ಬಂಟ್ವಾಳ: ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶ, ಸಾರಥ್ಯದಲ್ಲಿ ನಡೆಯುವ ಮಂಗಳೂರು ದಸರಾ ದೇಶಕ್ಕೆ ಫೇಮಸ್, ದಸರಾದ ಅಷ್ಟೂ ದಿನಗಳಲ್ಲಿ ಕುದ್ರೋಳಿ ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗುವ ಶ್ರೀಶಾರದಾ ಮಾತೆಯನ್ನು ವೀಕ್ಷಿಸಲು ದೇಶ, ವಿದೇಶಗಳಿಂದ ಆಗಮಿಸುತ್ತಾರೆ. ಕೊನೆ ದಿನದಂದು ಶ್ರೀ ಶಾರದಾ ಮಾತೆ ಮೆರವಣಿಗೆಯಲ್ಲಿ ಐವತ್ತಕ್ಕೂ ಅಧಿಕ ಸ್ತಬ್ಧಚಿತ್ರ ನೋಡಿ ಅವುಗಳ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಆದರೆ ಅವುಗಳ ಸಿದ್ಧತೆಯಲ್ಲಿ ಕಲಾವಿದರ ಪರಿಶ್ರಮ ಅಪಾರವಾಗಿರುತ್ತದೆ.
ಈ ಬಾರಿಯ ಮಂಗಳೂರು ದಸರಾ ಮೆರವಣಿಗೆಗೆ ವಿನೂತನ ಸ್ತಬ್ಧಚಿತ್ರಕ್ಕೆ ಆದಿಯೋಗಿಯ ವಿಗ್ರಹವೊಂದು ಸಿದ್ಧಗೊಳ್ಳುತ್ತಿದೆ. ಬಂಟ್ವಾಳಕ್ಕೆ ಸಮೀಪದ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಟುವಿನ ಕಲಾಕಾರ ಮನೋಜ್ ಕನಪಾಡಿ ಅವರ ಕುಕ್ಕೆಶ್ರೀ ಕುಟೀರದಲ್ಲಿ ಆದಿಯೋಗಿಯ ವಿಗ್ರಹ ಸಿದ್ಧವಾಗುತ್ತಿದ್ದು, ಅಂತಿಮ ಹಂತದಲ್ಲಿದೆ.
ಆವೆ ಮಣ್ಣಿನಲ್ಲಿ ಮೂರ್ತಿ
ಈ ಬಾರಿ ಮಂಗಳೂರು ದಸರಾ ಸೇರಿದಂತೆ ಹಲವು ಕಡೆಗಳ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಲಿರುವ ಆದಿಯೋಗಿ ಲೇಸರ್ ಶೋ ಪ್ರದರ್ಶನಕ್ಕೆ ಮೂರ್ತಿ ಸಿದ್ಧಪಡಿಸುವ ಕಾರ್ಯದಲ್ಲಿ ಮನೋಜ್ ಮತ್ತವರ ತಂಡ ತೊಡಗಿಕೊಂಡಿದೆ. ಜಿಲ್ಲೆಯಲ್ಲಿ ಫೈಬರ್ ಆರ್ಟ್ ಕಲಾವಿದರು ಅಪರೂಪವಾಗಿದ್ದು, ಎರಡರಿಂದ ಮೂರು ತಿಂಗಳ ಸತತ ಪರಿಶ್ರಮದ ಬಳಿಕ ಇಂಥ ಮೂರ್ತಿಗಳು ಸಿದ್ದಗೊಳ್ಳುತ್ತವೆ. ಪ್ರಾರಂಭದಲ್ಲಿ ಆವೆಮಣ್ಣಿನಲ್ಲಿ ಮೂರ್ತಿ ತಯಾರಿಸಿ ಬಳಿಕ ಅದರಿಂದ ಫೈಬರ್ ಮೋಲ್ಡ್ ಸಿದ್ಧಪಡಿಸುತ್ತಾರೆ. ಮುಂದೆ ಮೌಲ್ಡ್ ಮೂಲಕ ಎಷ್ಟು ಬೇಕಾದರೂ ಮೂರ್ತಿ ಸಿದ್ಧಪಡಿಸಲು ಸಾಧ್ಯವಾಗುತ್ತದೆ.
ಬಾಲ್ಯದಲ್ಲೆ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಮನೋಜ್ ಮಂಗಳೂರಿನ ಮಹಾಲಸ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದವರು. ಬಳಿಕ ಕಲಾಕೃತಿ ರಚನೆಯಲ್ಲಿ ವೃತ್ತಿ ಆರಂಭಿಸಿದ ಅವರು ಮಣ್ಣಿನ ಮೂರ್ತಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಕ್ರಮೇಣ ಜನರಿಗೆ ಆಕರ್ಷಣೆಯಾಗುವ ಮತ್ತು ಹೆಚ್ಚು ಬಾಳಿಕೆ ಬರುವ ಫೈಬರ್ ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡರು.
ಕಾರ್ಪೆಂಟರ್, ಗಾರೆ ಕೆಲಸ, ವೆಲ್ಡಿಂಗ್ ಕೆಲಸ ಗೊತ್ತಿದ್ದಾಗ ಮಾತ್ರ ಓರ್ವ ಉತ್ತಮ ಕಲಾವಿದನಾಗಲು ಸಾಧ್ಯವಿದ್ದು, ಆತ ಒಬ್ಬ ಉತ್ತಮ ಇಂಜಿನಿಯರ್ ಕೂಡ ಆಗಿರುತ್ತಾನೆ. 20 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿದ್ದು, ಈ ಬಾರಿ ವಿಶೇಷವಾಗಿ ಮಂಗಳೂರು ದಸರಾ ಸೇರಿದಂತೆ ಇತರ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಲಿರುವ ಆದಿಯೋಗಿ ಮೂರ್ತಿ ನಮ್ಮಲ್ಲೇ ತಯಾರಾಗುತ್ತಿದೆ.
ಮನೋಜ್ ಕನಪಾಡಿ, ಕಲಾಕಾರ