ಚೆನ್ನೈ: ಒಂದೆಡೆ ಬಣ್ಣದ ಜಗತ್ತಿನಲ್ಲಿ ಮದುವೆ ಸುದ್ದಿಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸೆಲೆಬ್ರಿಟಿಗಳ ವಿಚ್ಛೇದನದ ಸುದ್ದಿಯೂ ಸಖತ್ ಸದ್ದು ಮಾಡುತ್ತಿದೆ.
ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಸುದ್ದಿಯನ್ನೇ ಅಭಿಮಾನಿಗಳು ಇನ್ನೂ ಅರಗಿಸಿಕೊಳ್ಳಲು ಆಗಿಲ್ಲ. ಅಲ್ಲದೆ, ಧನುಷ್-ಐಶ್ವರ್ಯ ರಜನಿಕಾಂತ್ ಡಿವೋರ್ಸ್ ಸುದ್ದಿಯು ಸಹ ಅಭಿಮಾನಿಗಳಿಗೆ ಬರಸಿಡಿಲನಂತೆ ಅಪ್ಪಳಿಸಿತು. ಇದರ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ಜೀವಿ ಪ್ರಕಾಶ್ ತಮ್ಮ ಪತ್ನಿಯಿಂದ ಬೇರ್ಪಡುತ್ತಿರುವುದಾಗಿ ಘೋಷಿಸಿದರು. ಸ್ಯಾಂಡಲ್ವುಡ್ನಲ್ಲಿ ಬಿಗ್ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ. ಡಾ. ರಾಜ್ ಕುಟುಂಬದ ಯುವರಾಜ್ಕುಮಾರ್ ಮತ್ತು ಶ್ರೀದೇವಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸುದ್ದಿಗಳು ಇನ್ನು ಚರ್ಚೆಯಲ್ಲಿರುವಾಗಲೇ ಮತ್ತೊಂದು ತಾರಾ ಜೋಡಿ ಕೂಡ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸ್ಫೋಟಕ ಸುದ್ದಿ ಇದೀಗ ಹೊರಬಿದ್ದಿದೆ.
ಹಾಗಾದರೆ ಯಾರು ಆ ಸ್ಟಾರ್ ಜೋಡಿ? ಬೇರೆ ಯಾರೂ ಅಲ್ಲ ತಮಿಳು ಸಿನಿಮಾ ರಂಗದ ಸ್ಟಾರ್ ನಟ ಜಯಂ ರವಿ ಮತ್ತು ಅವರ ಪತ್ನಿ ಆರತಿ. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ವೈರಲ್ ಆಗಿವೆ. ಕೆಲವರು ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಇತ್ತೀಚೆಗಷ್ಟೇ ರವಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಪತ್ನಿಯ ಫೋಟೋಗಳು ಮತ್ತು ಫ್ಯಾಮಿಲಿ ಫೋಟೋಗಳನ್ನು ತೆಗೆದುಹಾಕಿರುವುದು ಈ ಸುದ್ದಿಗೆ ಬಲ ಬಂದಿದೆ. ಇದಲ್ಲದೆ, ಆರತಿ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಕೆಲವು ಫೋಟೋಗಳನ್ನು ಸಹ ಅಳಿಸಿದ್ದಾರೆ. ಈ ಒಂದು ಕಾರಣದಿಂದ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಲ ದಿನಗಳಿಂದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇರುವುದು ಗೊತ್ತಾಗಿದೆ.
ಜಯಂ ರವಿ ಅವರು 2009ರಲ್ಲಿ ಆರತಿಯನ್ನು ವಿವಾಹವಾದರು. ಆರತಿ, ತಮಿಳಿನ ಖ್ಯಾತ ನಿರ್ಮಾಪಕಿ ಸುಜಾತಾ ವಿಜಯ್ ಕುಮಾರ್ ಅವರ ಮಗಳು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಆರವ್ ಇತ್ತೀಚೆಗೆ ಟಿಕ್ ಟಿಕ್ ಟಿಕ್ ಚಿತ್ರದಲ್ಲಿ ನಟಿಸಿದ್ದರು. ರವಿ ಮತ್ತು ಆರತಿ ಜೋಡಿ ಕಾಲಿವುಡ್ ಇಂಡಸ್ಟ್ರಿಯಲ್ಲಿ ಮುದ್ದಾದ ಜೋಡಿ ಎಂದೇ ಹೆಸರುವಾಸಿಯಾಗಿತ್ತು. ಆದರೆ ಕೆಲವು ವರ್ಷಗಳಿಂದ ಭಿನ್ನಾಭಿಪ್ರಾಯಗಳಿದ್ದು, ಕೆಲ ದಿನಗಳಿಂದ ಇಬ್ಬರೂ ದೂರ ಉಳಿದಿದ್ದಾರೆ ಎಂದು ತಿಳಿದುಬಂದಿದೆ. ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನಗಳು ವಿಫಲವಾಗಿವೆ ಎಂದು ವರದಿಯಾಗಿದೆ.
ಇದೇ ಸಂದರ್ಭದಲ್ಲಿ ರವಿ ಮತ್ತು ಆರತಿ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿರುವುದರಿಂದ ವದಂತಿಗಳು ನಿಜವೆಂದು ತೋರುತ್ತದೆ. ಇದೀಗ ಜಯಂ ರವಿ ಅವರ ಡಿವೋರ್ಸ್ ಸುದ್ದಿ ತಮಿಳು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸದ್ಯದಲ್ಲೇ ಇವರಿಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಇದುವರೆಗೂ ಜಯಂ ರವಿಯಾಗಲಿ ಅಥವಾ ಆರತಿಯಾಗಲಿ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್)
11ನೇ ವಯಸ್ಸಿನಲ್ಲೇ ಎಮ್ಮೆ ಹಾಲು ಮಾರಾಟ! ಕೋಟಿಗಳ ಸಾಮ್ರಾಜ್ಯ ಕಟ್ಟಿದ ಯುವತಿಯ ಯಶೋಗಾಥೆ ಇದು…
ರೋಹಿತ್ ಅಲ್ಲ, ಆಸಿಸ್ ವಿರುದ್ಧ ಗೆಲ್ಲಲು ಈ ಇಬ್ಬರೇ ಕಾರಣ: ಸಚಿನ್ ತೆಂಡೂಲ್ಕರ್ ಶಾಕಿಂಗ್ ಹೇಳಿಕೆ