ಚುನಾವಣಾ ತಕರಾರು ಅರ್ಜಿ ತೀರ್ಪು ಮುಂದೂಡಿಕೆ

Published on

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ತಕರಾರು ಅರ್ಜಿಯ ಮೇಲಿನ ವಾದ-ಪ್ರತಿವಾದ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ತೀರ್ಪು ಘೋಷಣೆಯನ್ನು ಅ.5ಕ್ಕೆ ಮುಂದೂಡಲಾಗಿದೆ.

ಮಂಜೇಶ್ವರ ವಿಧಾನಸಭೆಗೆ 2021ರಲ್ಲಿ ನಡೆದ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಸುಂದರ ಅವರಿಗೆ 2.5 ಲಕ್ಷ ರೂ. ನಗದು, ಮೊಬೈಲ್ ಫೋನ್ ನೀಡಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿರುವುದಾಗಿ ಆರೋಪಿಸಿ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗದಿಂದ ಸ್ಪರ್ಧಿಸಿದ್ದ ವಿ.ವಿ.ರಮೇಶನ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪಕ್ಷದ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಬಿಜೆಪಿ ಮುಖಂಡರಾದ ವಿ.ಬಾಲಕೃಷ್ಣ ಶೆಟ್ಟಿ, ಸುನೀಲ್ ನಾಯ್ಕ, ಮಣಿಕಂಠ ರೈ, ವೈ.ಸುರೇಶ್, ಲೋಕೇಶ್ ನೋಂಡ ಒಳಗೊಂಡಂತೆ ಆರು ಮಂದಿ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನಂತರ ಪ್ರಕರಣವನ್ನು ಜಿಲ್ಲಾ ಕ್ರೈಂ ಬ್ರಾಂಚ್‌ಗೆ ಹಸ್ತಂತರಿಸಲಾಗಿತ್ತು. ತಮ್ಮ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ವಾಸ್ತವ ವಿರುದ್ಧವಾಗಿದ್ದು, ಕಾನೂನು ಪ್ರಕಾರ ಇದು ನೆಲೆನಿಲ್ಲದು ಎಂದು ಪ್ರಕರಣ ರದ್ದುಪಡಿಸುವಂತೆ ಕೋರಿ ಆರೋಪಿಗಳಲ್ಲಿ ಒಬ್ಬರಾದ ಕೆ.ಸುರೇಂದ್ರನ್ ಸೇರಿದಂತೆ ಇತರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net