ಪಾರ್ಕಿಂಗ್ ವಿಚಾರ ಪ್ರಶ್ನಿಸಿದ್ದಕ್ಕೆ ನಟಿ ಸಂಜನಾಗೆ ಕೊಲೆ ಬೆದರಿಕೆ; ಎಫ್​ಐಆರ್ ದಾಖಲು

Sanjana Galrani
Published on

ಬೆಂಗಳೂರು: ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದ ವಿಚಾರ ಪ್ರಶ್ನಿಸಿದ್ದಕ್ಕೆ ಎದುರು ಮನೆಯವರು ಕೊಲೆ ಬೆದರಿಕೆ ಹಾಕಿ, ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ನಟಿ ಸಂಜನಾ ಗಲ್ರಾನಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ಸೆಪ್ಟೆಂಬರ್ 12ರ ಸಂಜೆ 5.30ಕ್ಕೆ ನಡೆದಿರುವ ಘಟನೆಯಾಗಿದ್ದು, ಇದೀಗ 1ನೇ ಎಸಿಎಂಎಂ ನ್ಯಾಯಾಲಯದ ಸೂಚನೆಯ ಮೇರೆಗೆ ಇಂದಿರಾನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಇಂದಿರಾನಗರದ ಧೂಪನಹಳ್ಳಿಯಲ್ಲಿ ತಮ್ಮ ಕುಟುಂಬದೊಂದಿಗೆ ಸಂಜನಾ ಗಲ್ರಾನಿ ವಾಸವಿದ್ದು, ಇವರ ಎದುರು ಮನೆಯಲ್ಲಿ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರ ಮನೆಯೂ ಇದೆ. ಸುಮಾರು ಆರು ವಾಹನಗಳನ್ನು ಹೊಂದಿರುವ ರಾಜಣ್ಣ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ಕಾರುಗಳನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಅಕ್ಕಪಕ್ಕದವರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸಂಜನಾ ಗಲ್ರಾನಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ತಾವು ಇಲ್ಲಿ ನಲವತ್ತು ವರ್ಷಗಳಿಂದ ವಾಸಿಸುತ್ತಿರುವವರು, ತಮಗೆ ಇಷ್ಟ ಬಂದಂತೆ ವಾಹನಗಳನ್ನ ನಿಲ್ಲಿಸುತ್ತೇವೆ. ನಮ್ಮನ್ನು ಪ್ರಶ್ನೆ ಮಾಡಿದರೆ ಕೊಲೆ ಮಾಡುತ್ತೇವೆ’ ಅಂತಾ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಜತೆಗೆ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ದೂರಿನಲ್ಲಿ ಸಂಜನಾ ಗಲ್ರಾನಿ ಆರೋಪಿಸಿದ್ದಾರೆ. ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net