ಟೀನೇಜ್​ಗೆ ಇಮೋಜಿ ಕಂಟಕ, ಇಂದಿನ ಮಕ್ಕಳಿಗೆ ಇಂಟರ್​​ನೆಟ್ ಪೋಷಕ!​ 'ಅಡೋಲಸೆನ್ಸ್​' ಎಂಬ ಕಹಿಸತ್ಯ | Adolescence

ವಿಜಯವಾಣಿ (6)
Published on

| ಮೋಹನ್​ ಶೆಟ್ಟಿ

ಶರವೇಗದಲ್ಲಿ ಸಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ಆಧುನಿಕ ಟೆಕ್ನಾಲಜಿಗಳು ಹೊಚ್ಚ ಹೊಸ ಬಗೆಯ ವಿಷಯಗಳನ್ನು ಜನರ ತಲೆಬುರುಡೆಗೆ ಹೊಕ್ಕಿಸಿ, ನಾನಾ ಆವಿಷ್ಕಾರಗಳಿಗೆ ಸಾಕ್ಷಿಯಾಗುತ್ತಿದೆ. ಎಐ, ಚಾಟ್​ ಜಿಪಿಟಿ ಸೇರಿದಂತೆ ಇನ್ನಿತರ ಟೆಕ್ನಾಲಜಿಗಳು ಜನರ ದಿಕ್ಕನ್ನೇ ಬದಲಿಸಿವೆ. ಆದರೂ ಒಂದಷ್ಟು ಕೆಡಕುಗಳನ್ನು ಕೂಡ ತಂದಿಡುತ್ತಿವೆ. ಆರು ಇಂಚಿನ ಸ್ಮಾರ್ಟ್​ಫೋನ್​ ಯುಗದಲ್ಲಿರುವ ನಾವು, ಮಕ್ಕಳ ಬಾಲ್ಯ ಜೀವನ ಆನ್​ಲೈನ್​ನಲ್ಲೇ ಬೆರೆತು, ಅವಿತು ಹೋಗ್ತಿರುವುದು ದೊಡ್ಡ ಕಂಟಕ, ಕಂದಕವನ್ನೇ ಸೃಷ್ಟಿಸಿದೆ ಎಂಬುದನ್ನೇ ಮರೆತಿದ್ದೇವೆ.

ಸೋಷಿಯಲ್ ಮೀಡಿಯಾ ಎಂಬ ಪೆಡಂಭೂತ

90ರ ದಶಕದಲ್ಲಿ ಸ್ಮಾರ್ಟ್​ಫೋನ್​ಗೆ ಜಾಗವಿರಲಿಲ್ಲ. ಕೇವಲ ಪುಸ್ತಕ, ಓದು, ಪತ್ರಿಕೆ, ಟಿವಿ ಜಗತ್ತು ಮಾತ್ರ ಜನರ ಮುಂದಿತ್ತು. ಆದರೆ, ಸ್ಮಾರ್ಟ್​​ಫೋನ್​ ಎಂಟ್ರಿಕೊಟ್ಟಿದ್ದೇ ತಡ ಫೇಸ್​ಬುಕ್​, ವಾಟ್ಸ್​​ಆ್ಯಪ್​, ಸ್ನ್ಯಾಪ್​ ಚಾಟ್​, ಇನ್​ಸ್ಟಾಗ್ರಾಮ್​ ಸೇರಿದಂತೆ ಸೋಷಿಯಲ್​ ಮೀಡಿಯಾ ಎಂಬ ಪೆಡಂಭೂತ ಜನರನ್ನು ಆವರಿಸಿಕೊಂಡಿದೆ. ಅದರಲ್ಲೂ ಮಕ್ಕಳ ಮನಸನ್ನು ಇಂತಹ ಸೋಷಿಯಲ್ ಮೀಡಿಯಾಗಳು ತೀರ ದಿಕ್ಕು ತಪ್ಪಿಸುತ್ತಿವೆ. ಸಂಬಂಧ, ಭಾವನೆ, ಪ್ರೀತಿ ಇದೆಲ್ಲವೂ ಕೇವಲ ಸಂದೇಶ, ಜಾಲತಾಣಕ್ಕೆ ಮಾತ್ರ ಸೀಮಿತವಾಗಿವೆ. ಇಂದಿನ ಮಕ್ಕಳ ಆನ್​ಲೈನ್​ ಜಗತ್ತಿನ ಪರಿಚಯ ನಮಗೆ ಗೊತ್ತಾದ್ರೆ ನಿಜಕ್ಕೂ ದಂಗಾಗಿ ಹೋಗುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಇತ್ತೀಚೆಗಷ್ಟೇ ಜನಪ್ರಿಯ ಒಟಿಟಿ ಫ್ಲಾಟ್​ಫಾರ್ಮ್​ ಆದ ನೆಟ್​ಫ್ಲಿಕ್ಸ್​ನಲ್ಲಿ ತೆರೆಕಂಡ 'ಅಡೋಲಸೆನ್ಸ್​' ಎಂಬ ಕ್ರೈಮ್​​ ಡ್ರಾಮಾ ಸರಣಿ ಕಂಟೆಂಟ್.​

Adolescence | Rotten Tomatoes

'ಅಡೋಲಸೆನ್ಸ್' ಎಂಬ ಕಹಿಸತ್ಯ

ಇದು ಕೇವಲ ಒಂದು ಸರಣಿಯಲ್ಲದೇ ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಒಂದು ಗಾಢ ಕಟುಸತ್ಯ ಹಾಗೂ ಕರಾಳ ವಾಸ್ತವತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ವೆಬ್​ ಸರಣಿ. ತಾಂತ್ರಿಕವಾಗಿಯೂ ಹೆಚ್ಚು ಸದ್ದು ಮಾಡುತ್ತಿರುವ 'ಅಡೋಲಸೆನ್ಸ್​', ನಿರೀಕ್ಷೆಗೂ ಮೀರಿ ಜಾಗತಿಕ ಮಟ್ಟದಲ್ಲಿ ಜನರನ್ನು ತಲುಪುತ್ತಿದೆ. ಮತ್ತು ಪೋಷಕರ ಕಣ್ಣನ್ನು ತೆರೆಸುತ್ತಿದೆ. ಇದೊಂದು ಚಿತ್ರವನ್ನು ವೀಕ್ಷಿಸಿದ ಜಗತ್ತಿನಾದ್ಯಂತ ಅನೇಕ ಪೋಷಕರು ತಮ್ಮ ಮಕ್ಕಳ ಮನಸ್ಥಿತಿ ಹೇಗೆ ಬದಲಾಗುತ್ತಿದೆ? ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ತಿಳಿದು ಅಕ್ಷರಶಃ ಕಂಗಾಲಾಗಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದಿನ ಪರಿಸ್ಥಿತಿ ಹೇಗೆ? ಎಂಬ ಸಂಗತಿಯನ್ನು ಊಹಿಸಿಯೇ ಒಂದು ನಿಮಿಷ ಅಚ್ಚರಿಗೆ ಒಳಗಾಗಿದ್ದಾರೆ. ಅಸಲಿಗೆ ಅಂಥದ್ದೇನಿದೆ ಈ ಸರಣಿಯಲ್ಲಿ ಎಂಬ ನಿಮ್ಮ ಹತ್ತು ಹಲವು ಪ್ರಶ್ನೆಗಳಿಗೆ ಹೀಗಿದೆ ಉತ್ತರದ ಹುಡುಕಾಟ...

Adolescence (TV Mini Series 2025) - IMDb

ವೆಬ್​ ಸರಣಿ ಸಾರಾಂಶ

ಬೆಳ್ಳಂಬೆಳಗ್ಗೆಯೇ ಎಡ್ಡಿ ಮಿಲ್ಲರ್​ (ಸ್ಟೀನ್​ ಗ್ರಹಾಮ್​) ಮನೆಯ ಮೇಲೆ ದಾಳಿ ಮಾಡುವ ಪೊಲೀಸರು, ಆತನ 13 ವರ್ಷದ ಮಗ ಜೇಮಿ ಮಿಲ್ಲರ್​ನನ್ನು (ಓವನ್​ ಕೂಪರ್​) ಬಂಧಿಸುತ್ತಾರೆ. ಜೇಮಿಯ ಶಾಲಾ ಸಹಪಾಠಿ ಕೇಟಿ ಲಿಯೊನಾರ್ಡ್​ ಹತ್ಯೆ ಆರೋಪದಲ್ಲಿ ಆತನ ಬಂಧನವಾಗಿರುತ್ತದೆ. ವಿಚಾರಣೆ ನಡೆಸಿದಂತೆ, ಜೇಮಿ ಮತ್ತು ಕೇಟಿ ನಡುವಿನ ಆನ್​ಲೈನ್​ ಜಗಳ, ಆಕೆ ಹತ್ಯೆಯಾಗುವ ರಾತ್ರಿ ಜೇಮಿಯನ್ನು ಭೇಟಿ ಮಾಡಿ ಕಿತ್ತಾಡಿಕೊಂಡಿರುವ ಸಿಸಿಟಿವಿ ವಿಡಿಯೋ ಸೇರಿ ಒಂದೊಂದೇ ವಿಷಯ ಬಯಲಾಗುತ್ತದೆ. ಜಗಳ ಆಡಿದ ಮಾತ್ರಕ್ಕೆ ಜೇಮಿಯೇ ಕೇಟಿಯನ್ನು ಕೊಂದಿರುತ್ತಾನಾ? ಎಡ್ಡಿ ಮಿಲ್ಲರ್​ ಮಗನನ್ನು ರಕ್ಷಿಸಿಕೊಳ್ಳಲು ಏನೆಲ್ಲಾ ಮಾಡುತ್ತಾನೆ? ವಿಚಾರಣೆಯಲ್ಲಿ ಬಯಲಾಗುವ ಸತ್ಯಗಳೇನು? ಸಾಮಾಜಿಕ ಜಾಲತಾಣ ಟೀನೇಜ್​ ಮಕ್ಕಳಿಗೆ ಎಷ್ಟು ಸುರಕ್ಷಿತ? ಮೊಬೈಲ್​ಗಳಿಂದ ಹೇಗೆಲ್ಲಾ ಸಮಸ್ಯೆಗಳು ಉಂಟಾಗುತ್ತಿವೆ? ಎಂಬ ವಿಚಾರಗಳು ಒಂದೊಂದಾಗಿ ಇಲ್ಲಿ ತೆರೆದುಕೊಳ್ಳುತ್ತವೆ.

ಇಮೋಜಿ ಎಂಬ ಕಂಟಕ

Heart Emoji Meanings — What All the Different Heart Emojis Mean

ಅಸಲಿಗೆ 'ಅಡೋಲಸೆನ್ಸ್​' ಇಲ್ಲಿ ಬಿತ್ತರಿಸಿರುವುದು ಒಂದು ಸಣ್ಣ ಝಲಕ್​ ಅಷ್ಟೇ. ಟೀನೇಜರ್​ಗಳು ನಾವು ಕಂಡು ಕೇಳರಿಯದ ಕರಾಳ ಜಗತ್ತಿಗೆ ಕಾಲಿಟ್ಟಿರುವ ಬಗ್ಗೆ ಇನ್ನೂ ಸಾಕಷ್ಟು ವಿಷಯಗಳಿವೆ. ಅದಕ್ಕೆ ಸಂಬಂಧಿಸಿದಂತೆ ಅಚ್ಚರಿ ವರದಿಗಳೂ ಇವೆ. ಇದೊಂದು ರೀತಿ ಕಡಲಾಳ ಎಂದೇ ಹೇಳಬಹುದು. ಇಂದಿನ ಟೀನೇಜರ್​ಗಳ ಬಾಳಲ್ಲಿ ಸೋಷಿಯಲ್ ಮೀಡಿಯಾದಲ್ಲಿನ ಇಮೋಜಿಗಳು ಯಾವೆಲ್ಲ ಅರ್ಥ ಕೊಡುತ್ತಿದೆ ಎಂಬುದು ನಮ್ಮ ಊಹೆಗೂ ಮೀರಿದೆ. ಏಕೆಂದರೆ, ಅವರ ಜಗತ್ತಿನಲ್ಲಿ ಒಂದೊಂದು ಇಮೋಜಿಗೂ ಭಿನ್ನ ಅರ್ಥವಿದೆ. ನಮಗೆ ತಿಳಿದಿರುವ ಅರ್ಥವೇ ಬೇರೆ! ಅವರಲ್ಲಿರುವ ಅರ್ಥವೇ ಬೇರೆ. ಟೀನೇಜರ್​ಗಳು ಕೋಡೆಡ್​ ಭಾಷೆ, ಹತ್ತಾರು ಟಾಕ್ಸಿಕ್​ ಟ್ರೆಂಡ್​ಗಳ ಹಿಂದೆ ಬಿದ್ದಿರುವುದು ಪೋಷಕರಿಗೇ ಅರಿವಿಲ್ಲ. ಇದು ಕಟುಸತ್ಯ.

ಡಿಜಿಟಲ್​ ಯುಗದಿಂದ ದೂರ

ಮಕ್ಕಳ ಮೇಲಿನ ಸೋಷಿಯಲ್ ಮೀಡಿಯಾ ಪ್ರಭಾವ ಹೇಗಿದೆ? ಅವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ಈ ವಯಸ್ಸಿನಲ್ಲಿ ಮಕ್ಕಳು ತಪ್ಪು ಮಾಡೋದು ಸಹಜ. ಹೀಗಿರುವಾಗ ಟೀನೇಜರ್​ಗಳನ್ನು ಏಕಾಏಕಿ ಜಾಲತಾಣಗಳಿಂದ ದೂರ ಇಡುವುದು, ಇಂತಹ ಆ್ಯಪ್​ಗಳ ಬಳಕೆಯಿಂದ ನಿಷೇಧಿಸುವುದು, ಅವರನ್ನು ಗದರುವುದು, ಭಯದಲ್ಲಿಡುವ ಪ್ರಯತ್ನ ಕೂಡ ದೊಡ್ಡ ತೊಂದರೆಗೂ ಸಿಲುಕಿಸಬಹುದು. ಪೋಷಕರು ಇಲ್ಲಿ ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ಕುಳಿತು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿ ಹೇಳುವ ಪ್ರಯತ್ನಕ್ಕೆ ಮುಂದಾಗಬೇಕು. ಮೊಬೈಲ್ ಬಳಕೆಯಿಂದ ಆಗುವ ಪರಿಣಾಮಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸುವುದರಿಂದ ಅವರಲ್ಲಿ ಕೆಲವು ಬದಲಾವಣೆಗಳ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹೆತ್ತವರು ಹೆಚ್ಚು ಗಮನ ಹರಿಸುವುದು ಒಳಿತು. ಇನ್ನೊಂದು ರೀತಿ ಹೇಳುವುದಾದರೆ 'ಬೀ ಅಲರ್ಟ್​'.

ಲಂಡನ್​ ಶಾಲೆಗಳಲ್ಲಿ 'ಅಡೋಲಸೆನ್ಸ್'​

Adolescence Scripts History As First Streaming Show To Top UK TV Ratings

ಈ ಸರಣಿ ತೆರೆಕಂಡ ಕೆಲವೇ ದಿನಗಳಲ್ಲಿ ವಿಶ್ವವ್ಯಾಪಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಚಿತ್ರಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್​ನ ಸದನದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ದೊಡ್ಡ ಚರ್ಚೆಯೇ ನಡೆದಿದೆ. ಮಕ್ಕಳ ಮನಸ್ಥಿತಿ ಯಾವ ಹಂತಕ್ಕೋಗಿದೆ, ಸೋಷಿಯಲ್ ಮೀಡಿಯಾ ಪ್ರಭಾವ ಅವರ ಬದುಕಿಗೆ ಹೇಗೆ ಮುಳ್ಳಾಗಿದೆ ಎಂಬುದನ್ನು ಚರ್ಚಿಸಲಾಯಿತು. ಈ ವೇಳೆ ಪ್ರಧಾನಿ ಕೀರ್ ಸ್ಟಾರ್ಮರ್ ಪ್ರತಿಕ್ರಿಯಿಸಿ, "ಅಡೋಲಸೆನ್ಸ್​ ಸರಣಿಯನ್ನು ಪ್ರತಿ ಶಾಲೆಗಳಲ್ಲಿಯೂ ತೋರಿಸಬೇಕು. ಇದನ್ನು ಪೋಷಕರು ಸಹ ವೀಕ್ಷಿಸಬೇಕು" ಎಂದು ಕರೆ ನೀಡಿದ್ದರು. ಅಂತೆಯೇ ಸೋಮವಾರ (ಮಾ.31) ಈ ಚಿತ್ರ ಯುಕೆಯಲ್ಲಿನ ಬಹುತೇಕ ಶಾಲೆಗಳಲ್ಲಿ ಪ್ರಸಾರವಾಗಿದೆ. ಶಾಲಾ ಆಡಳಿತ, ಸಚಿವರು ಸೇರಿದಂತೆ ಸಾಮಾನ್ಯ ಜನರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net