ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು: ಬೆಂಗಳೂರು ವಕೀಲರ ಸಂಘದಿಂದ ಸುಪ್ರೀಂಕೋರ್ಟ್​ ಸಿಜೆಗೆ ಪತ್ರ, ಹೀಗೊಂದು ಮನವಿ

Vivek Subbareddy DY Chandrachud
Published on

ಬೆಂಗಳೂರು: ಲಂಚ ಪ್ರಕರಣದ ಪ್ರಮುಖ ಆರೋಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಿನಬೆಳಗಾಗುವುದರೊಳಗೆ ವಿಚಾರಣೆ ನಡೆಸಿ ಮಾನ್ಯ ಮಾಡಿರುವ ನ್ಯಾಯಾಂಗ ಪ್ರಕ್ರಿಯೆಗೆ ಬೆಂಗಳೂರು ವಕೀಲರ ಸಂಘ ತೀವ್ರ ಆಘಾತ ವ್ಯಕ್ತಪಡಿಸಿದೆ.

ಈ ಸಂಬಂಧ ಮಂಗಳವಾರ ಸಂಜೆ ತುರ್ತು ಸಭೆ ನಡೆಸಿದ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಇಂದು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿರುವ ಪ್ರಕ್ರಿಯೆ ನ್ಯಾಯಾಂಗದ ಬಗ್ಗೆ ಶ್ರೀಸಾಮಾನ್ಯರಿಗಿರುವ ನಂಬಿಕೆಯನ್ನು ಹುಸಿ ಮಾಡಿದೆ ಎಂದು ತಿಳಿಸಿದೆ.

ಹೈಕೋರ್ಟ್‌ನ ಸಾಮಾನ್ಯ ಪ್ರಕ್ರಿಯೆಯ ಅನುಸಾರ ಹೊಸ ಪ್ರಕರಣಗಳು ಅದರಲ್ಲೂ ನಿರೀಕ್ಷಣಾ ಜಾಮೀನು ಕೋರಿಕೆಯ ಕ್ರಿಮಿನಲ್ ಅರ್ಜಿಗಳು ದಾಖಲಾದರೆ ಅವು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲು ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಆದರೆ, ದೊಡ್ಡವರ ಪ್ರಕರಣಗಳನ್ನು ಮಾತ್ರ ದಿನಬೆಳಗಾಗುವುದರೊಳಗೆ ಪುರಸ್ಕರಿಸಲಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಇವತ್ತು ಮಾಡಾಳ್ ವಿರೂಪಾಕ್ಷಪ್ಪ ಅವರ ಅರ್ಜಿ ವಿಚಾರಣೆಯಲ್ಲಿ ಕೈಗೊಂಡ ನಿಲುವನ್ನೇ ಶ್ರೀಸಾಮಾನ್ಯರ ವಿಷಯದಲ್ಲೂ ಅನುಸರಿಸುವಂತಾಗಬೇಕು. ಅದಕ್ಕಾಗಿ ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಕಾದು ಕುಳಿತಿರುವ ಎಲ್ಲ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ನ್ಯಾಯಪೀಠದ ಎದುರು ವಿಚಾರಣೆಗೆ ನಿಗದಿಯಾಗುವಂತೆ ಪೋಸ್ಟ್ ಮಾಡಲು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಿಜಿಸ್ಟ್ರಿ ಕಚೇರಿಗೆ ನಿರ್ದೇಶಿಸುವಂತಾಗಬೇಕು ಎಂದು ಸಂಘವು ಮನವಿ ಮಾಡಿದೆ.

ನ್ಯಾಯದೇಗುಲ ಎಲ್ಲರಿಗೂ ಸಮಾನವಾಗಿರಬೇಕು. ಉಳ್ಳವರ ಪ್ರಕರಣಗಳನ್ನು ತೀರ್ಮಾನಿಸುವಂತೆಯೇ ಬಡವರ ಅರ್ಜಿಯನ್ನೂ ಪುರಸ್ಕರಿಸುವಂತಾಗಬೇಕು ಎಂದು ಸಂಘವು ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net