ಫಿಟ್​ನೆಸ್​ ಪಾಸಾದ ರಿಷಭ್​ ಪಂತ್: ರಾಜಸ್ಥಾನ ರಾಯಲ್ಸ್​ ತಂಡದ ಪ್ರಮುಖ ವೇಗಿ ಸೇರಿ ಇಬ್ಬರು ಐಪಿಎಲ್​ನಿಂದ ಹೊರಕ್ಕೆ..!

1 rishb
Published on

ನವದೆಹಲಿ: ಟೀಂ ಇಂಡಿಯಾ ಆಟಗಾರ ರಿಷಭ್​ ಪಂತ್ ಅವರು ಸಂಪೂರ್ಣವಾಗಿ ಫಿಟ್​ ಆಗಿದ್ದಾರೆ ಎಂದು ಬಿಸಿಸಿಐ ಘೋಷಿಸಿದೆ. ಈ ಮೂಲಕ ಒಂದೂವರೆ ವರ್ಷದ ಬಳಿಕ ರಿಷಭ್ ಪಂತ್ ಅವರು ಕ್ರಿಕೆಟ್ ಮೈದಾನದಲ್ಲಿ ರಂಜಿಸಲಿದ್ದಾರೆ.

ಬಿಸಿಸಿಐ ಮಂಗಳವಾರ ಅಧಿಕೃತ ಪ್ರಕಟನೆ ಮೂಲಕ ಪಂತ್​ ಫಿಟ್​ನೆಸ್​ ವರದಿಯನ್ನು ಪ್ರಕಟಿಸಿದೆ. ​ಕ್ರಿಕೆಟ್​ ಆಡಲು ಪಂತ್​ ಫಿಟ್​ ಆಗಿದ್ದಾರೆ ಎಂದು ಖಚಿತಪಡಿಸಿದೆ. ಈ ಸುದ್ದಿ ತಿಳಿದ ಪಂತ್ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ವಿಕೆಟ್​ ಕೀಪರ್ ಮತ್ತು ಬ್ಯಾಟ್ಸ್​​ಮನ್​​ ರಿಷಬ್​ ಪಂತ್​ಗೆ 2022ರ ಡಿಸೆಂಬರ್ 30ರಂದು ಉತ್ತರಖಂಡದ ರೂರ್ಕಿ ಬಳಿ ಭೀಕರ ಕಾರು ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಫಿಟ್​ನೆಸ್​ ಪಾಸ್​ ಆದ ಕಾರಣ ಪಂತ್​ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಜತೆಗೆ ವಿಕೆಟ್ ಕೀಪಿಂಗ್ ಕೂಡ ನಡೆಸಲಿದ್ದಾರೆ. 14-ತಿಂಗಳ ಪುನರ್ವಸತಿ ಮತ್ತು ಚೇತರಿಕೆಯ ಪ್ರಕ್ರಿಯೆಗೆ ಒಳಗಾದ ನಂತರ ಪಂತ್​ ಅವರು ಕ್ರಿಕೆಟ್​ಗೆ ಮರಳುತ್ತಿದ್ದಾರೆ.

ರಿಷಬ್​ಗೆ ನಾಯಕತ್ವ ಡೌಟ್?: ರಿಷಭ್ ಪಂತ್ ಸಂಪೂರ್ಣ ಫಿಟ್ ಆಗಿರುವುದರಿಂದ ಐಪಿಎಲ್​ ಆಡಲಿದ್ದಾರೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್​ ಅವರಿಗೆ ಈ ಆವೃತ್ತಿಯಲ್ಲಿ ನಾಯಕತ್ವ ನೀಡುತ್ತಾ? ಎಂದು ದೃಢವಾಗಿಲ್ಲ. 100%ಫಿಟ್​ನೆಸ್ ಸಾಧಿಸದಿದ್ದರೆ ಅವರಿಗೆ ನಾಯಕತ್ವದ ಬದಲು ಮತ್ತೊಂದು ಜವಾಬ್ದಾರಿ ನೀಡಬಹುದು ಎನ್ನಲಾಗಿದೆ.

ಪಂತ್​ 2024ರ ಐಪಿಎಲ್​ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ವೇಳೆಯೇ ತಿಳಿದುಬಂದಿತ್ತು. ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಕೂಡ ಪಂತ್​ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದು ತಿಳಿಸಿತ್ತು.

ಇಬ್ಬರು ಬೌಲರ್ಸ್​ ಟೂರ್ನಿಯಿಂದ ಔಟ್​: ಟೀಂ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಈಗಾಗಲೇ ಅವರು ಐಪಿಎಲ್​ 2024 ಟೂರ್ನಿಯಿಂದ ಹೊರಗುಳಿದಿದ್ದಾರೆ. ಇನ್ನೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net