ಕಿರುಚಿತ್ರಗಳಿಂದ ಬೆಳ್ಳಿತೆರೆಗೆ ತೇಜಸ್ವಿನಿ ಗೌಡ ; ಲೈಫ್ ಆಫ್​ ಮೃದುಲ ಚಿತ್ರದಲ್ಲಿ ನಟನೆ

FotoJetfbxcv
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ತೇಜಸ್ವಿನಿ ಗೌಡ. ಮೂಲತಃ ಬೆಂಗಳೂರಿನ ಈ ಹುಡುಗಿ ಮಾಸ್ಟರ್​ ಡಿಗ್ರಿ ಓದಿ, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾಕೆ. ಆದರೆ, ಸಿನಿಮಾ ಕನಸು ಅವರನ್ನು ಬಣ್ಣದ ಲೋಕಕ್ಕೆ ಕರೆದುಕೊಂಡುಬಂದಿದೆ. ಹಾಗಂತ ತೇಜಸ್ವಿನಿ ಕೆಲಸ ಬಿಟ್ಟುಬಂದಿದ್ದಾರೆ ಅಂತಲ್ಲ. ಬದಲಾಗಿ ಕೆಲಸದ ಜತೆಗೆ ಕನಸನ್ನೂ ಹಿಂಬಾಲಿಸುತ್ತಿದ್ದಾರೆ. ತೇಜಸ್ವಿನಿ ತಂದೆ ಉದ್ಯಮದಲ್ಲಿ ತೊಡಗಿದ್ದಾರೆ. ತಂದೆ, ತಾಯಿ ಇಬ್ಬರಿಗೂ ಮಗಳು ಚಿತ್ರರಂಗಕ್ಕೆ ಬರುವುದು ಇಷ್ಟವಿರಲಿಲ್ಲವಂತೆ. ಆದರೆ, ‘ಮಗಳ ಆಸೆಗೆ ಅಡ್ಡಿಪಡಿಸುವುದು ಬೇಡ ಅಂತ ಒಪ್ಪಿಕೊಂಡರು‘ ಅಂತಾರೆ ತೇಜಸ್ವಿನಿ

ಈಗಾಗಲೇ ‘ರಾಕ್​ ಆ್ಯಂಡ್​ ರೋಲ್​‘, ‘ನೆನಪಾದಳು ಶಾಕುಂತಲೆ‘ ಚಿತ್ರಗಳಲ್ಲಿ ನಟಿಸಿರುವ ತೇಜಸ್ವಿನಿ, ಸದ್ಯ ‘ಲೈಫ್​ ಆಫ್​ ಮೃದುಲ‘ ಎಂಬ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಇದು ಚೇತನ್​ ತ್ರಿವೇಣ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ಚಿತ್ರ. ಈ ಹಿಂದೆ ಐದಾರು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಚೇತನ್​ಗೆ ‘ಲೈಫ್​ ಆಫ್​ ಮೃದುಲ‘ ನಿರ್ದೇಶಕನಾಗಿ ಚೊಚ್ಚಲ ಪ್ರಯತ್ನ. ಅವರ ಕಿರುಚಿತ್ರಗಳಲ್ಲಿ ನಟಿಸಿರುವ ತೇಜಸ್ವಿನಿ, ಈ ಚಿತ್ರದಲ್ಲಿ ರಿಪೋರ್ಟರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ನಾನು ನಟಿಸಿರುವ ಮೂರು ಚಿತ್ರಗಳಲ್ಲೂ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಮುಂದೆಯೂ ಡಿಫರೆಂಟ್​ ರೋಲ್​ಗಳಲ್ಲಿ ಅಭಿನಯಿಸುವ ಆಸೆಯಿದೆ. ನನಗೆ ‘ಸಿಪಾಯಿ‘ ಚಿತ್ರದ ಸೌಂದರ್ಯ ಸ್ಪೂರ್ತಿ. ಅನುಷ್ಕಾ ಶೆಟ್ಟಿಯವರ ‘ಆರುಂಧತಿ‘ಯಂತ ಪಾತ್ರದಲ್ಲಿ ನಟಿಸುವ ಆಸೆ. ಕಥೆ ಚೆನ್ನಾಗಿದ್ದು, ಪಾತ್ರಕ್ಕೆ ಪ್ರಾಮುಖ್ಯವಿದ್ದರೆ ಬೋಲ್ಡ್​ ಆಗಿ ನಟಿಸಲೂ ರೆಡಿ. ಡಾ. ವಿಷ್ಣುವರ್ಧನ್​, ಯಶ್​, ಪ್ರಭಾಸ್​ ಸಿನಿಮಾಗಳು ಅಂದರೆ ನನಗೆ ಪಂಚಪ್ರಾಣ. ಕೆಲ ಸಿನಿಮಾಗಳ ಮಾತುಕತೆ ನಡೆಯುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ತೇಜಸ್ವಿನಿ ಗೌಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net