More

    ಇರು ಅಪ್ಪಂಗೆ ಹೇಳ್ತಿನಿ ಅಂತ ಹರಿಪ್ರಿಯಾ ಹೇಳ್ತಿರೋದು ಯಾರಿಗೆ ಗೊತ್ತಾ?

    ಬೆಂಗಳೂರು: ಲಾಕ್​ ಡೌನ್​ ಹಿನ್ನಲೆಯಲ್ಲಿ ನಟಿ ಹರಿಪ್ರಿಯಾ ನಟನೆ ಬದಿಗಿಟ್ಟು, ಬರವಣಿಗೆಯತ್ತ ಚಿತ್ತ ಹರಿಸಿದ್ದಾರೆ. ಬೇಬ್​ ನೋಸ್​ ಎಂಬ ಬ್ಲಾಗ್​ ತೆರೆದು ಅದರಲ್ಲಿ ನಿತ್ಯ ತೋಚಿದ್ದನ್ನು ಗೀಚುತ್ತ, ಅಭಿಮಾನಿಗಳ ಜತೆಗೆ ಸಂಪರ್ಕದಲ್ಲಿದ್ದಾರೆ. ಶೂಟಿಂಗ್​ ಅನುಭವಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬಗ್ಗೆ ಗೊತ್ತಿರದ ಅದೆಷ್ಟೋ ವಿಚಾರಗಳನ್ನು ಬ್ಲಾಗ್​ ಮೂಲಕ ಹೇಳಿಕೊಳ್ಳುತ್ತಿದ್ದಾರೆ. ಇದೀಗ ತಂದೆಯ ಬಗ್ಗೆ ಹೇಳಿಕೊಂಡಿದ್ದಾರೆ. ಆ ಬರಹ ಇಲ್ಲಿದೆ.
    ಇಡೀ ಸಂಸಾರ, ಅಂದ್ರೆ ಮಡದಿ, ಮಕ್ಕಳು, ತಂದೆ-ತಾಯಿ, ತಂಗಿ ಅಥವಾ ತಮ್ಮ ಮತ್ತಿತರರ ಬೇಕು-ಬೇಡಗಳನ್ನು ನಿಭಾಯಿಸುವವನು ತಂದೆ. ಎಲ್ಲಿಯವರೆಗೆ? ಕೊನೆಯವರೆಗೂ. ಎಲ್ಲರ ಜವಾಬ್ದಾರಿಯನ್ನು ಹೊತ್ತು ನಿಲ್ಲುವವ ತಂದೆ. ಇದು ಅವನ ಹೆಮ್ಮೆಯೂ ಹೌದು, ತಪ್ಪಿಸಿಕೊಳ್ಳಲು ಆಗದ ಜವಾಬ್ದಾರಿಯೂ ಹೌದು. ಏಕೆಂದರೆ, ಈತ ಎಲ್ಲರ ಬೆನ್ನೆಲುಬು. ಕಷ್ಟಕ್ಕೆ, ಸುಖಕ್ಕೆ ಆಗುವ ಮನೆಯ ದಿಕ್ಕು.
    (ನನಗೆ ಬಾಲ್ಯ ನೆನಪಾಗುತ್ತೆ. ನನ್ನ ಸ್ನೇಹಿತರೊಂದಿಗೆ ಜಗಳ ಆದಾಗ, ‘ಇರು ಅಪ್ಪಂಗೆ ಹೇಳ್ತೀನಿ’ ಅಂತಿದ್ದೆ. ಅಮ್ಮಂಗೆ ಏನಾದರೂ ಬೇಜಾರಾಗಿದ್ರೆ ಅಪ್ಪ ಬರೋವರ್ಗೂ ಕಾದು, ಅವರ್ಗೆ ಹೇಳ್ಕೊಂಡು ಸಮಾಧಾನ ಆಗ್ತಿದ್ರು. ಎಲ್ಲರಿಗೂ.. ಏನೇ ಬೇಕಂದ್ರೂ ಅಪ್ಪ ಇದಾರೆ ಅನ್ನೋ ಧೈರ್ಯ.)
    ಮನೆಯಲ್ಲಿರುವವರೆಲ್ಲ ಸಂತೋಷವಾಗಿರುವುದರ ಹಿಂದೆ ಈತನ ಸಾಕಷ್ಟು ಪರಿಶ್ರಮ ಇರುತ್ತೆ. ಪ್ರತಿಯೊಂದು ವ್ಯಕ್ತಿಗೂ ಆರ್ಥಿಕತೆಯಲ್ಲೋ, ಮನಸಿನ ಸ್ಥಿತಿಯಲ್ಲೋ ಏಳು-ಬೀಳುಗಳಿರುತ್ತವೆ‌. ಆದರೆ ನಮ್ಮ ಖುಷಿಯಲ್ಲಿ ಅವರ ಎಷ್ಟೋ ನೋವನ್ನು ಮರೆಯುತ್ತಾರೆ. ನಾವು ನಮ್ಮ ಪ್ರತಿದಿನದ ಗೊಂದಲಗಳ ಮಧ್ಯ ಗಮನಿಸಲ್ಲ.
    ತಂದೆಯಾದವರು ಆ ಸ್ಥಾನದಲ್ಲಿರುವಾಗ ಅವರ ಕಷ್ಟಗಳನ್ನು ತೋರಿಸಲು ಇಷ್ಟಪಡಲ್ಲ. ‘ಮನೆಯ ಪಿಲ್ಲರ್ ವೀಕಾಗಿದೆ ಅಂದ್ರೆ ಬೇರೆಯವರು ಗಾಬರಿ ಆಗ್ತಾರೆ’ ಅಂತ. ಆದ್ರೆ ನಾವು ಅದನ್ನು ಅರಿತು, ನಾವೆಲ್ಲರೂ ಇದ್ದೇವೆಂದು ಪರೋಕ್ಷವಾಗಿ ಭರವಸೆ ಕೊಡಬೇಕು.
    ಕೆಲವು ಸಂದರ್ಭಗಳಲ್ಲಿ ಅದೆಂಥ ಅರಸನಾದರೂ ಅಸಹಾಯಕನಾಗುತ್ತಾನೆ. ಎಲ್ಲ ಕುಟುಂಬಸ್ಥರೂ ಒಬ್ಬರ ಮೇಲೇ ಅವಲಂಬಿಸಿದಾಗ, ಕೆಲವೊಮ್ಮೆ ಹೊರೆ ಅನಿಸುತ್ತದೇನೋ? ಆತ ಸಂಸಾರದ ಕಣ್ಣಲ್ಲಿ ಹೀರೋ. ಆದರೆ ತಂದೆಯಾದವರು ಕೂಡ ಎಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿ. ಏನೇ ಆಗಲಿ, ಸಂಸಾರದ ದೋಣಿಯನ್ನು ದಡಕ್ಕೆ ಸೇರಿಸುತ್ತಾನೆ. ಈ ತಂದೆ ಅನ್ನೋ ಸ್ಥಾನಾನ ಗಂಡೇ ಅಲ್ಲ, ಎಷ್ಟೋ ಹೆಣ್ಣು ಮಕ್ಕಳೂ ತುಂಬುತ್ತಿದ್ದಾರೆ. ಹೊರಜಗತ್ತಿನ ಜಂಜಾಟದಲ್ಲೂ ಗೆದ್ದು, ಮನೆ ಜವಾಬ್ದಾರಿಯನ್ನೂ ಸಾಗಿಸುತ್ತಿದ್ದಾರೆ. ‘ತಂದೆ’ ಅನ್ನೋ ಸ್ಥಾನವನ್ನು ತುಂಬುತ್ತಿರುವ ಪ್ರತಿಯೊಂದು ವ್ಯಕ್ತಿಗೂ ನನ್ನದೊಂದು ದೊಡ್ಡ ಸಲಾಮ್​…ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts