ವಿವಾದದ ನಡುವೆ ಆದಿಪುರುಷ್​ ಸಿನಿಮಾ ಮೊದಲ ದಿನ ಬಾಕ್ಸ್​ಆಫೀಸ್​ನಲ್ಲಿ ಗಳಿಸಿದ್ದೆಷ್ಟು?

adipurush
Published on

ಹೈದರಾಬಾದ್​: ಪ್ರಭಾಸ್​, ಕೃತಿ ಸನೂನ್​ ಮತ್ತು ಸೈಫ್​ ಅಲಿ ಖಾನ್​ ನಟನೆಯ ಹಾಗೂ ಓಂ ರಾವತ್​ ನಿರ್ದೇಶನ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾ ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಪೌರಾಣಿಕ ಮಹಾಕಾವ್ಯ ರಾಮಾಯಣ ಆಧಾರಿತ ಈ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಸಾಕಷ್ಟು ವಿವಾದಗಳಿಗೆ ಸಿಲುಕಿದರೂ ಮೊದಲ ದಿನವೇ ದಾಖಲೆಯ ಕಲೆಕ್ಷನ್​ ಮಾಡಿದೆ.

ಬಾಕ್ಸ್​ ಆಫೀಸ್​ ವರದಿಗಳ ಪ್ರಕಾರ ಆದಿಪುರುಷ್​ ಸಿನಿಮಾ ಜಾಗತಿಕವಾಗಿ ಮೊದಲ ದಿನ 120 ಕೋಟಿ ರೂ. ಕಲೆಕ್ಷನ್​ ಮಾಡಿದೆಯಂತೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ ಕೂಡ ನಟ ಪ್ರಭಾಸ್​ ಅವರ ಸ್ಟಾರ್​ಡಮ್​ ಚಿತ್ರದ ಮೇಲೆ ಸಂಪೂರ್ಣ ಪ್ರಭಾವ ಬೀರಿದೆ. ಬಾಹುಬಲಿ 2, ಸಾಹೋ ಬಳಿಕ ಇದೀಗ ಆದಿಪುರುಷ್​ ಸಿನಿಮಾ ಮೊದಲ ದಿನವೇ 100 ಕೋಟಿ ರೂ. ದಾಟಿದೆ. ಈ ಮೂಲಕ ಸಿನಿರಂಗದಲ್ಲಿ ನಟ ಪ್ರಭಾಸ್​ ಭಾರೀ ದಾಖಲೆ ಬರೆದಿದ್ದಾರೆ.

ಮೊದಲ ದಿನ ಎಲ್ಲೆಲ್ಲಿ? ಎಷ್ಟೆಷ್ಟು? ಕಲೆಕ್ಷನ್​ ಆಗಿದೆ

* ಆಂಧ್ರ ಪ್ರದೇಶ - 25 ಕೋಟಿ ರೂ.

* ತೆಲಂಗಾಣ - 20 ಕೋಟಿ ರೂ.

* ಕರ್ನಾಟಕ - 7 ಕೋಟಿ ರೂ.

* ಕೇರಳ ಮತ್ತು ತಮಿಳುನಾಡು - 2 ಕೋಟಿ ರೂ.

* ಉತ್ತರ ಭಾರತ - 40 ಕೋಟಿ ರೂ.

* ವಿದೇಶ (ಓವರ್​ಸೀಸ್​) - 25 ಕೋಟಿ ರೂ.

ಒಟ್ಟು 120 ಕೋಟಿ ರೂ. ಕಲೆಕ್ಷನ್​ ಮೊದಲ ದಿನವೇ ಆಗಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರವಾಗಿದೆ. ಈ ಸಿನಿಮಾವನ್ನು 500 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್​ ಹೀಗೆ ಮುಂದುವರಿದರೆ, ಆದಿಪುರಷ್​ ಚಿತ್ರತಂಡ ನಷ್ಟದಿಂದ ಪಾರಾಗಲಿದೆ. ಆದರೆ, ಸಿನಿಮಾ ಬಗ್ಗೆ ಮಿಶ್ರಪ್ರತಿಕ್ರಿಯೆ ಹಾಗೂ ವಿವಾದಗಳು ಎದುರಾಗಿರುವುದರಿಂದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ದೆಹಲಿ ಹೈಕೋರ್ಟ್​ನಲ್ಲಿ ಪಿಐಎಲ್​

ಈಗಾಗಲೇ ಆದಿಪುರುಷ್​ ಸಿನಿಮಾ ವಿರುದ್ಧ ಹಿಂದು ಸೇನಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ ಅವರು ದೆಹಲಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​)ಯನ್ನು ಸಲ್ಲಿಸಿದ್ದಾರೆ. ಈ ಚಿತ್ರವು ಧಾರ್ಮಿಕ ಮುಖಂಡರು/ಪಾತ್ರಗಳು/ಆಕೃತಿಗಳನ್ನು ಅಸಮರ್ಪಕವಾಗಿ ಮತ್ತು ಅನುಚಿತವಾಗಿ ಚಿತ್ರಿಸುವ ಮೂಲಕ ಹಿಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಮುಖ್ಯ ಪಾತ್ರಧಾರಿ ರಾಮನು ಸೇರಿದಂತೆ ಎಲ್ಲ ಪಾತ್ರಗಳ ಬಗ್ಗೆ ಸಿನಿಮಾದಲ್ಲಿ ತಪ್ಪಾದ ವಿವರಣೆಯನ್ನು ನೀಡಲಾಗಿದೆ. ವಾಲ್ಮಿಕಿ ಮಹರ್ಷಿ ಮತ್ತು ತುಳಸಿದಾಸರು ಬರೆದಂತಹ ಪಾತ್ರಗಳಿಗೂ ಚಿತ್ರದಲ್ಲಿ ಚಿತ್ರೀಕರಿಸಿರುವ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇದೆ ಮತ್ತು ತಪ್ಪಾಗಿ ಬಿಂಬಿಸಲಾಗಿದೆ ಎಂದು ಪಿಐಎಲ್​ನಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ ಪ್ರದರ್ಶನಕ್ಕಾಗಿ ಆದಿಪುರುಷ್​ ಚಿತ್ರವನ್ನು ಪ್ರಮಾಣೀಕರಿಸದಂತೆ ಮನವಿ ಮಾಡಿಕೊಂಡಿದ್ದಾರೆ.

ನೇಪಾಳದಲ್ಲಿ ಬ್ಯಾನ್​

ಆದಿಪುರುಷ್ ಸಿನಿಮಾ ತಂಡ ಸೀತಾ ದೇವಿಯ ಜನ್ಮಸ್ಥಳ ವಿಚಾರದಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಸಿನಿಮಾದ ಒಂದು ಡೈಲಾಗ್​ ವಿವಾದಕ್ಕೆ ಕಾರಣವಾಗಿದೆ. ಸೀತೆ ಭಾರತದವಳು ಎನ್ನುವ ಡೈಲಾಗ್​ನಿಂದ ಆದಿಪುರುಷನಿಗೆ ನೇಪಾಳದಲ್ಲಿ ಬ್ಯಾನ್ ಬಿಸಿ ತಟ್ಟಿದೆ. ಅಲ್ಲದೆ, ನೇಪಾಳದ ಕಠ್ಮಂಡುವಿನ ಮೇಯರ್ ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಸೀತೆ ಹುಟ್ಟಿದ್ದು ನೇಪಾಳದಲ್ಲಿ, ಆ ಬಳಿಕ ರಾಮ‌ ಆಕೆಯನ್ನು ವಿವಾಹವಾಗಿ ಕರೆದುಕೊಂಡು ಹೋದರು. ಹೀಗಾಗಿ ಸಿನಿಮಾದಲ್ಲಿನ ಡೈಲಾಗ್ ತೆಗೆದು ಹಾಕುವಂತೆ ಒತ್ತಾಯಿಸಲಾಗಿದೆ. ಇಲ್ಲವಾದರೆ ನೇಪಾಳದಲ್ಲಿ ಆದಿಪುರುಷ ಸಿನಿಮಾ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net