ಸೆಮಿಸ್​ ತಲುಪಿದ ಅಫ್ಘಾನಿಸ್ತಾನ… ರೋಹಿತ್​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಶೀದ್​ ಖಾನ್​!

Rohit Sharma
Published on

ನವದೆಹಲಿ: ಅಫ್ಘಾನಿಸ್ತಾನ ತಂಡದ ಕನಸು ಇದೀಗ ನನಸಾಗಿದೆ. ಟಿ20 ವಿಶ್ವಕಪ್​ನಲ್ಲಿ ಗ್ರೂಪ್ ಹಂತವನ್ನು ದಾಟಿದ ಬಳಿಕ ಸೂಪರ್​ 8ರಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಸೂಪರ್-8 ಅಂಗವಾಗಿ ಮೊದಲು ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವ ಕ್ರಿಕೆಟ್​ ಅನ್ನು ಅಚ್ಚರಿಗೊಳಿಸಿದ್ದ ರಶೀದ್ ಖಾನ್​ ಪಡೆ ಇತ್ತೀಚೆಗಷ್ಟೇ ಬಾಂಗ್ಲಾದೇಶವನ್ನು ಸೋಲಿಸಿ ಹೆಮ್ಮೆಯಿಂದ ನಾಕೌಟ್ ಹಂತ ತಲುಪಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟ್ ಮಾಡಿ 115 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಲು ಕಣಕ್ಕೆ ಇಳಿದ ಎದುರಾಳಿ ತಂಡ 105 ರನ್ ಗಳಿಗೆ ಸೀಮಿತಗೊಂಡು ಮನೆಯತ್ತ ಮುಖ ಮಾಡಿತು. ಯಾವ ಹಂತದಲ್ಲೂ ತಂಡ ಗೆಲುವಿನ ಹಾದಿ ತೋರಲಿಲ್ಲ. ಲಿಟನ್ ದಾಸ್ (ಔಟಾಗದೆ 54) ಹೋರಾಟದ ನಡುವೆಯೂ ಅಫ್ಘಾನಿಸ್ತಾನಕ್ಕೆ ಪಂದ್ಯ ಕೈ ತಪ್ಪಿದಂತಾಯಿತು.

ಕಾಬೂಲ್‌ನಿಂದ ಕಂದಹಾರ್‌ವರೆಗಿನ ಲಕ್ಷಾಂತರ ಜನರು ಆಫ್ಘನ್ ವಿಜಯದಿಂದ ಸಂತೋಷಪಟ್ಟರು. ಹಸಿವು, ದಬ್ಬಾಳಿಕೆ, ಬಡತನದಿಂದ ನಿತ್ಯ ನರಳುತ್ತಿರುವ ಅಫ್ಘಾನಿಸ್ತಾನದ ಜನತೆ ತಂಡ ಸೆಮೀಸ್ ತಲುಪಿದಾಗ ಖುಷಿಪಟ್ಟರು. ಹಲವು ಸಂಕಟಗಳ ನಡುವೆ ಈ ಗೆಲುವು ಅವರ ಪಾಲಿಗೆ ಬೆಳಕಾಯಿತು. ಆಸೀಸ್ ಮತ್ತು ಬಾಂಗ್ಲಾದೇಶವನ್ನು ಮನೆಗೆ ಕಳುಹಿಸಿ ಸೆಮಿಸ್ ತಲುಪಿದ ರಶೀದ್ ಸೇನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ .

ಇದರ ನಡುವೆ ಆಫ್ಘಾನ್ ನಾಯಕ ರಶೀದ್ ಖಾನ್​, ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಪೋಸ್ಟ್ ಒಂದನ್ನು ಮಾಡಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರನ್ನು ಉದ್ದೇಶಿಸಿ ರಶೀದ್​, ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಮುಂಬೈನ ನನ್ನ ಸ್ನೇಹಿತ ಎಂದು ಹಿಟ್‌ಮ್ಯಾನ್‌ಗೆ ಧನ್ಯವಾದ ಹೇಳಿದ್ದಾರೆ.

ಸೂಪರ್-8ರ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನವು ಆಸೀಸ್ ತಂಡವನ್ನು ಸೋಲಿಸಿತು. ಬಳಿಕ ಆಸಿಸ್​ ತಂಡದ ಸೆಮಿಸ್ ಭರವಸೆ ಭಾರತದ ಮೇಲಿತ್ತು. ಆದರೆ, ರೋಹಿತ್ ಪಡೆ ಕಾಂಗರೂಗಳನ್ನು ಸೋಲಿಸಿದ್ದರಿಂದ ಸೆಮಿಸ್‌ಗೆ ಹೋಗುವ ಸಾಧ್ಯತೆ ಕಡಿಮೆಯಾಯಿತು. ಈ ವೇಳೆ ಅಫ್ಘಾನಿಸ್ತಾನ ಸಹ ಭಾರತದ ಗೆಲುವಿಗಾಗಿ ಪ್ರಾರ್ಥಿಸಿತ್ತು. ಸದ್ಯ ಭಾರತ ಮತ್ತು ಅಫ್ಘಾನಿಸ್ತಾನ ನಾಕೌಟ್‌ಗೆ ಅರ್ಹತೆ ಪಡೆದಿವೆ. ಆಸೀಸ್ ತಂಡವನ್ನು ಸೋಲಿಸುವ ಮೂಲಕ ಸೆಮಿಸ್ ಅವಕಾಶವನ್ನು ಉಳಿಸಿದ್ದಕ್ಕಾಗಿ ರಶೀದ್ ಖಾನ್ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ.

ಬಾಂಬೆಯಿಂದ ಬಂದ ನನ್ನ ಸ್ನೇಹಿತ ಎಂದು ಹಿಟ್‌ಮ್ಯಾನ್‌ ರೋಹಿತ್​ರನ್ನು ರಶೀದ್​ ಖಾನ್​ ಹೊಗಳಿದ್ದಾರೆ. ರೋಹಿತ್​ ಜತೆಗಿನ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ. ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ಬಗ್ಗೆ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ರೋಹಿತ್ ಜೊತೆಗಿನ ಬಾಂಧವ್ಯ ಮತ್ತು ಟೀಮ್​ ಇಂಡಿಯಾದ ಬೆಂಬಲವನ್ನು ಮೆಲುಕು ಹಾಕಿರುವ ರಶೀದ್ ಖಾನ್​ ಪೋಸ್ಟ್ ಈಗ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net