವಕಾಶವೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net