ಮತ್ತೆ ಕನ್ನಡಕ್ಕೆ ಶಿಲ್ಪಾ ಶೆಟ್ಟಿ?; ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಸಾಧ್ಯತೆ

Shilpa Shetty
Published on

ಬೆಂಗಳೂರು: ‘ಜೋಗಿ’ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರದ ಶೀರ್ಷಿಕೆ ಇದೇ 26ರಂದು ಘೋಷಣೆಯಾಗಲಿದೆ. ಈ ಮಧ್ಯೆ, ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬಂದಿದೆ.

ಕೆವಿಎನ್ ಪ್ರೊಡಕ್ಷನ್ಸ್ ನಿರ್ವಣದ ಹೆಸರಿಡದ ಈ ಚಿತ್ರದ ಮುಹೂರ್ತ ಏ. 24ರಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸ್ವಲ್ಪ ತಡವಾಗಿದ್ದು, ಅಕ್ಟೋಬರ್​ನಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನು, ಪ್ರೇಮ್ ಈ ಚಿತ್ರದ ತಾರಾಗಣವನ್ನು ಅಂತಿಮಗೊಳಿಸುವುದರಲ್ಲಿ ಬಿಜಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ, ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈಗ ಶಿಲ್ಪಾ ಶೆಟ್ಟಿ ಹೆಸರು ಸಹ ಕೇಳಿಬಂದಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ, ಸಂಜಯ್ ಮತ್ತು ಶಿಲ್ಪಾ ಶೆಟ್ಟಿ ಅಭಿನಯಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ, ಚಿತ್ರತಂಡದಿಂದ ಈ ಕುರಿತು ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಶಿಲ್ಪಾ ಒಪ್ಪಿದರೆ, ‘ಪ್ರೀತ್ಸೋದ್ ತಪ್ಪಾ’ ಮತ್ತು ‘ಆಟೋ ಶಂಕರ್’ ನಂತರ ಇದು ಕನ್ನಡದಲ್ಲಿ ಅವರ ಮೂರನೆಯ ಚಿತ್ರವಾಗಲಿದೆ.

ಅಂದಹಾಗೆ, ಇದು ಬೆಂಗಳೂರಿನ ಅಂಡರ್​ವರ್ಲ್ಡ್ ಕುರಿತಾದ ಚಿತ್ರವಾಗಿದ್ದು, 70ರ ಕಾಲಘಟ್ಟದ ಕಥೆ ಈ ಚಿತ್ರದಲ್ಲಿರಲಿದೆಯಂತೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net